ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ನಡುವೆ ಹಾಲಿ ಆವೃತ್ತಿಯ ಐಪಿಎಲ್ನ (IPL 2023) ಲೀಗ್ ಹಂತದ ಕೊನೇ ಪಂದ್ಯ ನಡೆಯಲಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ ಮಳೆಯ ಆತಂಕದ ನಡುವೆಯೂ ಈ ಪಂದ್ಯದಲ್ಲಿ ಗೆದ್ದರಷ್ಟೇ ಆರ್ಸಿಬಿ ತಂಡಕ್ಕೆ ಪ್ಲೇಆಫ್ ಅವಕಾಶ ಖಚಿತವಾಗಲಿದೆ. ಹೀಗಾಗಿ ಗೆಲುವಿನ ಮೂಲಕ ಅಭಿಯಾನ ಮುಂದುವರಿಸಲು ಫಾಫ್ ಡು ಪ್ಲೆಸಿಸ್ ಬಳಗ ಸಜ್ಜಾಗಿದೆ.
ಹಿಂದಿನ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಎಂಟು ವಿಕೆಟ್ಗಳ ಅದ್ಭುತ ಗೆಲುವು ಸಾಧಿಸಿದ ಹೊರತಾಗಿಯೂ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ಪ್ಲೇಆಫ್ ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾಗಿದೆ. ಮತ್ತೊಂದೆಡೆ, ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ (ಜಿಟಿ) ತಮ್ಮ ಪ್ಲೇಆಫ್ ಸ್ಥಾನ ಖಚಿತಪಡಿಸಿದ್ದು ಮಾತ್ರವಲ್ಲದೆ ಕ್ವಾಲಿಫೈಯರ್ 1ರಲ್ಲಿ ತಮ್ಮ ಸ್ಥಾನ ಕಾಯ್ದಿರಿಸಿದ ಮೊದಲ ತಂಡ ಎನಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ಬಳಗ 13 ಪಂದ್ಯಗಳಲ್ಲಿ 18 ಅಂಕಗಳೊಂದಿಗೆ ಐಪಿಎಲ್ ಪಾಯಿಂಟ್ಸ್ ಟೇಬಲ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಇನ್ನೊಂದೆಡೆ ಮೆನ್ ಇನ್ ರೆಡ್ ಆ್ಯಂಡ್ ಗೋಲ್ಡ್ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ ಮತ್ತು 0.180 ನೆಟ್ ರನ್ ರೇಟ್ ಹೊಂದಿದೆ.
ಇತ್ತಂಡಗಳ ಮುಖಾಮುಖಿ ದಾಖಲೆಗಳ ಬಗ್ಗೆ ಹೇಳುವುದಾದರೆ ಎರಡು ಸಂದರ್ಭಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಎರಡೂ ತಂಡಗಳು ತಲಾ ಒಂದನ್ನು ಗೆದ್ದಿವೆ. ಮೇ 21ರ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮತ್ತೊಂದು ಬಾರಿ ಗೆಲುವಿಗಾಗಿ ಹೋರಾಟ ನಡೆಸಲಿದೆ.
ಪಿಚ್ ಹೇಗಿದೆ?
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಗಾತ್ರದಲ್ಲಿ ಚಿಕ್ಕದಾಗಿದ್ದು ಬ್ಯಾಟ್ಸ್ಮನ್ಗಳ ಸ್ವರ್ಗ. ಬೌಲರ್ಗಳಿಗೆ ಇಲ್ಲಿ ಎದುರಾಳಿಗಳನ್ನು ಕಟ್ಟಿ ಹಾಕಲು ಕನಿಷ್ಠ ಅವಕಾಶಗಳಿವೆ. ಹೀಗಾಗಿ ಹಾಲಿ ಆವೃತ್ತಿಯ ಐಪಿಎಲ್ನ ಕೊನೇ ಪಂದ್ಯದಲ್ಲಿ ರನ್ ಮಳೆ ಸುರಿಯುವ ಸಾಧ್ಯತೆಗಳಿಗೆ. 200 ರನ್ ಪೇರಿಸಿದರೂ ಇದಲ್ಲಿ ದೊಡ್ಡ ಮೊತ್ತ ಎನಿಸಿಕೊಳ್ಳದು.
ಮಳೆ ಸಾಧ್ಯತೆ
ಬೆಂಗಳೂರಿನಲ್ಲಿ ಶನಿವಾರ (ಮೇ20ರಂದು) ಸಂಜೆ ಜೋರಾಗಿ ಮಳೆ ಸುರಿದಿದೆ. ಅದೇ ಮಾದರಿಯ ಮಳೆಯನ್ನು ಭಾನುವಾರವೂ ನಿರೀಕ್ಷಿಸಬಹುದಾಗಿದೆ. ಮಳೆ ಬಂದು ಪಂದ್ಯ ರದ್ದಾರೆ ಆರ್ಸಿಬಿ ತಂಡದ ಪ್ಲೇಆಫ್ ಕನಸು ನುಚ್ಚು ನೂರಾಗಲಿದೆ.
ಇತ್ತಂಡಗಳ ಆಡುವ ಬಳಗ ಇಂತಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್ವೆಲ್, ಮಹಿಪಾಲ್ ಲಾಮ್ರೊರ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಸುಯಾಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್ವುಡ್.
ಗುಜರಾತ್ ಟೈಟನ್ಸ್: ಶುಭಮನ್ ಗಿಲ್, ವೃದ್ಧಿಮಾನ್ ಸಾಹ, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ದಸುನ್ ಶನಕಾ, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್.
ಇತ್ತಂಡಗಳ ಮುಖಾಮುಖಿ
ಒಟ್ಟು ಮುಖಾಮುಖಿ- 02 ಪಂದ್ಯಗಳು
ಆರ್ಸಿಬಿ ಜಯ- 01
ಗುಜರಾತ್ ಜಯ- 01
ಪಂದ್ಯದ ನೇರ ಪ್ರಸಾರದ ವಿವರಗಳು
ಪಂದ್ಯಸ ಸಮಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್ಸೈಟ್.