ನವ ದೆಹಲಿ: ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದ ಭಾರತ ಕ್ರಿಕೆಟ್ ತಂಡದ ಹಂಗಾಮಿ ನಾಯಕ ಕೆ.ಎಲ್. ರಾಹುಲ್ ಹೊರಗುಳಿದಿದ್ದಾರೆ.
ಗುರುವಾರ ನವ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಸರಣಿಯ ಆರಂಭಿಕ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ಈ ಬೆಳವಣಿಗೆ ನಡೆದಿದೆ. ರಾಹುಲ್ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ತಂಡವನ್ನು ಮುನ್ನಡೆಸಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ T20 ಸರಣಿಯಲ್ಲಿ ರಾಹುಲ್ ಭಾಗವಹಿಸದಿರಲು ಕಾರಣ ಅವರ ತೊಡೆಸಂದು ಗಾಯ. ರಾಹುಲ್ ಜೊತೆಗೆ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಕೂಡ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಮಂಗಳವಾರ ಸಂಜೆ ಬ್ಯಾಟಿಂಗ್ ಮಾಡುವಾಗ ಅವರ ಬಲಗೈಗೆ ಪೆಟ್ಟಾಗಿತ್ತು.
ಈ ನಡುವೆ ಕುತೂಹಲಕಾರಿ ಪ್ರಕಟಣೆಯೊಂದರಲ್ಲಿ, ಹಾರ್ದಿಕ್ ಪಾಂಡ್ಯ ಅವರನ್ನು ಸರಣಿಗೆ ಉಪನಾಯಕರನ್ನಾಗಿ ಬಿಸಿಸಿಐ ಹೆಸರಿಸಿದೆ. “ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿಗೆ ನಾಯಕನಾಗಿ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಉಪನಾಯಕರನ್ನಾಗಿ ಬಿಸಿಸಿಐ ನೇಮಿಸಿದೆ” ಎಂದು ಬಿಸಿಸಿಐ ಟ್ವೀಟ್ ಮಾಡಿದೆ. “ಟೀಮ್ ಇಂಡಿಯಾ ಕ್ಯಾಪ್ಟನ್ ಕೆ.ಎಲ್. ರಾಹುಲ್ ಬಲ ತೊಡೆಸಂದು ಗಾಯದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಕುಲದೀಪ್ ಯಾದವ್ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಬಲಗೈಗೆ ಪೆಟ್ಟಾದ ಕಾರಣ ಸರಣಿಯಿಂದ ಹೊರಗುಳಿಯಲಿದ್ದಾರೆ” ಎಂದು ಪ್ರಕಟಿಸಿದೆ.
ಇದನ್ನೂ ಓದಿ: T20 Ind vs SA | ರಾಹುಲ್ ದ್ವಯರ ತಲೆ ಕೆಡಿಸಿದ ಟೀಂ ಇಂಡಿಯಾ ಕಾಂಬಿನೇಷನ್, ಆಡುವ ಬಳಗದ್ದೇ ಚರ್ಚೆ
ಮಂಗಳವಾರ ಮತ್ತು ಬುಧವಾರ ಭಾರತ ತಂಡದ ಅಭ್ಯಾಸದಲ್ಲಿ ರಾಹುಲ್ ಭಾಗವಹಿಸಲಿಲ್ಲ. ಸೋಮವಾರದ ಮೊದಲ ಐಚ್ಛಿಕ ನೆಟ್ ಸೆಷನ್‌ಗೆ ಬಂದು ಸ್ಪಿನ್ನರ್‌ಗಳ ವಿರುದ್ಧ ಬ್ಯಾಟ್ ಮಾಡಿದ್ದರು. ರಾಹುಲ್ ಮತ್ತು ಕುಲದೀಪ್ ಇಬ್ಬರೂ ಎನ್‌ಸಿಎಗೆ ತೆರಳಿದ್ದು, ಅಲ್ಲಿನ ವೈದ್ಯಕೀಯ ತಂಡವು ಅವರ ಫಿಟ್‌ನೆಸ್ ಮೇಲ್ವಿಚಾರಣೆ ನಡೆಸುತ್ತಿದೆ ಹಾಗೂ ಮುಂದಿನ ಚಿಕಿತ್ಸೆಯನ್ನು ನಿರ್ಧರಿಸಲಿದೆ.
ರಾಹುಲ್ ಅನುಪಸ್ಥಿತಿಯಲ್ಲಿ ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಅವರು ಭಾರತದ ಬ್ಯಾಟಿಂಗ್ ಓಪನಿಂಗ್ ಮಾಡುವ ನಿರೀಕ್ಷೆಯಿದೆ. ಬೇರೆ ಯಾವ ಹೆಸರುಗಳೂ ಬದಲಾಗಿಲ್ಲ.
ನಾಲ್ಕು ತಿಂಗಳ ಅವಧಿಯಲ್ಲಿ ರಾಹುಲ್ ಗಾಯಗೊಂಡಿರುವುದು ಇದು ಎರಡನೇ ಬಾರಿ. ಫೆಬ್ರವರಿಯಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ T20 ಸರಣಿಯಲ್ಲಿ ಅವರ ಎಡ ಮಂಡಿಗೆ ಹಾನಿಯಾಗಿತ್ತು. ಎರಡನೇ ಏಕದಿನದಲ್ಲಿ ಫೀಲ್ಡಿಂಗ್ ಮಾಡುವಾಗ ಹೊರಗುಳಿದಿದ್ದರು. ಕುಲದೀಪ್ ಈ ಐಪಿಎಲ್ ಸರಣಿಯಲ್ಲಿ ಉತ್ತಮ ಫಾರ್ಮ್ ತೋರಿಸಿದ್ದಾರೆ. ಇಲ್ಲಿ ಅವರು ದೆಹಲಿ ಕ್ಯಾಪಿಟಲ್ಸ್ ಕಡೆ 21 ವಿಕೆಟ್ ಪಡೆದಿದ್ದರು. ಕುಲದೀಪ್ ಗಾಯಗೊಂಡಿರುವ ಕಾರಣ ಯುಜುವೇಂದ್ರ ಚಾಹಲ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಬೌಲಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಕಳೆದ ವರ್ಷ ಐಪಿಎಲ್ ಸರಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪಂತ್ ಮುನ್ನಡೆಸಿದ್ದರು. ನಂತರ ಅವರ ನಾಯಕತ್ವದ ಬಗ್ಗೆ ಸಮರ್ಥನೆ ಹೆಚ್ಚಿದೆ. 24ರ ಹರೆಯದ ಪಂತ್, ರೋಹಿತ್ ಶರ್ಮಾ ಅವರ ನಂತರ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಆದರೆ ರಾಹುಲ್ ಮತ್ತು ಹಾರ್ದಿಕ್‌ರಿಂದ ಅವರಿಗೆ ಸ್ಪರ್ಧೆ ಎದುರಾಗಬಹುದು. ರಾಹುಲ್ ನಾಯಕತ್ವದಲ್ಲಿ, ಭಾರತ ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸೋತಿದೆ. ಏಕದಿನ ಸರಣಿಯನ್ನು 0-3ರಲ್ಲಿ ಕಳೆದುಕೊಂಡಿತು. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಅವರು ಭಾರತವನ್ನು ಮುನ್ನಡೆಸಿದಾಗಲೂ ಭಾರತವು ಸೋಲನುಭವಿಸಿತ್ತು.
ಇದನ್ನೂ ಓದಿ: IPL 2022| ಹಾರ್ದಿಕ್ ಕಮಾಲ್, ನಾಯಕನಾದ ಮೊದಲ ಟೂರ್ನಿಯಲ್ಲೆ ಟ್ರೋಫಿ ಗೆದ್ದ ಪಾಂಡ್ಯ
ಹಾರ್ದಿಕ್ ಆಲ್‌ರೌಂಡರ್ ಆಗಿ ಉತ್ತಮ ಫಾರ್ಮ್ ಹೊಂದಿದ್ದಾರೆ. ರೋಹಿತ್‌ಗೆ ಸಂಭಾವ್ಯ ಉತ್ತರಾಧಿಕಾರಿಯಾಗಿ ಹಾರ್ದಿಕ್ ಮತ್ತು ಪಂತ್ ಹೆಸರುಗಳು ಕೇಳಿ ಬರುತ್ತಿವೆ. ಕಳೆದ ಬಾರಿ ಅವರು ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಮುನ್ನಡೆಸಿ ತಂಡದ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.
ಇದರೊಂದಿಗೆ ದಕ್ಷಿಣ ಆಫ್ರಿಕ ವಿರುದ್ಧ ಸರಣಿಗೆ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜ ಹೊರಗುಳಿದಂತಾಗಿದೆ.