ಗೋವಾ: ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಬೆಂಗಳೂರು ಎಫ್‌ಸಿ(Bengaluru FC) ತಂಡ ಶನಿವಾರ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ(ISL Final) ಎಟಿಕೆ ಮೋಹನ್ ಬಗಾನ್(ATK Mohun Bagan) ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲ್ಗಳ ಅಂತರದ ಸೋಲು ಕಂಡಿದೆ.
ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ರೋಚಕ ಹಣಾಹಣಿಯಲ್ಲಿ ನಿಗದಿತ ಸಮಯದ ಆಟದಲ್ಲಿ 2-2 ಗೋಲ್ಗಳಿಂದ ಪಂದ್ಯ ಸಮಬಲಗೊಂಡಿತು. ಹೆಚ್ಚುವರಿ ಆಟದಲ್ಲಿ ಉಭಯ ತಂಡಗಳು ಗೋಲ್ ಬಾರಿಸಲು ವಿಫಲವಾದ ಕಾರಣ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಪ್ರಾಬಲ್ಯ ಮೆರೆದ ಎಟಿಕೆ ಮೋಹನ್ ಬಗಾನ್ ತಂಡದ ಆಟಗಾರರು 4 ಗೋಲ್ ಬಾರಿಸಿ ಗೆಲುವು ದಾಖಲಿಸಿದರು. ಲೀಗ್‌ನ ಆರಂಭದಲ್ಲಿ ನೀರಸ ಪ್ರದರ್ಶನ ನೀಡಿದ್ದ ಬೆಂಗಳೂರು ತಂಡ ಆ ಬಳಿಕ ಸತತ ಹತ್ತು ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ಇಲ್ಲಿ ಎಡವಿ ಟ್ರೋಫಿ ಎತ್ತಿಹಿಡಿಯುವ ಅದೃಷ್ಟ ಕಳೆದುಕೊಂಡಿತು. ಐಎಸ್‌ಎಲ್‌ನಲ್ಲಿ 2017-18 ರಲ್ಲಿ ರನ್ನರ್ಸ್ ಅಪ್ ಆಗಿದ್ದ ಬಿಎಫ್‌ಸಿ, 2018-19 ರಲ್ಲಿ ಚಾಂಪಿಯನ್ ಆಗಿತ್ತು.
ಬಿಎಸ್‌ಫಿ ತಂಡ ಸೆಮಿಫೈನಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಮಣಿಸಿದ್ದರೆ, ಬಗಾನ್ ತಂಡ ಕಳೆದ ಬಾರಿಯ ಚಾಂಪಿಯನ್ ಹೈದರಾಬಾದ್ ಎಫ್‌ಸಿ ವಿರುದ್ಧ ಗೆದ್ದಿತ್ತು. ಎರಡೂ ಪಂದ್ಯಗಳು ಪೆನಾಲ್ಟಿ ಶೂಟೌಟ್‌ನಲ್ಲಿ ಕೊನೆಗೊಂಡಿದ್ದವು. ಇದೀಗ ಫೈನಲ್ ಕೂಡ ಶೂಟೌಟ್‌ನಲ್ಲಿ ಮುಕ್ತಾಯಗೊಂಡದ್ದು ವಿಶೇಷ.