Site icon Vistara News

IPL 2023: ಆರನೇ ಬಾರಿ ಕಪ್​ ಎತ್ತಿ ಮೆರೆದಾಡೀತೆ ಮುಂಬೈ?

Mumbai Indians

#image_title

ಮುಂಬಯಿ: ಐಪಿಎಲ್​ನ ಅತ್ಯಂತ ಯಶಸ್ವಿ ತಂಡ ಎಂಬ ಪ್ರಸಿದ್ಧಿ ಪಡೆದಿರುವ ಮುಂಬೈ ಇಂಡಿಯನ್ಸ್​ ಈ ಬಾರಿಯೂ ಪ್ಲೇ ಆಫ್​ ಪ್ರವೇಶ ಪಡೆದಿದೆ. ಕಪ್​ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದೆ. 15 ವರ್ಷಗಳ ಐಪಿಎಲ್‌ ಇತಿಹಾಸದಲ್ಲಿ ಮುಂಬೈ ತಂಡದ ಪ್ರದರ್ಶನ ಹೇಗಿತ್ತು, ಎಷ್ಟು ಬಾರಿ ತಂಡ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಈ ಬಾರಿ ತಂಡದ ಪ್ರದರ್ಶನ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಂತಿದೆ.

ಸಚಿನ್​ ಸಾರಥ್ಯದಲ್ಲಿ ಮೊದಲ ಫೈನಲ್​

ಮುಂಬೈ ಇಂಡಿಯನ್ಸ್​ ತಂಡ ಐಪಿಎಲ್​ನಲ್ಲಿ ಮೊದಲ ಬಾರಿಗೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರ ನಾಯಕತ್ವದಲ್ಲಿ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸಿತ್ತು. 2010ರಲ್ಲಿ ನಡೆದ ಮೂರನೇ ಆವೃತ್ತಿಯ ಐಪಿಎಲ್​ ಟೂರ್ನಿ ಇದಾಗಿತ್ತು. ಮುಂಬೈಯ ಡಿ.ವೈ ಪಾಟೀಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ 168 ರನ್​ ಗಳಿಸಿತ್ತು. ಆದರೆ ಈ ಸಣ್ಣ ಮೊತ್ತವನ್ನು ಬೆನ್ನಟ್ಟುವಲ್ಲಿ ಎಡವಿದ ಮುಂಬೈ 22 ರನ್​ ಅಂತರದಿಂದ ಸೋಲು ಕಂಡು ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿತು. ಧೋನಿ ಅವರು ಚೊಚ್ಚಲ ಐಪಿಎಲ್​ ಟ್ರೋಪಿ ಎತ್ತಿ ಹಿಡಿದರು.

ರೋಹಿತ್​ ನಾಯಕತ್ವದಲ್ಲಿ ಮೊದಲ ಕಪ್​ ಮತ್ತು ಸಚಿನ್​ ಐಪಿಎಲ್​ ವಿದಾಯ

ಮುಂಬೈ ಇಂಡಿಯನ್ಸ್​ 2013ರಲ್ಲಿ ಚೊಚ್ಚಲ ಬಾರಿಗೆ ಐಪಿಎಲ್​ ಟ್ರೋಫಿ ಗೆದ್ದಿತು. ರೋಹಿತ್​ ಶರ್ಮ ಅವರ ನಾಯಕತ್ವದಲ್ಲಿ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತು. ಇದೇ ಆವೃತ್ತಿಯಲ್ಲಿ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರು ಐಪಿಎಲ್​ ಕ್ರಿಕೆಟ್​ಗೆ ಸ್ಮರಣೀಯ ವಿದಾಯ ಹೇಳಿದ್ದರು. 2011 ಏಕದಿನ ವಿಶ್ವ ಕಪ್​ ಗೆದ್ದ ಬಳಿಕ ಸಚಿನ್​ ಅವರನ್ನು ಅಭಿನಂದಿಸಿದ ರೀತಿಯಲ್ಲಿಯೇ ಈ ಸಂದರ್ಭದಲ್ಲಿಯೂ ಗೌರವ ಸೂಚಿಸಲಾಗಿತ್ತು. ಫೂನಲ್​ನಲ್ಲಿ ಚೆನ್ನೈ ತಂಡವನ್ನು ಮಗುಚಿ ಹಾಕುವ ಮೂಲಕ 2010 ಫೈನಲ್​ಗೆ ಇಲ್ಲಿ ಸೇಡು ತೀರಿಸಿಕೊಂಡಿತು. ಇಲ್ಲಿಂದ ಮೇಲೆ ನಡೆದದ್ದು ಇತಿಹಾಸ. ಮುಂಬೈ 5 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿತು.

ಮುಂಬೈ ತಂಡ ನಡೆದು ಬಂದ ಹಾದಿಯೇ ರೋಚಕ

ಇತರ ತಂಡಗಳಿಗೆ ಹೋಲಿಸಿದರೆ ಮುಂಬೈ ತಂಡ ಪ್ರತಿ ಆವೃತ್ತಿಯ ಐಪಿಎಲ್​ನಲ್ಲಿಯೂ ನಡೆದ ಬಂದ ಹಾದಿಯೇ ವಿಭಿನ್ನ. ಆರಂಭದಲ್ಲಿ ಸತತ ಸೋಲು ಕಂಡು ಇನ್ನೇನು, ತಂಡ ಟೂರ್ನಿಯಿಂದ ಹೊರಬೀಳುತ್ತದೆ ಎನ್ನುವಷ್ಟರಲ್ಲಿ ಫಿನಿಕ್ಸ್​ನಂತೆ ಎದ್ದು ನಿಂತು ಗೆಲ್ಲಲೇ ಬೇಕಾದ ಎಲ್ಲ ಪಂದ್ಯಗಳನ್ನು ಗೆದ್ದು ಫೈನಲ್​ಗೆ ಲಗ್ಗೆ ಇಡುತ್ತದೆ. ಈ ಬಾರಿಯೂ ತಂಡದ ಪ್ರದರ್ಶನ ಇದೇ ರೀತಿ ಇದೆ. ಹೀಗಾಗಿ ಈ ಬಾರಿಯೂ ಕಪ್​ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ.

ಬೆಸ ಸಂಖ್ಯೆ ಮುಂಬೈಗೆ ಅದೃಷ್ಟ

ಮುಂಬೈ ತಂಡಕ್ಕೂ ಬೆಸ ಸಂಖ್ಯೆಗೂ ಮಹತ್ವದ ನಂಟು ಇದೆ. ಬೆಸ ಸಂಖ್ಯೆಯಲ್ಲಿ ಈ ತಂಡ ಪ್ರತಿ ಬಾರಿಯೂ ಕಪ್​ ಗೆದ್ದಿದೆ. 2013ರಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ ಮುಂಬೈ ಆ ಬಳಿಕ 2015, 2017, 2019, 2020 ಕಪ್ ಗೆದ್ದಿದೆ. ಇದೀಗ 2023ರಲ್ಲಿಯೂ ಮುಂಬೈ ಕಪ್​ ಗೆಲ್ಲಲಿದೆ ಎನ್ನುವ ಭವಿಷ್ಯವಾಣಿಯೊಂದು ಈಗಾಗಲೇ ಕ್ರಿಕೆಟ್​ ಪ್ರಿಯರು ನುಡಿಯಲು ಆರಂಭಿಸಿದ್ದಾರೆ. ಈ ಬಾರಿಯೂ ಮುಂಬೈ ಗೆದ್ದರೆ ಬೆಸ ಸಂಖ್ಯೆ ಮುಂಬೈಗೆ ಅದೃಷ್ಟ ಎನ್ನುವುದು ಮತ್ತೊಮ್ಮೆ ಸಾಭೀತಾಗಲಿದೆ.

ಇದನ್ನೂ ಓದಿ IPL 2023: ಲಕ್ನೋಗೆ ಒಲಿದೀತೆ ಈ ಬಾರಿ ಲಕ್​​?

ಬುಮ್ರಾ ಅಲಭ್ಯ ತಂಡಕ್ಕೆ ಹಿನ್ನಡೆ

ಪ್ರಧಾನ ಬೌಲರ್​ ಜಸ್​ಪ್ರೀತ್​ ಬುಮ್ರಾ ಅವರ ಅಲಭ್ಯತೆ ಮುಂಬೈಗೆ ಪ್ರತಿ ಪಂದ್ಯದಲ್ಲಿಯೂ ಕಾಡುತ್ತಿದೆ. ಇಲ್ಲಿಯ ವರೆಗೆ ತಂಡ ಬ್ಯಾಟಿಂಗ್​ ಬಲದಿಂದಲೇ ಗೆಲುವು ಸಾಧಿಸಿದೆ. ಹೀಗಾಗಿ ಮುಂಬೈಗೆ ಈ ಬಾರಿ ಬೌಲಿಂಗ್​ನದ್ದೇ ಚಿಂತೆಯಾಗಿದೆ. ಜೋಫ್ರಾ ಆರ್ಚರ್​ ಅವರು ತಂಡದಲ್ಲಿದ್ದರೂ ಅವರು ಮತ್ತೆ ಗಾಯಕ್ಕೆ ಸಿಲುಕಿ ಅರ್ಧದಲ್ಲೇ ಟೂರ್ನಿಯಿಂದ ಹೊರಬಿದ್ದರು. ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ರೋಹಿತ್​ ಶರ್ಮ ಮತ್ತು ಕ್ಯಾಮರೂನ್​ ಗ್ರೀನ್​ ಅವರು ಮಹತ್ವದ ಘಟ್ಟದಲ್ಲೇ ಬ್ಯಾಟಿಂಗ್​ ಫಾರ್ಮ್​ಗೆ ಮರಳಿರುವುದು ತಂಡಕ್ಕೆ ಆನೆ ಬಲ ಬಂದಂತಾಗಿದೆ.

Exit mobile version