ಭಾರತದ ಆತಿಥ್ಯದಲ್ಲಿ ಮುಂದಿನ ಅಕ್ಟೋಬರ್- ನವೆಂಬರ್ನಲ್ಲಿ ನಡೆಯಲಿರುವ 13ನೇ ಆವೃತ್ತಿಯ ಏಕದಿನ ವಿಶ್ವ ಕಪ್ನಲ್ಲಿ ಸ್ಪರ್ಧಿಸುವ ಅವಕಾಶ ಒಂದು ಕಾಲದ ಕ್ರಿಕೆಟ್ ದೈತ್ಯ ರಾಷ್ಟ್ರ ವೆಸ್ಟ್ ಇಂಡೀಸ್ಗೆ ಇಲ್ಲ. ಅರ್ಹತಾ ಸುತ್ತಿನ ಟೂರ್ನಿಯ ಸೂಪರ್ ಸಿಕ್ಸ್ ಹಂತದಲ್ಲಿ ದುರ್ಬಲ ಸ್ಕಾಟ್ಲೆಂಡ್ ವಿರುದ್ಧ ಹೀನಾಯ 7 ವಿಕೆಟ್ಗಳ ಸೋಲಿಗೆ ಒಳಗಾಗುವುದರೊಂದಿಗೆ ವಿಂಡೀಸ್ ಕ್ರಿಕೆಟ್ನ ಹುಳುಕುಗಳು ಬಹಿರಂಗಗೊಂಡಿವೆ. ಚಿಂತಾಜನಕ ಸ್ಥಿತಿಯಲ್ಲಿ ಐಸಿಯು ಸೇರಿಕೊಂಡಿದ್ದ ವಿಂಡೀಸ್ ತಂಡದ ವೆಂಟಿಲೇಟರ್ ಅನ್ನು ಸ್ಕಾಟ್ಲೆಂಡ್ ತಂಡ ಕಿತ್ತು ಹಾಕಿದ ಹಾಗಾಗಿದೆ. ಒಟ್ಟಿನಲ್ಲಿ ವಿಂಡೀಸ್ ಕ್ರಿಕೆಟ್ನ ಈ ಕರುಣಾಜನಕ ಕತೆ ವಿಶ್ವ ಕ್ರಿಕೆಟ್ ಕ್ಷೇತ್ರದೊಂದು ದೊಡ್ಡ ಪಾಠ.
48 ವರ್ಷಗಳ ಏಕದಿನ ಕ್ರಿಕೆಟ್ ವಿಶ್ವ ಕಪ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ತಂಡ ಇದೇ ಮೊದಲ ಬಾರಿಗೆ ಪ್ರಮುಖ ಹಂತಕ್ಕೆ ಪ್ರವೇಶ ಪಡೆಯಲು ವಿಫಲಗೊಂಡಿತು ಎಂಬುದು ಅಚ್ಚರಿಯ ಸಮಾಚಾರ. 2019ರಲ್ಲಿ ಇಂಗ್ಲೆಂಡ್ನಲ್ಲಿ ಆಯೋಜನೆಗೊಂಡಿದ್ದ ಏಕದಿನ ವಿಶ್ವ ಕಪ್ ಬಳಿಕ ನಡೆದ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ವಿಫಲಗೊಂಡಿದ್ದ ವಿಂಡೀಸ್ ತಂಡ ರ‍್ಯಾಂಕ್ ಆಧಾರದಲ್ಲಿ ನೇರ ಅರ್ಹತೆ ಪಡೆದಿರಲಿಲ್ಲ. ಇದೀಗ ಅರ್ಹತಾ ಟೂರ್ನಿಯಲ್ಲೂ ಮುಗ್ಗರಿಸಿ ಭಾರವಾದ ಹೃದಯದೊಂದಿಗೆ ನಿರ್ಗಮಿಸಿದೆ.
ವೆಸ್ಟ್ ಇಂಡೀಸ್ ತಂಡ 70, 80 ಹಾಗೂ 90ರ ದಶಕದ ಆರಂಭದಲ್ಲಿ ಕ್ರಿಕೆಟ್ ಕ್ಷೇತ್ರದ ಸಾಮ್ರಾಟ ಎನಿಸಿಕೊಂಡಿತ್ತು. 1975 ಮತ್ತು 1979ರಲ್ಲಿ ಸತತವಾಗಿ ಎರಡು ಬಾರಿ ವಿಶ್ವ ಕಪ್ ಗೆದ್ದುಕೊಂಡಿತಲ್ಲದೆ, 1983ರಲ್ಲೂ ಫೈನಲ್ಗೆ ತಲುಪಿ ಕಪಿಲ್ ದೇವ್ ಸಾರಥ್ಯದ ಭಾರತ ತಂಡದ ವಿರುದ್ಧ ಸೋತು ರನ್ನರ್ಅಪ್ ಸ್ಥಾನ ಪಡೆದುಕೊಂಡಿತ್ತು. ಆ ಬಳಿಕವೂ ಜಮೈಕಾ, ಬಾರ್ಬಡೋಸ್, ಗಯಾನಾ, ಆಂಟಿಗುವಾ, ಟ್ರಿನಿಡಾಡ್ ಮತ್ತು ಟೊಬಾಗೊದ ದೈತ್ಯ ಕ್ರಿಕೆಟಿಗರು ದೀರ್ಘ ಕಾಲ ಕ್ರಿಕೆಟ್ ಕ್ಷೇತ್ರವನ್ನು ಆಳಿದ್ದರು.
ಗತ ವೈಭವದಲ್ಲಿದ್ದ ವಿಂಡೀಸ್ ಕ್ರಿಕೆಟ್ ಪತನದ ಹಾದಿಗೆ ಹೊರಳಿದ್ದು ಕಳೆದೆರಡು ದಶಕಗಳಿಂದ. ಅದಕ್ಕೆ ಪ್ರಮುಖ ಕಾರಣ ಅಲ್ಲಿನ ಕ್ರಿಕೆಟ್ ಮಂಡಳಿಯ ಬೇಜವಾಬ್ದಾರಿ. ವೆಸ್ಟ್ ಇಂಡೀಸ್ ಕ್ರಿಕೆಟ್ ಈಗ ನಾನಾ ರೀತಿಯ ಸಮಸ್ಯೆಯಿಂದ ಬಳಲುತ್ತಿದೆ. ಹಣಕಾಸು ನಿರ್ವಹಣೆಯಲ್ಲಿ ಸಂಪೂರ್ಣ ಸೋತಿದೆ. ಆಟಗಾರರಿಗೆ ಉತ್ತಮ ವೇತನ ಕೊಡಲೂ ಆಗುತ್ತಿಲ್ಲ. ಹೀಗಾಗಿ ಒಬ್ಬೊಬ್ಬರೇ ಕ್ರಿಕೆಟ್ ಮಂಡಳಿಯ ಜತೆಗಿನ ಸಂಬಂಧ ಕಳಚಿಕೊಂಡರು. ಇವೆಲ್ಲದರ ನಡುವೆಯೂ 2012 ಮತ್ತು 2016ರ ಟಿ20 ವಿಶ್ವ ಕಪ್ ಎತ್ತಿ ಹಿಡಿದಿತ್ತು ಕೆರಿಬಿಯನ್ ಬಳಗ.
ಸೂಕ್ತ ಸಂಭಾವನೆ ಪಡೆಯದೇ, ಸಮಸ್ಯೆಗಳ ನಡುವೆ ವಿಂಡೀಸ್ ಪತಾಕೆಯಡಿ ಆಡಲು ಅಲ್ಲಿನ ಆಟಗಾರರು ಆಡಲು ಮುಂದಾಗುತ್ತಿಲ್ಲ. ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಕ್ರಿಕೆಟ್ ಲೀಗ್ಗಳ ಕಡೆಗೆ ಅಲ್ಲಿಯ ಆಟಗಾರರು ಆಕರ್ಷಿತರಾಗಿದ್ದಾರೆ. ದೇಶೀಯ ಮತ್ತು ರಾಷ್ಟ್ರೀಯ ತಂಡದ ಬಗ್ಗೆ ಕಾಳಜಿ ಮೂಡಿಸುವಲ್ಲಿ ಅಲ್ಲಿ ಕ್ರಿಕೆಟ್ ಮಂಡಳಿ ವಿಫಲಗೊಂಡಿದೆ. 13 ದ್ವೀಪಗಳನ್ನು ಹೊಂದಿರುವ ರಾಷ್ಟ್ರದ ಕ್ರಿಕೆಟ್ ತಂಡಕ್ಕೆ ಸಮರ್ಥ ಆಟಗಾರರನ್ನು ಹುಡುಕಲು ಸಾಧ್ಯವಾಗಲಿಲ್ಲ. ನಿರೀಕ್ಷೆಯಂತೆ ವಿಂಡೀಸ್ ತಂಡ ಪಾತಾಳ ಕಚ್ಚಿದೆ. ಕ್ಲೈವ್ ಲಾಯ್ಡ್, ಇಯಾನ್ ಬಿಷಪ್, ಮಾಲ್ಕಮ್ ಮಾರ್ಷಲ್, ಗ್ಯಾರಿಫೀಲ್ಡ್ ಸೋಬರ್ಸ್, ವಿವಿಯನ್ ಡಿಚರ್ಡ್ಸ್, ಕರ್ಟ್ಲಿ ಆಂಬ್ರೋಸ್, ಚಂದ್ರಪಾಲ್, ಕರ್ಟ್ನಿ ವಾಲ್ಶ್, ಬ್ರಿಯಾನ್ ಲಾರಾ ಅವರಂಥ ಕ್ರಿಕೆಟ್ ದಿಗ್ಗಜರನ್ನು ನೋಡಿದ ತಂಡ ಬಿಕ್ಕಳಿಸುತ್ತಾ ಕುಳಿತಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಭ್ರಷ್ಟರಿಗೆ ಶಿಕ್ಷೆಯಾಗಲಿ, ಲೋಕಾಯುಕ್ತ ಬಲಿಷ್ಠವಾಗಲಿ
ನೈಜ ಕ್ರಿಕೆಟ್ ಬಗ್ಗೆ ಅಸಡ್ಡೆ ತೋರಿ ಟಿ20, ಟಿ10ನಂತಹ ಚುಟುಕು ಕ್ರಿಕೆಟ್ಗಳತ್ತ ಗಮನ ಕೊಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ವಿಶ್ವ ಕ್ರಿಕೆಟ್ನಲ್ಲಾಗುತ್ತಿರುವ ದೊಡ್ಡ ಬೆಳವಣಿಗೆ. ಈ ತಪ್ಪಿನ ಮೊದಲ ಬಲಿಪಶು ವಿಂಡೀಸ್ ತಂಡ ಎಂದುಕೊಂಡರೆ, ಮುಂದೆ ಹಲವು ದೇಶಗಳಿಗೆ ಇದೇ ಸಮಸ್ಯೆ ಎದುರಾಗುವುದು ನಿಶ್ಚಿತ. ಇದಕ್ಕೆ ಭಾರತವೂ ಹೊರತಲ್ಲ. ಜಾಗತಿಕ ಕ್ರಿಕೆಟ್ನ ನಿಯಂತ್ರಕ ಸಂಸ್ಥೆ ಐಸಿಸಿ ಹಾಗೂ ಆಯಾ ದೇಶಗಳ ಕ್ರಿಕೆಟ್ ಸಂಸ್ಥೆಗಳು ಈ ಕ್ಷಣದಿಂದಲೇ ಸುಧಾರಣೆ ಕಡೆಗೆ ಹೆಜ್ಜೆ ಇಟ್ಟರೆ ಜಂಟಲ್ಮ್ಯಾನ್ ಗೇಮ್ ಇನ್ನಷ್ಟು ವರ್ಷ ಬಾಳಬಹುದು.