IPL ನೇರ ಪ್ರಸಾರ ಹಕ್ಕು ಹರಾಜಿನ ಎರಡನೇ ದಿನದ ಮುಖ್ಯಾಂಶ
- ಪ್ರತಿ ಪಂದ್ಯದ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕಿನ ಬಿಡ್ 107.5 ಕೋಟಿ ರೂ.ಗೆ ಏರಿಕೆ
- ಟಿವಿ ನೇರ ಪ್ರಸಾರದ ಹಕ್ಕು ಸೋನಿ ಎಂಟರ್‌ಟೈನ್‌ಮೆಂಟ್ಸ್, ಡಿಜಿಟಲ್ ಪ್ರಸಾರದ ಹಕ್ಕು ವಯಾಕಾಮ್18 ಪಾಲು?
- 5 ವರ್ಷಗಳಿಗೆ 410 ಪಂದ್ಯಗಳ ನೇರ ಪ್ರಸಾರಕ್ಕೆ ಒಟ್ಟು ಬಿಡ್ ಮೌಲ್ಯ 44,075 ಕೋಟಿ ರೂ.ಗೆ ಹೆಚ್ಚಳ
- ಟಿ.ವಿಯಲ್ಲಿ ನೇರ ಪ್ರಸಾರದ ಹಕ್ಕು 23,575 ಕೋಟಿ ರೂ.
- ಡಿಜಿಟಲ್ ಪ್ರಸಾರದ ಹಕ್ಕುಗಳು 20,500 ರೂ.
- ಒಟ್ಟು 44,075 ಕೋಟಿ ರೂ.
- ಪ್ರತಿ ಪಂದ್ಯದ ಟಿವಿ ಹಕ್ಕು 57.7 ಕೋಟಿ ರೂ. ಹಾಗೂ ಡಿಜಿಟಲ್ ಹಕ್ಕು 50 ಕೋಟಿ ರೂ.
ಹೊಸದಿಲ್ಲಿ: ಐಪಿಎಲ್ ನೇರ ಪ್ರಸಾರ ಹಕ್ಕುಗಳ ಬಿಡ್ಡಿಂಗ್‌ನ ಎರಡನೇ ದಿನವಾದ ಸೋಮವಾರ ಬಹುಪಾಲು ಹಕ್ಕುಗಳ ಬಿಡ್ಡಿಂಗ್ ಅನ್ನು ಸೋನಿ ಮತ್ತು ವಯಾಕಾಮ್ 18 ಸಂಸ್ಥೆ ಗೆದ್ದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಟಿವಿಯಲ್ಲಿ ನೇರ ಪ್ರಸಾರದ ಹಕ್ಕುಗಳನ್ನು ಸೋನಿ ಎಂಟರ್‌ಟೈನ್‌ಮೆಂಟ್ಸ್ ಹಾಗೂ ಡಿಜಿಟಲ್ ನೇರ ಪ್ರಸಾರದ ಹಕ್ಕುಗಳನ್ನು ರಿಲಯನ್ಸ್ ಒಡೆತನದ ವೈಯಾಕಾಮ್18 ಚಾನೆಲ್ ಗೆದ್ದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟು ಬಿಡ್ಡಿಂಗ್ 44,075 ಕೋಟಿ ರೂ.ಗೆ ಹೆಚ್ಚಳವಾಗಿದೆ.
ಹರಾಜಿನ ಮೊದಲ ದಿನವಾದ ಭಾನುವಾರ ಪ್ರತಿ ಐಪಿಎಲ್ ಪಂದ್ಯಕ್ಕೆ ಟಿವಿ ಮತ್ತು ಡಿಜಿಟಲ್ ನೇರ ಪ್ರಸಾರದ ಹಕ್ಕುಗಳ ಬಿಡ್ ಮೌಲ್ಯ 105 ಕೋಟಿ ರೂ.ಗೆ ಏರಿಕೆಯಾಗಿತ್ತು. ಪ್ಯಾಕೇಜ್ ಎ-ಗೆ 57 ಕೋಟಿ ರೂ. ಹಾಗೂ ಪ್ಯಾಕೇಜ್-ಬಿ ಗೆ 48 ಕೋಟಿ ರೂ.ಗಳ ಬಿಡ್ ಸಲ್ಲಿಕೆಯಾಗಿತ್ತು. ಆದರೆ ಎರಡನೇ ದಿನದ ಹರಾಜಿನಲ್ಲಿ ಪ್ಯಾಕೇಜ್ ಎ- ಬಿಡ್ ಮೌಲ್ಯ 57.5 ಕೋಟಿ ರೂ. ಹಾಗೂ ಡಿಜಿಟಲ್ ಪ್ರಸಾರದ ಹಕ್ಕುಗಳಿಗೆ ಬಿಡ್ ಮೌಲ್ಯ 50 ಕೋಟಿ ರೂ.ಗೆ ಏರಿತ್ತು. ಅಂದರೆ ಪ್ರತಿ ಮ್ಯಾಚ್‌ಗೆ ಒಟ್ಟು ಬಿಡ್ ಮೌಲ್ಯ 107.5 ಕೋಟಿ ರೂ.ಗೆ ಏರಿಕೆಯಾಗಿತ್ತು. 5 ವರ್ಷಗಳ ಅವಧಿಗೆ ಒಟ್ಟು ಬಿಡ್ ಮೌಲ್ಯ 44,075 ಕೋಟಿ ರೂ.ಗೆ ಹೆಚ್ಚಳವಾಯಿತು. ಪ್ಯಾಕೇಜ್-ಎ ಎಂದರೆ ಟಿವಿ ನೇರ ಪ್ರಸಾರದ ಹಕ್ಕು, ಪ್ಯಾಕೇಜ್ ಬಿ ಎಂದರೆ ಡಿಜಿಟಲ್ ನೇರ ಪ್ರಸಾರದ ಹಕ್ಕು.
ಇದರೊಂದಿಗೆ ಇಂಗ್ಲಿಷ್ ಪ್ರೀಮಿಯರ್ ಲೀಗ್, ಮೇಜರ್ ಲೀಗ್ ಬೇಸ್‌ಬಾಲ್, ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಶನ್ ಪಂದ್ಯಗಳಿಗಿಂತ ಹೆಚ್ಚಿನ ಮೊತ್ತಕ್ಕೆ ನೇರ ಪ್ರಸಾರದ ಹಕ್ಕಿನ ಬಿಡ್ಡಿಂಗ್ ಅನ್ನು ಐಪಿಎಲ್ ಪಂದ್ಯಗಳು ಗಳಿಸಿದಂತಾಗಿದೆ.
ಕಳೆದ 2017ರಲ್ಲಿ ಐಪಿಎಲ್ ನೇರ ಪ್ರಸಾರದ ಹಕ್ಕು 16,347 ಕೋಟಿ ರೂ.ಗೆ ಮಾರಾಟವಾಗಿತ್ತು. ಬಿಡ್ಡಿಂಗ್‌ನಲ್ಲಿ ಪ್ಯಾಕೇಜ್- ಎಗೆ (ಭಾರತದಲ್ಲಿ ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರ) ರಿಲಯನ್ಸ್ ವಯಾಕಾಮ್ 18, ಡಿಸ್ನಿಸ್ಟಾರ್, ಸೋನಿ ನೆಟ್ ವರ್ಕ್ಸ್, ಝೀ ಪ್ರಬಲ ಬಿಡ್ಡರ್‌ಗಳಾಗಿವೆ.
ಪ್ಯಾಕೇಜ್ ಬಿ-ಗೆ (ಡಿಜಿಟಲ್ ನೇರ ಪ್ರಸಾರ) ರಿಲಯನ್ಸ್ ವಯಾಕಾಮ್ 18, (ಜಿಯೊ ಮತ್ತು ವೂಟ್), ಡಿಸ್ನಿ ಸ್ಟಾರ್ (ಹಾಟ್ ಸ್ಟಾರ್), ಸೋನಿ ನೆಟ್ ವರ್ಕ್ಸ್, ಝೀ ವಾಹಿನಿಗಳು ಪ್ರಬಲ ಬಿಡ್ಡರ್‌ಗಳಾಗಿವೆ.
ಪ್ಯಾಕೇಜ್ ಸಿ ಮತ್ತು ಪ್ಯಾಕೇಜ್ ಡಿ ಕುರಿತ ಬಿಡ್ಡಿಂಗ್ ಶೀಘ್ರ ನಡೆಯಲಿದೆ. ಇಂದೇ ಮುಕ್ತಾಯವಾಗುವ ಸಾಧ್ಯತೆಯೂ ಇದೆ. ಪ್ಯಾಕೇಜ್ ಡಿ ವಿದೇಶಗಳಲ್ಲಿ ಪಂದ್ಯಗಳ ನೇರ ಪ್ರಸಾರಕ್ಕೆ ಮೀಸಲಾಗಿದೆ. ಇದರಲ್ಲಿ ಪ್ರತಿ ಮ್ಯಾಚ್‌ಗೆ 3 ಕೋಟಿ ರೂ. ಬಿಡ್ ಸಲ್ಲಿಕೆ ನಿರೀಕ್ಷಿಸಲಾಗಿದೆ.