ಮುಂಬಯಿ: ಐಪಿಎಲ್ 16ನೇ ಆವೃತ್ತಿಯ 42ನೇ ಪಂದ್ಯ ಐಪಿಎಲ್ (IPL 2023) ಇತಿಹಾಸದ 1000ನೇ ಹಣಾಹಣಿ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (124) ಶತಕ ಬಾರಿಸಿದರು. ಈ ಮೂಲಕ ಅವರು ಈ ಪಂದ್ಯ ಐಪಿಎಲ್ ಇತಿಹಾಸದ ಪುಟದಲ್ಲಿ ದಾಖಲಾಗುವಂತೆ ಮಾಡಿದರು. ಇವರ ಭರ್ಜರಿ ಇನಿಂಗ್ಸ್ನ ನೆರವು ಪಡೆದುಕೊಂಡ ರಾಜಸ್ಥಾನ್ ತಂಡ ಮೊದಲು ಬ್ಯಾಟ್ ಮಾಡಿ 212 ರನ್ ಪೇರಿಸಿತು. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ರನ್ಗಳು ಯಶಸ್ವಿ ಜೈಸ್ವಾಲ್ ಅವರದ್ದೇ.
ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದಕ್ಕೆ ಪೂರಕವಾಗಿ ಆಡಿದ ಆರ್ಆರ್ ಬ್ಯಾಟರ್ಗಳು ಎದುರಾಳಿ ತಂಡಕ್ಕೆ 213 ರನ್ಗಳ ಗೆಲುವಿನ ಗುರಿಯನ್ನು ಒಡ್ಡಿತು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆದರೆ, ಜೋಸ್ ಬಟ್ಲರ್ (18ರನ್) ಮತ್ತೊಂದು ಬಾರಿ ದೊಡ್ಡ ಮೊತ್ತ ಪೇರಿಸಲು ವಿಫಲಗೊಂಡರು. ಬಳಿಕ ಆಡಲು ಬಂದ ನಾಯಕ ಸಂಜು ಸ್ಯಾಮ್ಸನ್ ಕೂಡ (14 ರನ್) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ದೇವದತ್ ಪಡಿಕ್ಕಲ್ 2 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ವೆಸ್ಟ್ ಇಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್ 11 ರನ್ಗಳಿಗೆ ಔಟಾದರು. ಈ ಮೂಲಕ ರಾಜಸ್ಥಾನ್ ತಂಡದ ವಿಕೆಟ್ಗಳು ಸತತವಾಗಿ ಉರುಳಿದವು.
ಇದನ್ನೂ ಓದಿ : IPL 2023 : ಲಾಸ್ಟ್ ಬಾಲ್ ಥ್ರಿಲ್, ಚೆನ್ನೈ ವಿರುದ್ಧ ಪಂಜಾಬ್ ತಂಡಕ್ಕೆ 4 ವಿಕೆಟ್ ವಿಜಯ
ಅಬ್ಬರಿಸಿದ ಜೈಸ್ವಾಲ್
ಒಂದು ಕಡೆ ತನ್ನ ತಂಡದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಯುತ್ತಿದ್ದ ಹೊರತಾಗಿಯೂ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಐಪಿಎಲ್ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಇದು ಹಾಲಿ ಆವೃತ್ತಿಯ ಐಪಿಎಲ್ನಲ್ಲಿಎ ಎರಡನೇ ಶತಕವಾಗಿದೆ. ಒಟ್ಟು 62 ಎಸೆಗಳನ್ನು ಬಳಸಿಕೊಂಡ ಎಡಗೈ ಬ್ಯಾಟರ್ 16 ಫೋರ್ ಹಾಗೂ 8 ಸಿಕ್ಸರ್ ಮೂಲಕ ವೈಯುಕ್ತಿಕ ದಾಖಲೆಯೊಂದನ್ನು ಸೃಷ್ಟಿಸಿದರು. ಅದಕ್ಕೆ ಮೊದಲು 32 ಎಸೆತಗಳಲ್ಲಿ ಅರ್ಧ ಶತಕದ ಗಡಿ ದಾಟಿದ ಅವರು, 53 ಎಸೆತಗಳಲ್ಲಿ ಶತಕದ ಸಾಧನೆ ಮಾಡಿದರು. ಯಶಸ್ವಿ ಜೈಸ್ವಾಲ್ ಐಪಿಎಲ್ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ. ಅವರಿಗೆ 19 ವರ್ಷ 253 ದಿನಗಳು.
ಕೊನೆಯಲ್ಲಿ ಶಿಮ್ರೋನ್ ಹೆಟ್ಮಾಯರ್ 8 ರನ್ ಬಾರಿಸಿದರೆ, ಆರ್ ಅಶ್ವಿನ್ ಕೂಡ ಅಷ್ಟೇ ರನ್ ಕೊಡುಗೆ ಕೊಟ್ಟರು. ಮುಂಬಯಿ ಪರ ಬೌಲಿಂಗ್ನಲ್ಲಿ ಅರ್ಶದ್ ಖಾನ್ 3 ವಿಕೆಟ್ ಕಬಳಿಸಿದರೆ, ಪಿಯೂಷ್ ಚಾವ್ಲಾ 2 ವಿಕೆಟ್ ಉರುಳಿಸಿದರು.