Site icon Vistara News

Glenn Maxwell: ಕಾಂತಾರದ ‘ಪಂಜುರ್ಲಿ’ ಬಲದಿಂದ ಮ್ಯಾಕ್ಸ್‌ವೆಲ್‌ 201 ರನ್ ಚಚ್ಚಿದರೇ?

Glenn Maxwell

Is Kantara Movie's Panjurli Evoked On Glenn Maxwell To Score 201 Runs?

ಮುಂಬೈ: ಅಫಘಾನಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ತಂಡದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಸಿಡಿಲಬ್ಬರದ ದ್ವಿಶತಕ ಬಾರಿಸಿ, ವಿಶ್ವಕಪ್‌ ಸೆಮಿಫೈನಲ್‌ ತಲುಪುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದಕ್ಕೆ ಕ್ರಿಕೆಟ್‌ ಜಗತ್ತೇ ಅವರನ್ನು ಕೊಂಡಾಡುತ್ತಿದೆ. ವಿಶ್ವದಾಖಲೆಯ ದ್ವಿಶತಕದ ಜತೆಗೆ ಸೋಲಿನ ದವಡೆಗೆ ಸಿಲುಕಿದ್ದ ತಂಡವನ್ನು ಗೆಲುವಿನ ದಡ ಸೇರಿಸಿದ ಪರಿಗೆ ಕ್ರಿಕೆಟ್‌ ದಂತಕತೆಗಳಿಂದ ಹಿಡಿದು ಕ್ರಿಕೆಟ್‌ ಪ್ರೇಮಿಗಳವರೆಗೆ ಮಾರುಹೋಗಿದ್ದಾರೆ. ಇದರ ಬೆನ್ನಲ್ಲೇ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಭರ್ಜರಿ ಬ್ಯಾಟಿಂಗ್‌ಗೆ ಕನ್ನಡದ ಕಾಂತಾರ ಸಿನಿಮಾದ ಪಂಜುರ್ಲಿ ದೈವದ ನೆರವಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಹೌದು, ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವಾವೇಷದ ದೈವನರ್ತನ ಪಾತ್ರವು ಭಾರಿ ಗಮನ ಸೆಳೆದಿತ್ತು. ಇದೇ ದೈವ ನರ್ತಕನು ಗಾಯಗೊಂಡು ಮೈದಾನದಲ್ಲೇ ಒರಗಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರಿಗೆ ಆಶೀರ್ವಾದ ಮಾಡುವ, ಸ್ಫೂರ್ತಿ ತುಂಬಿ ಬಡಿದೆಬ್ಬಿಸುವ ರೀತಿಯ ಫೋಟೊಗಳನ್ನು ಜನ ಹಂಚಿಕೊಂಡಿದ್ದಾರೆ. “ಕಾಂತಾರದ ಪಂಜುರ್ಲಿ ದೈವವು ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಬ್ಯಾಟಿಂಗ್‌ಗೆ ನೆರವಾಯಿತು” ಎಂದೆಲ್ಲ ಬರೆದುಕೊಂಡಿದ್ದಾರೆ. ಈ ಫೋಟೊಗಳು ಹಾಗೂ ಪೋಸ್ಟ್‌ಗಳು ಭಾರಿ ವೈರಲ್‌ ಆಗಿವೆ.

ಮ್ಯಾಕ್ಸ್​ವೆಲ್​ ಕ್ರೀಸ್​ಗೆ ಪ್ರವೇಶಿಸಿದಾಗ, ಆಸ್ಟ್ರೇಲಿಯಾ 292 ರನ್​​ಗಳ ಗುರಿಯನ್ನು ಬೆನ್ನಟ್ಟಲು ಆರಂಭಿಸಿ 91 ರನ್​ಗೆ 7 ವಿಕೆಟ್​ ಕಳೆದುಕೊಂಡಿತ್ತು. ಆದರೆ ಮ್ಯಾಕ್ಸ್​ವೆಲ್​ ಅಸಾಧಾರಣ ಪ್ರದರ್ಶನವು ಸಿನಿಮೀಯ ರೀತಿಯಲ್ಲಿ ಫಲಿತಾಂಶವನ್ನು ಬದಲಿಸಿತು. ಅವರ ರೋಚಕ ಇನ್ನಿಂಗ್ಸ್ ಆಸ್ಟ್ರೇಲಿಯಾಕ್ಕೆ ಗುರಿಯನ್ನು ಬೆನ್ನಟ್ಟಲು ಸಹಾಯ ಮಾಡಿದ್ದಲ್ಲದೆ, ವಿಶ್ವಕಪ್ ಸೆಮಿಫೈನಲ್​ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿತು.

ಇದನ್ನೂ ಓದಿ: Glenn Maxwell: ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ಗ್ಲೆನ್​ ಮ್ಯಾಕ್ಸ್​ವೆಲ್

ವಾಂಖೆಡೆ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಅಫಘಾನಿಸ್ತಾನ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಉತ್ತಮವಾಗಿ ಬ್ಯಾಟ್ ಮಾಡಿ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 291 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ ಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್​ ನಷ್ಟಕ್ಕೆ 293 ರನ್ ಬಾರಿಸಿ ಗೆಲುವು ಸಾಧಿಸಿತು. ಇದು ಮುಂಬೈ ಸ್ಟೇಡಿಯಮ್​ನಲ್ಲಿ ಗರಿಷ್ಠ ರನ್ ಚೇಸ್ ಗೆಲುವಾಗಿದೆ. ಒಂದು ಹಂತದಲ್ಲಿ ಅಫಘಾನಿಸ್ತಾನ ತಂಡ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ, ಈ ಸೋಲು ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡಕ್ಕೆ ನಿಜವಾಗಿಯೂ ಹೃದಯ ಒಡೆದಂಥ ಅನುಭವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version