Site icon Vistara News

IPL 2024: ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

IPL 2024 Auction

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024)ರ ಆಟಗಾರರ ಮಿನಿ ಹರಾಜು(IPL Auction 2024) ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ ಎಂದು ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕೃತ ಮಾಹಿತಿ ನೀಡಿದೆ. ಅಂದ ಹಾಗೆ ವಿದೇಶದಲ್ಲಿ ಐಪಿಎಲ್​ ಹರಾಜು ನಡೆಯುತ್ತಿರುವುದು ಇದೇ ಮೊದಲು. ಆದರೆ, ಮೂರು ಬಾರಿ ವಿದೇಶಿ ನೆಲದಲ್ಲಿ ಟೂರ್ನಿ ನಡೆದಿದೆ. ಇದೀಗ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

1166 ಆಟಗಾರರು ಹೆಸರು ನೋಂದಣಿ

ಈ ಬಾರಿಯ ಐಪಿಎಲ್​ ಮಿನಿ ಹರಾಜಿಗೆ 1,166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ ಎಂದು ವರದಿಗಳು ಸೂಚಿಸಿವೆ. ಈ ಪಟ್ಟಿಯಲ್ಲಿ 212 ಅಂತಾರಾಷ್ಟ್ರೀಯ ಪಂದ್ಯವಾಡಿದವರು , 909 ಅಂತಾರಾಷ್ಟ್ರೀಯ ಕ್ರಿಕೆಟ್ ಆಡದವರು ಮತ್ತು 45 ಅಸೋಸಿಯೇಟ್ ಆಟಗಾರರು ಇದ್ದಾರೆ. ಈ ಪೈಕಿ ವಿದೇಶಿ ಆಟಗಾರರ ಸಂಖ್ಯೆ 336 ಎಂದು ತಿಳಿದುಬಂದಿದೆ.

ಫ್ರಾಂಚೈಸಿಗಳಿಗೆ ಸೂಚನೆ

ಹರಾಜು ರಿಜಿಸ್ಟರ್​ನಲ್ಲಿ ಪಟ್ಟಿ ಮಾಡದ ಹೆಚ್ಚುವರಿ ಆಟಗಾರರ ವಿನಂತಿಗಳೊಂದಿಗೆ ಪ್ರತಿಕ್ರಿಯಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫ್ರಾಂಚೈಸಿಗಳನ್ನು ವಿನಂತಿಸಿದೆ. ವಿನಂತಿಸಿದ ಆಟಗಾರರು ಅರ್ಹರಾಗಿದ್ದರೆ ಮತ್ತು ಆಸಕ್ತಿ ಹೊಂದಿದ್ದರೆ ಸ್ವಯಂಚಾಲಿತವಾಗಿ ಹರಾಜಿನಲ್ಲಿ ಸೇರಿಕೊಳ್ಳಲಿದ್ದಾರೆ. ಹರಾಜಿನಲ್ಲಿ ಸೇರಿಸಲು ಬಯಸುವ ಆಟಗಾರರ ಪಟ್ಟಿಯೊಂದಿಗೆ ಪ್ರತಿಕ್ರಿಯಿಸಲು ಫ್ರಾಂಚೈಸಿಗಳಿಗೆ ಸೂಚನೆ ನೀಡಲಾಗಿದೆ. ಕೇವಲ 77 ಸ್ಲಾಟ್​ಗಳನ್ನು ಮಾತ್ರ ಭರ್ತಿ ಮಾಡಬೇಕಾಗಿದೆ, ಅದರಲ್ಲಿ ಗರಿಷ್ಠ 30 ವಿದೇಶಿ ಆಟಗಾರರು ಇರಬಹುದು. ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ.

ಮುಂಬೈ ಇಂಡಿಯನ್ಸ್

ಐಪಿಲ್​ನ ಅತ್ಯಂತ ಯಶಸ್ವಿ ತಂಡವೆನಿಸಿದ ಮುಂಬೈ ಇಂಡಿಯನ್ಸ್​ ತಂಡವು ಈ ಬಾರಿಯ ಹರಾಜಿನಲ್ಲಿ 8 ಆಟಗಾರರನ್ನು ಖರೀದಿ ಮಾಡುವ ಅವಕಾಶ ಹೊಂದಿದೆ. ನಾಲ್ವರು ವಿದೇಶಿ ಹಾಗೂ ನಾಲ್ವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಟ್ರೆಡಿಂಗ್​ ನಿಯಮದ ಮೂಲಕ ಗುಜರಾತ್​ ತಂಡದಿಂದ ಹಾರ್ದಿಕ್​ ಪಾಂಡ್ಯ ಅವರನ್ನು ಈಗಾಗಲೇ ಖರೀದಿ ಮಾಡಿ ಬಲಿಷ್ಠ ತಂಡ ರೂಪಿಸಿಕೊಂಡಿದೆ. ಸದ್ಯ ಫ್ರಾಂಚೈಸಿ ಬಳಿ 15.25 ಕೋಟಿ ರೂ. ಹಣವಿದೆ.

ಗುಜರಾತ್ ಟೈಟಾನ್ಸ್

ಒಂದು ಬಾರಿ ಚಾಂಪಿಯನ್​ ಮತ್ತು ಕಳೆದ ಬಾರಿ ರನ್ನರ್​ ಅಪ್​ ಗುಜರಾತ್​ ಟೈಟಾನ್ಸ್​ ತಂಡಕ್ಕೆ ಮಿನಿ ಹರಾಜಿನಲ್ಲಿ ಒಟ್ಟು 8 ಆಟಗಾರರನ್ನು ಖರೀದಿಸಬಹುದು. ಇದರಲ್ಲಿ 6 ಭಾರತೀಯ ಹಾಗೂ ಎಡರು ವಿದೇಶಿ ಆಟಗಾರ ಆಯ್ಕೆ ಮಾತ್ರ ಸಾಧ್ಯವಾಗಲಿದೆ. 38.15 ಕೋಟಿ ರೂ. ಉಳಿಕೆ ಹಣವಿದೆ.

ಚೆನ್ನೈ ಸೂಪರ್ ಕಿಂಗ್ಸ್

ಮಹೇಂದ್ರ ಸಿಂಗ್​ ಧೋನಿ ಸಾರಥ್ಯದ ಚನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಈ ಬಾರಿ 6 ಆಟಗಾರರನ್ನು ಖರೀದಿಸಬಹುದು. ಇವರಲ್ಲಿ 3 ವಿದೇಶಿ ಆಟಗಾರರನ್ನು ಹಾಗೂ ಮೂವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಸದ್ಯ ತಂಡದ ಬಳಿ 31.40 ಕೋಟಿ. ರೂ ಹಣವಿದೆ.

ಸನ್‌ರೈಸರ್ಸ್ ಹೈದರಾಬಾದ್

ಒಂದು ಬಾರಿಯ ಚಾಂಪಿಯನ್​ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ 6 ಆಟಗಾರರನ್ನು ಖರೀದಿ ಮಾಡಬಹುದಾಗಿದೆ. ತಲಾ ಮೂರು ಭಾರತೀಯ ಮತ್ತು ವಿದೇಶಿ ಆಟಗಾರರನ್ನು ಬಿಡ್​ ಮಾಡಬಹುದು. ತಂಡದ ಬಳಿ 34 ಕೋಟಿ ರೂ. ಹಣವಿದೆ.

ಇದನ್ನೂ ಓದಿ IPL 2024: ಶಮಿಗೆ ಬಿಗ್ ಆಫರ್​ ನೀಡಿದ ಐಪಿಎಲ್​ ಫ್ರಾಂಚೈಸಿ; ಶಮಿ ನಿರ್ಧಾರವೇನು?

ಪಂಜಾಬ್ ಕಿಂಗ್ಸ್

ಹೆಸರು ಬದಲಿಸಿದರು ಅದೃಷ್ಟ ಬದಲಾಗದ ಪಂಜಾಬ್ ಕಿಂಗ್ಸ್​ ತಂಡಕ್ಕೆ 8 ಆಟಗಾರರನ್ನು ಖರೀದಿ ಮಾಡುವ ಅವಕಾಶವಿದೆ. ಇಬ್ಬರು ವಿದೇಶಿ ಆಟಗಾರರು ಹಾಗೂ 6 ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಫ್ರಾಂಚೈಸಿ ಬಳಿ 29.10 ಕೋಟಿ. ರೂ.ಹಣವಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಸ್ಟಾರ್​ ಆಟಗಾರರ ಪಡೆಯನ್ನ ಹೊಂದಿದ್ದರು ಇದುವರೆಗೂ ಕಪ್​ ಗೆಲ್ಲದ ಐಪಿಎಲ್​ನ ನತದೃಷ್ಟ ತಂಡಗಳಲ್ಲಿ ಒಂದಾಗಿರುವ ಆರ್​ಸಿಬಿ ತಂಡಕ್ಕೆ ಈ ಬಾರಿ ಒಟ್ಟು 6 ಆಟಗಾರರನ್ನು ಖರೀದಿಸಬಹುದು. ತಲಾ ಮೂರು ಭಾರತೀಯ ಮತ್ತು ವಿದೇಶಿ ಆಟಗಾರರನ್ನು ಖರೀದಿಸಬಹುದು. ಆರ್​ಸಿಬಿ ಬಳಿ ಕೇವಲ 14.50 ಕೋಟಿ ರೂ. ಮಾತ್ರ ಉಳಿಕೆ ಹಣವಿದೆ. ಈ ಮೊತ್ತದಲ್ಲಿ ಸ್ಟಾರ್​ ಆಟಗಾರರನ್ನು ಖರೀದಿಸುವುದು ಕಷ್ಟ ಸಾಧ್ಯ. 

ರಾಜಸ್ಥಾನ್ ರಾಯಲ್ಸ್

ಚೊಚ್ಚಲ ಆವೃತ್ತಿಯ ಚಾಂಪಿಯನ್​ ರಾಜಸ್ಥಾನ್​ ರಾಯಲ್ಸ್​ ತಂಡಕ್ಕೆ ಈ ಬಾರಿ​ 8 ಸ್ಲಾಟ್​ಗಳಲ್ಲಿ ಮೂವರು ವಿದೇಶಿ ಹಾಗೂ 5 ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಈಗಾಗಲ ಟ್ರೆಡಿಂಗ್​ ಮೂಲಕ ಲಕ್ನೋ ತಂಡ ಅವೇಶ್​ ಖಾನ್​ ಅವರನ್ನು ಖರೀದಿಸಿ ದೇವದತ್ತ ಪಡಿಕ್ಕಲ್​ ಲಕ್ನೋಗೆ ಬಿಟ್ಟುಕೊಟ್ಟಿದೆ. ಸದ್ಯ ಫ್ರಾಂಚೈಸಿ ಬಳಿ 14.50 ಕೋಟಿ ರೂ. ಮೊತ್ತ ಬಾಕಿ ಇದೆ.

ಲಕ್ನೋ ಸೂಪರ್ ಜೈಂಟ್ಸ್

ಕನ್ನಡಿಗ ಕೆ.ಎಲ್ ರಾಹುಲ್​ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಈ ಬಾರಿಯ ಹರಾಜಿನಲ್ಲಿ ಒಟ್ಟು 6 ಆಟಗಾರರನ್ನು ಖರೀದಿ ಮಾಡಬಹುದು. ಆದರೆ ನಾಲ್ವರು ಭಾರತೀಯ ಆಟಗಾರರನ್ನು ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಬೇಕು. ತಂಡದ ಬಳಿ ಕೇವಲ 13.15 ಕೋಟಿ. ರೂ ಮಾತ್ರ ಬಾಕಿ ಉಳಿದಿದ್ದು ಸ್ಟಾರ್​ ಆಟಗಾರರನ್ನು ಖರೀದಿ ಮಾಡಲು ಕಷ್ಟವಾಗಬಹುದು.

ಕೋಲ್ಕತ್ತಾ ನೈಟ್ ರೈಡರ್ಸ್

2 ಬಾರಿಯ ಚಾಂಪಿಯನ್​ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡಕ್ಕೆ ಗರಿಷ್ಠ 12 ಆಟಗಾರರನ್ನು ಖರೀದಿಸಬಹುದು. ಇದರಲ್ಲಿ 8 ಭಾರತೀಯ ಹಾಗೂ 4 ವಿದೇಶಿ ಆಟಗಾರರಿಗೆ ಅವಕಾಶ ನೀಡಬಹುದು. ಸದ್ಯ ಫ್ರಾಂಚೈಸಿ ಬಳಿ 32.70 ಕೋಟಿ ರೂ. ಉಳಿಕೆ ಹಣವಿದೆ. ಹೀಗಾಗಿ ಸ್ಟಾರ್​ ಆಟಗಾರರನ್ನು ತನ್ನ ತಂಡಕ್ಕೆ ಸೆಳೆಯಬಹುದು.

ಡೆಲ್ಲಿ ಕ್ಯಾಪಿಟಲ್ಸ್

ಯುವ ಆಟಗಾರರನ್ನೇ ನೆಚ್ಚಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಈ ಬಾರಿ 9 ಆಟಗಾರರನ್ನು ಖರೀದಿ ಮಾಡಬಹುದು. ಇದರಲ್ಲಿ 4 ವಿದೇಶಿ ಆಟಗಾರರಿಗೆ, ಐವರು ಭಾರತೀಯ ಅವಕಾಶ ನೀಡಬಹುದು. ಕಳೆದ ವರ್ಷ ಡಿಸೆಂಬರ್​ನಲ್ಲಿ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ರಿಷಭ್​ ಪಂತ್​ 16ನೇ ಆವೃತ್ತಿಯ ಐಪಿಎಲ್​ನಿಂದ ದೂರ ಉಳಿದಿದ್ದರು. ಈ ಬಾರಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.

Exit mobile version