Site icon Vistara News

IPL2022 | ಈ ಬಾರಿಯೂ ಕೈ ತಪ್ಪಿದ ಕಪ್!‌: ಫೈನಲ್ಸ್‌ಗೆ ರಾಜಸ್ಥಾನ

IPL2022 : ಐಪಿಎಲ್‌ನ 15ನೇ ಆವೃತ್ತಿಯಲ್ಲಿ ಆರ್‌ಸಿಬಿ ಫೈನಲ್‌ ತಲುಪುವಲ್ಲಿ ವಿಫಲವಾಗಿದೆ. ಈ ಸಲವೂ ಕೈ ತಪ್ಪಿದ್ದಕ್ಕೆ ಆರ್‌ಸಿಬಿ ಅಭಿಮಾನಿಗಳು ಮತ್ತೊಮ್ಮೆ ನಿರಾಸೆಯಾಗಿದ್ದಾರೆ. ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಆರ್‌ಸಿಬಿ ಸೋತಿರವ ಕಾರಣದಿಂದ ಫೈನಲ್‌ ತಲುಪಿಲ್ಲ. ರಾಜಸ್ಥಾನ ಅದ್ಭುತ ಆಟ ಪ್ರದರ್ಶನ ನೀಡಿದ್ದು, 7ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

ರಾಜಸ್ಥಾನ್‌ ತಂಡ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿತ್ತು. ಕಳೆದ ಮ್ಯಾಚ್‌ನಲ್ಲಿ ಸೆಂಚುರಿ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಆರ್‌ಸಿಬಿ ತಂಡದ ರಜತ್‌ ಪಾಟಿದಾರ್‌ ಶುಕ್ರವಾರವೂ ಉತ್ತಮ ಪ್ರದರ್ಶನ ಮುಂದುವರಿಸಿದರು. ರಜತ್‌ ಪಾಟಿದಾರ್‌ 58ರನ್‌ ಗಳಿಸಿದರು ಹಾಗೂ ತಂಡದ ಒಟ್ಟು ಸ್ಕೋರ್‌ 157 ತಲುಪಿಸಲು ಪ್ರಮುಖ ಕಾರಣವಾದರು.

ಪ್ರಾರಂಭದಲ್ಲಿ ಉತ್ತಮ ರನ್‌ ಗಳಿಕೆ ಮಾಡಿತ್ತಾದರೂ ಅಂತಿಮ ಐದು ಓವರ್‌ಗಳಲ್ಲಿ ಹೆಚ್ಚಿನ ರನ್‌ ಕಲೆ ಹಾಕುವಲ್ಲಿ ವಿಫಲವಾಗಿದ್ದು ಆರ್‌ಸಿಬಿ ಹಿನ್ನಡೆಗೆ ಕಾರಣವಾಯಿತು. ಹದಿನಾರನೇ ಓವರ್‌ನಲ್ಲಿ ರಜತ್‌ ಪಾಟಿದಾರ್‌ ಔಟ್‌ ಆದಾಗ ತಂಡದ ಮೊತ್ತ 130 ಇತ್ತು. ಅಲ್ಲಿಂದ ಮುಂದಕ್ಕೆ ಐದು ಓವರ್‌ನಲ್ಲಿ ಕೇವಲ 27 ರನ್‌ ಮಾತ್ರ ಕಲೆ ಹಾಕಲು ಸಾಧ್ಯವಾಯಿತು. ನಿರಂತರ ವಿಕೆಟ್‌ ಪತನ ಹಾಗೂ ರಾಜಸ್ಥಾನ ರಾಯಲ್ಸ್‌ ಬೌಲಿಂಗ್‌ ವೈಖರಿಗೆ ಆರ್‌ಸಿಬಿ ಆಟಗಾರರ ಬಳಿ ಉತ್ತರ ಇರಲಿಲ್ಲ. ಅಂತಿಮವಾಗಿ ಎಂಟು ವಿಕೆಟ್‌ ಪತನಕ್ಕೆ 157 ರನ್‌ ಮಾತ್ರ ಕಲೆ ಹಾಕಲು ಸಾಧ್ಯವಾಯಿತು.

158ರನ್‌ ಚೇಸ್‌ ಮಾಡಿದ ರಾಜಸ್ಥಾನ ತಂಡ ಆರಂಭದಿಂದಲೇ ಅದ್ಭುತ ಆಟ ಪ್ರದರ್ಶಿಸಿದ್ದರು. ಜೈಸ್ವಾಲ್‌ ಎರಡನೇ ಬಾಲ್‌ನಲ್ಲಿಯೇ ಸಿಕ್ಸರ್‌ ಬಾರಿಸಿದರೆ, ಮೊದಲ ಓವರ್‌ನಲ್ಲೇ 16 ರನ್‌ ಕಲೆ ಹಾಕಲಾಯಿತು. ಈ ಮೂಲಕ ಮೊದಲ ಓವರ್‌ನಿಂದಲೇ ಆಟದ ಮೇಲೆ ರಾಜಸ್ಥಾನ ಪ್ರಭಾವ ಬೀರಲು ಆರಂಭಿಸಿತು. ಆಟದುದ್ದಕ್ಕೂ ಇದೇ ಓಟವನ್ನು ಕಾಯ್ದುಕೊಳ್ಳುವಲ್ಲಿ ಆಟಗಾರರು ಸಫಲವಾದರು. ಜೋಸ್‌ ಬಟ್ಲರ್‌ ಭರ್ಜರಿ ಅಜೇಯ 106 ರನ್‌ ಗಳಿಸಿ ರಾಜಸ್ಥಾನ್‌ ತಂಡ ಫೈನಲ್‌ ತಲುಪಲು ಕಾರಣರಾದರು. ಕೇವಲ 60 ಬಾಲ್‌ನಲ್ಲಿ 106 ರನ್‌ ಗಳಿಸಿದ ಬಟ್ಲರ್‌ ಸಿಂಗಲ್‌ ಹ್ಯಾಂಡೆಡ್‌ ಅಗಿ ಮ್ಯಾಚನ್ನು ಗೆಲ್ಲಿಸಿದ್ದಾರೆ. 11ನೇ ಓವರ್‌ನಲ್ಲಿ ಜೋಸ್‌ ಬಟ್ಲರ್‌ ಬ್ಯಾಟ್‌ನ ಔಟರ್‌ ಎಡ್ಜ್‌ ತಾಗಿ ಸೀದಾ ಬಂದಿದ್ದ ಅತ್ಯಂತ ಸಾಮಾನ್ಯ ಕ್ಯಾಚನ್ನು ದಿನೇಶ್‌ ಕಾರ್ತಿಕ್‌ ಕೈಚೆಲ್ಲಿದರು. ಈ ಹಂತದಲ್ಲಿ ಒಂದು ವಿಕೆಟ್‌ ಪಡೆದಿದ್ದರೆ, ಮ್ಯಾಚ್‌ ಸೆಣೆಸಾಟದಲ್ಲಿ ಆರ್‌ಸಿಬಿ ವಾಪಸ್‌ ಬಂದಿತು ಎನ್ನಬಹುದಿತ್ತು. ಆದರೆ ಈ ಕ್ಯಾಚ್‌ ತಪ್ಪಿದ್ದರಿಂದ ಪಂದ್ಯ ಒನ್‌ಸೈಡೆಡ್‌ ಆಗಿಯೇ ಮುಂದುವರಿದು, ಕೊನೆಗೆ ರಾಜಸ್ಥಾನ ಪರವಾಗಿಯೇ ಮುಕ್ತಾಯ ಕಂಡಿತು.

ಜೊಸ್‌ ಬಟ್ಲರ್‌ ಸಾಧನೆ:

ಈ ಬಾರಿ ಒಟ್ಟು 4 ಸೆಂಚುರಿ ಸಿಡಿಸಿ ಮಿಂಚಿದ ಬಟ್ಲರ್‌. ಒಟ್ಟು 16 ಪಂದ್ಯಗಳನ್ನು ಆಡಿ 824 ರನ್‌ ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಒಂದೇ ಆವೃತ್ತಿಯಲ್ಲಿ 700 ರನ್‌ ಗಳಿಸಿದ ಆಟಗಾರರಲ್ಲಿ ಜೊಸ್‌ ಬಟ್ಲರ್‌ ಆರನೇಯವರು. ಹಾಗೂ 800ಕ್ಕೂ ಅಧಿಕ ಸ್ಕೋರ್‌ ಮಾಡಿದ ಮೂರನೇ ಆಟಗಾರ.

ಈ ಹಿಂದೆ ಅರ್‌ಸಿಬಿ ಯಾವ ಹಂತದಲ್ಲಿ ಔಟ್‌ ಅಗಿತ್ತು?

ಈವರೆಗೆ ಒಟ್ಟು 15 ಆವೃತ್ತಿಗಳ ಐಪಿಎಲ್‌ ನಡೆದಿದೆ. ಆದರೆ ಆರ್‌ಸಿಬಿ ತಂಡವು ಒಂದೇ ಒಂದು ಬಾರಿಯೂ ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ. ಫ್ಯಾನ್ಸ್‌ ಪ್ರತಿ ಬಾರಿಯೂ ʼಈ ಸಲ ಕಪ್‌ ನಮ್ದೇʼ ಎಂಬ ಭರವಸೆಯಲ್ಲಿರುತ್ತಾರೆ. ಆದರೆ, ಪ್ರತಿಬಾರಿಯೂ ಆರ್‌ಸಿಬಿ ದುರದೃಷ್ಟದಿಂದ ಕಪ್‌ ಗೆಲ್ಲಲು ವಿಫಲವಾಗಿದೆ. ಆರ್‌ಸಿಬಿ ಒಟ್ಟು 3 ಬಾರಿ ಫೈನಲ್‌ ತಲುಪಿದೆ. ಆದರೆ ಚಾಂಪಿಯನ್‌ ಆಗದೇ ರನ್ನರ್‌ ಅಪ್‌ ಆಗಿದೆ..

ಇದನ್ನೂ ಓದಿ: IPL 2022 | ಆರ್‌ಸಿಬಿ‌ x ಆರ್‌ಆರ್ ಪಂದ್ಯದಲ್ಲಿ ಗೆದ್ದವರು ಫೈನಲ್‌ಗೆ, ಸೋತವರು ಮನೆಗೆ

Exit mobile version