ಚೆನ್ನೈ: ಸೋಮವಾರ ನಡೆದ ವಿಶ್ವಕಪ್ನ 22ನೇ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡ ದುರ್ಬಲ ಅಫಘಾನಿಸ್ತಾನ ತಂಡದ ವಿರುದ್ಧ 8 ವಿಕೆಟ್ಗಳಿಂದ ಹೀನಾಯವಾಗಿ ಸೋತು ಅವಮಾನಕ್ಕೆ ಈಡಾಗಿದೆ. ಪಾಕಿಸ್ತಾನದ ಸೋಲನ್ನು ಕೇವಲ ಆಫ್ಘನ್ ಮಾತ್ರವಲ್ಲ ಭಾರತೀಯರು ಸಂಭ್ರಮಿಸಿದ್ದಾರೆ. ಹೌದು, ಪಾಕಿಸ್ತಾನ ಸೋತ ಖುಷಿಯಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅವರು ಆಫ್ಘನ್ ಆಟಗಾರ ಜತೆ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ವೈರಲ್(Viral Video) ಆಗುತ್ತಿದೆ.
ಅಫ್ಘಾನಿಸ್ತಾನ ತಂಡದ ಆಟಗಾರರು ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವಿನ ಸಂಭ್ರಮವನ್ನು ಮಾಡಲು ಮೈದಾನಕ್ಕೆ ಬರುತ್ತಿದ್ದ ವೇಳೆ ನೇರವಾಗಿ ಆಟಗಾರರ ಬಳಿ ಬಂದ ಇರ್ಫಾನ್ ಪಠಾಣ್ ಅವರು ಕುಣಿಯಲು ಆರಂಭಿಸಿದರು. ಅಲ್ಲದೆ ಆಫ್ಘನ್ ಆಟಗಾರರು ಕುಣಿಯುವಂತೆ ಪ್ರೋತ್ಸಾಹಿಸಿದರು. ಈ ವೇಳೆ ರಶೀದ್ ಖಾನ್ ಅವರು ಇರ್ಫಾನ್ ಜತೆ ಹೆಜ್ಜೆ ಹಾಕಿದರು. ಬಳಿಕ ಇಬ್ಬರು ತಬ್ಬಿಕೊಂಡು ಧನ್ಯವಾದ ತಿಳಿಸಿದರು. ಇಷ್ಟಕ್ಕೇ ಸುಮ್ಮನಾಗದ ಇರ್ಫಾನ್ ಪಠಾಣ್ ತಮ್ಮ ಸಾಮಾಜಿಕ ಜಾಲತಾಣದವಾದ ಟ್ವಿಟರ್ ಎಕ್ಸ್ನಲ್ಲಿ “ಬಾಬರ್ ನಾಯಕತ್ವವು ವಿಶ್ವಕಪ್ನಲ್ಲಿ ಅದ್ಭುತ ಎಂಬಂತಿಲ್ಲ. ಅವರಲ್ಲಿ ಯಾವುದೇ ನಾಯತ್ವದ ಗುಣ ತೋರುತಿಲ್ಲ” ಗೆಲುವು ಕಂಡ ಆಫ್ಘನ್ ಆಟಗಾರರಿಗೆ ಅಭಿನಂದನೆಗಳು ಎಂದಿದ್ದಾರೆ. ಇರ್ಫಾನ್ ಪಠಾಣ್ ಅವರು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಕ್ರಿಕೆಟ್ ಸಂದರ್ಶನ ಮತ್ತು ಕಾಮೆಂಟ್ರಿಯನ್ನು ಮಾಡುತ್ತಿದ್ದಾರೆ.
ಇರ್ಫಾನ್ ಪಠಾಣ್ ಡ್ಯಾನ್ಸ್ನ ವಿಡಿಯೊ
Irfan Pathan dancing with Rashid Khan.
— Johns. (@CricCrazyJohns) October 23, 2023
– Video of the day from Chepauk…!!!pic.twitter.com/ijoMGqKht1
ಚೆನ್ನೈನ ಚೆಪಾಕ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟ್ ಮಾಡಲು ಮುಂದಾಯಿತು. ಅಂತೆಯೇ ಆಫ್ಘನ್ ಬೌಲರ್ಗಳೆದುರು ವೈಫಲ್ಯ ಕಂಡು ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗೆ 282 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಅಪಘಾನಿಸ್ತಾನ ತಂಡ ಇನ್ನೂ ಆರು ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 286 ರನ್ ಬಾರಿಸಿ ಎಂಟು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಇದು ಏಕ ದಿನ ಕ್ರಿಕೆಟ್ ಮಾದರಿಯಲ್ಲಿ ಪಾಕ್ ವಿರುದ್ಧ ಅಫಘಾನಿಸ್ತಾನ ತಂಡ ದಾಖಲಿಸಿದ ಮೊದಲ ವಿಜಯವಾಗಿದೆ.
ಇದನ್ನೂ ಓದಿ Team India : ಇನ್ನೆರಡು ದಿನ ಧರ್ಮಶಾಲಾದಲ್ಲಿ ಉಳಿಯುವುದಾಗಿ ಹೇಳಿದ ಟೀಮ್ ಇಂಡಿಯಾ
ಅದ್ಭುತ ಪ್ರದರ್ಶನ
ಸ್ಪರ್ಧಾತ್ಮಕ ಗುರಿಯನ್ನು ಪಡೆದಿದ್ದ ಅಫಘಾನಿಸ್ತಾನ ತಂಡದ ಬ್ಯಾಟರ್ಗಳು ತಮ್ಮ ಅದ್ಭುತ ಬ್ಯಾಟಿಂಗ್ ಕೌಶಲವನ್ನು ಪ್ರದರ್ಶಿಸಿದರು. ಉತೃಷ್ಟ ತಂಡಗಳು ನೀಡುವ ಪ್ರದರ್ಶನದಂತಿತ್ತು ಆಫ್ಘನ್ ಆಟಗಾರರ ಆಟ. ಆರಂಭಿಕ ಜೋಡಿಯಾಗಿರುವ ರಹ್ಮನುಲ್ಲಾ ಗುರ್ಬಜ್ (65) ಹಾಗೂ ಇಬ್ರಾಹಿಂ ಜದ್ರಾನ್ (87) ಮೊದಲ ವಿಕೆಟ್ಗೆ 130 ರನ್ ಬಾರಿಸಿ ಮಿಂಚಿದರು. ನಂತರದ ವಿಕೆಟ್ಗೆ ಇನ್ನೂ 60 ರನ್ ಸೇರ್ಪಡೆಗೊಂಡಿತು. ಮೂರನೇ ವಿಕೆಟ್ಗೆ 96 ರನ್ಗಳು ಸೇರ್ಪಡೆಗೊಂಡವು. ಮೂರನೇ ಕ್ರಮಾಂಕದಲ್ಲಿ ಆಡಿದ ರಹ್ಮತ್ ಶಾ (77) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ, ನಾಯಕ ಹಶ್ಮತುಲ್ಲಾ ಶಾಹಿದಿ 48 ರನ್ ಬಾರಿಸಿದರು. ಅಂದಹಾಗೆ ಮೊದಲ ಮೂವರು ಬ್ಯಾಟರ್ಗಳು ಅರ್ಧ ಶತಕ ಬಾರಿಸಿ ಮಿಂಚಿದರೆ, ಹಶ್ಮತುಲ್ಲಾ 2 ರನ್ಗಳ ಕೊರತೆಯಿಂದ ಅರ್ಧ ಶತಕದ ಅವಕಾಶ ತಪ್ಪಿಸಿಕೊಂಡರು. ಇದು ಏಕ ದಿನ ಮಾದರಿಯಲ್ಲಿ ಅಫಘಾನಿಸ್ತಾನ ತಂಡದ ಅಮೋಘ ಪ್ರದರ್ಶನ ಎನಿಸಿಕೊಳ್ಳಲಿದೆ.