IPL2022: ಭಾರತದ ಯುವ ಕ್ರಿಕೆಟಿಗರು ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಹುಡುಕುತ್ತಿರುತ್ತಾರೆ. ಐಪಿಲ್ ಎಂಬ ಅತಿ ದೊಡ್ಡ ಟೂರ್ನಮೆಂಟ್ ಯುವ ಕ್ರಿಕೆಟಿಗರಿಗೆ ವೇದಿಕೆಯಾಗಿದೆ. ಐಪಿಎಲ್‌ನಲ್ಲಿ ಮಿಂಚಿದ ಹಲವು ಆಟಗಾರರು ಭಾರತ ಕ್ರಿಕೆಟ್ ತಂಡದಲ್ಲೂ ಪ್ರವೇಶ ಪಡೆದಕೊಂಡಿದ್ದಾರೆ. ಆದರೆ, ಅನೇಕರಿಗೆ ಐಪಿಎಲ್‌ಗೆ ಪ್ರವೇಶ ಪಡೆಯುವುದೇ ದೊಡ್ಡ ಕನಸಾಗಿದೆ. ಹೀಗೆ ತನ್ನ ಕನಸನ್ನು ನನಸಾಗಿಸುವ ಹಾದಿ ಹಿಡಿದ ಯುವ ಆಟಗಾರ ಸಲ್ಮಾನ ಖಾನ್.
ಕ್ಲಬ್ ಕ್ರಿಕೆಟ್ ಆಡುತ್ತಿದ್ದ ಸಲ್ಮಾನ್ ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೆಟ್ ಬೌಲರ್ ಆದ ಕಥೆ ಇಲ್ಲಿದೆ:
ಸಲ್ಮಾನ್ ಖಾನ್ 22 ವರ್ಷದ ಯುವ ಕ್ರಿಕೆಟಿಗ. ಮುಂಬೈ ನಗರದಲ್ಲಿ ಒಂದು ಟೆಂಟ್‌ನಲ್ಲಿ ತನ್ನ ಕುಟುಂಬದವರೊಂದಿಗೆ ವಾಸಿಸುತ್ತಿದ್ದರು. ಹಲವು ವರ್ಷಗಳಿಂದ ಸಲ್ಮಾನ್ ಖಾನ್ ಕ್ಲಬ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ಬಾರಿಯ ಐಪಿಎಲ್ ಆರಂಭದಲ್ಲಿ ಸಲ್ಮಾನ್ ಖಾನ್‌ಗೆ CSK ತಂಡದ ನೆಟ್ ಬೌಲರ್ ಆಗುವ ಅವಕಾಶ ದೊರಕಿದೆ. ತುಷಾರ್ ದೇಶಪಾಂಡೆ ಎಂಬ ಮುಂಬೈನ ಕ್ರಿಕೆಟ್ ಪಟು ಸೂಚನೆ ಮೇರೆಗೆ ಚೆನ್ನೈ ತಂಡದ ಮುಖ್ಯಸ್ಥರು ಸಲ್ಮಾನ್ ಖಾನ್‌ಗೆ ಕರೆ ಮಾಡಿದ್ದರು.
ಹಿರಿಯ ಆಟಗಾರರಿಂದ ಕ್ರಿಕೆಟ್ ಕಲಿಯಲು ಒಂದೊಳ್ಳೆ ಅವಕಾಶ ಸಿಕ್ಕಿದೆ ಎಂದು ಆಫ್ ಸ್ಪಿನ್ ಬೌಲರ್ ಸಲ್ಮಾನ್ ಖಾನ್ ಸಂಭ್ರಮಪಟ್ಟರು.
ಯುವ ಆಟಗಾರರನ್ನು ಪ್ರೋತ್ಸಾಹಿಸಿ ಒಳ್ಳೆ ಅವಕಾಶ ಕಲ್ಪಿಸುವಲ್ಲಿ ಚೆನ್ನೈ ತಂಡ ಮುಂಚೂಣಿಯಲ್ಲಿದೆ. ಈ ಹಿಂದೆ ನೆಟ್ ಬೌಲರ್ಸ್ ಆಗಿ ಪ್ರವೇಶ ಪಡೆದ ಮುಖೇಶ್ ಚೌಧರಿ ಹಾಗೂ ಪ್ರಶಾಂತ್ ಸೊಲಂಕಿ ಎಂಬ ಯುವ ಆಟಗಾರರು ಈ ಆವೃತ್ತಿಯ ಐಪಿಎಲ್‌ನಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಹಾಗೂ ಚೆನ್ನೈ ತಂಡದ ಅನೇಕ ಆಟಗಾರರು ಭಾರತ ತಂಡಕ್ಕೂ ಪ್ರವೇಶ ಪಡೆದಿದ್ದಾರೆ. ಉತ್ತಮ ಆಟದ ಪ್ರದರ್ಶನವನ್ನೂ ನೀಡಿದ್ದಾರೆ.
ಈಗ ಸಲ್ಮಾನ್‌ಗೆ ಅವಕಾಶ ನೀಡಿರುವುದು ಮುಂದೆ ಭಾರತದ ಉತ್ತಮ ಆಟಗಾರರ ಪಟ್ಟಿಯಲ್ಲಿ ಸಲ್ಮಾನ್ ಸೇರಬಹುದೇ? ಎಂದು ಕಾದುನೋಡಬೇಕಿದೆ.
ತಂದೆ ಇದ್ರಿಸ್ ಸಂತಸ!
ಸಲ್ಮಾನ್‌ನ ತಂದೆ ಇದ್ರಿಸ್ ಮೈದಾನ ನಿರ್ವಹಣೆ ಮಾಡುವವರಾಗಿ ಕಾರ್ಯನಿರ್ವಹಿಸುತ್ತಿರುವವರು. ಸಲ್ಮಾನ್ ಖಾನ್ ಚೆನ್ನೈ ತಂಡದ ನೆಟ್ ಬೌಲರ್ ಆಗಿ ಅವಕಾಶ ದೊರಕಿದೆ ಎಂದು ತಿಳಿದ ಕೂಡಲೇ ಬಹಳ ಸಂತೋಷ ಪಟ್ಟಿದಾರೆ.
ಸಲ್ಮಾನ್ ಉಳಿದುಕೊಂಡ ಮುಂಬೈನ ʼಟ್ರೈಡೆಂಟ್ʼ ಹೊಟೇಲ್‌ನಿಂದ ತಂದೆಗೆ ವಿಡಿಯೋ ಕರೆ ಮಾಡಿದ ಘಟನೆಯನ್ನು ಈ ಸಂದರ್ಭದಲ್ಲಿ ಇದ್ರಿಸ್ ನೆನಪಿಸಿಕೊಂಡರು.
ʼನಮ್ಮಂತ ಸಾಧಾರಣ ವ್ಯಕ್ತಿಗಳಿಗೆ ಅಂತಹ ಹೋಟೆಲ್‌ಗಳಿಗೆ ಹೋಗುವುದು ಅಸಾಧ್ಯದ ಕನಸು. ಆದರೆ ಸಲ್ಮಾನ್ ಅಲ್ಲಿ ಹೋಗಿರುವುದು ಖುಷಿಯ ಸಂಗತಿ. ಅವನು ವಿಡಿಯೋ ಕರೆ ಮಾಡಿ ಹೋಟೆಲ್ ಸ್ವಿಮ್ಮಿಂಗ್ ಪೂಲ್ ಮಾಲ್ಡೀವ್ಸ್‌ನಲ್ಲಿ ಇದ್ದ ಹಾಗೆ ಇದೆ ಎಂದು ಹೇಳಿದ್ದ. ನಮ್ಮ ಮನೆಯವರಿಗೆ ಮಾಲ್ಡೀವ್ಸ್ ಎಂದರೇನು? ಅದು ಎಲ್ಲಿದೆ? ಎಂದು ಕೂಡ ಗೊತ್ತಿಲ್ಲ. ಸಲ್ಮಾನ್ ಉತ್ತಮ ಆಟವಾಡಬೇಕು. ತನ್ನ ಕಾಲುಗಳ ಮೇಲೆ ನಿಲ್ಲುವಂತಾಗಬೇಕು. ಆತನಿಗೆ ಒಳ್ಳೆಯದಾಗಬೇಕು.ʼ ಎಂದು ಆಶಿಸಿದ್ದಾರೆ.
ಹೆಗಿದೆ ಸಿಎಸ್‌ಕೆ ತಂಡದ ವಾತಾವರಣ?
ಚೆನ್ನೈ ತಂಡದ ನೆಟ್ ಬೌಲರ್ ಆಗಿ ಸೇರ್ಪಡೆಗೊಂಡ ಸಂತಸದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಸಲ್ಮಾನ್ ಅಲ್ಲಿನ ವಾತಾವರಣದ ಕುರಿತು ಹೀಗೆ ಹಂಚಿಕೊಂಡಿದ್ದಾರೆ:
ಅನುಭವೀ ಆಟಗಾರ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಲ್ಮಾನ್ ಖಾನ್‌ಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಚೆನ್ನೈ ತಂಡದ ನಾಯಕ ರವೀಂದ್ರ ಜಡೇಜಾ ಸಲ್ಮಾನ್‌ಗೆ ಟಿಪ್ಸ್ ನೀಡುತ್ತಿದ್ದಾರೆ. ʼT20 ಆಟದಲ್ಲಿ ಆಫ್ ಸ್ಪಿನ್ ಬೌಲಿಂಗ್‌ಗೆ ಬ್ಯಾಟ್ಸ್‌ಮನ್‌ಗಳು ಹೆಚ್ಚೆಚ್ಚು ರನ್ ಗಳಿಸಲು ಯತ್ನಿಸುತ್ತಾರೆ. ಹಾಗಾಗಿ ತುಂಬಾ ಯೋಚಿಸಿ ಬೌಲಿಂಗ್ ಮಾಡಬೇಕು.ʼ ಎಂಬ ಜಡೇಜಾ ಮಾತುಗಳನ್ನು ಸಲ್ಮಾನ್ ನೆಪಿಸಿಕೊಂಡರು.
ʼಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಎಲ್ಲರೂ ಕುಟುಂಬದವರಂತೆ ಇದ್ದಾರೆ. ನನ್ನನ್ನೂ ಎಲ್ಲರೂ ಅವರಂತೆ ಸಮಾನವಾಗಿ ನೋಡುತ್ತಾರೆ.ʼ ಎಂದು ಸಲ್ಮಾನ್ ತಿಳಿಸಿದ್ದಾರೆ.
ಹೆಚ್ಚಿನ ಓದಿಗಾಗಿ: ಲಖನೌ ‘ಸೂಪರ್ʼ ಬ್ಯಾಟಿಂಗ್: ಚೆನ್ನೈಗೆ ಹೀನಾಯ ಸೋಲು