Site icon Vistara News

Karun Nair: ಕರ್ನಾಟಕ ತಂಡ ತೊರೆದು ವಿದರ್ಭ ಸೇರಿದ ಕರುಣ್ ನಾಯರ್

Karun Nair joins Vidarbha

ಬೆಂಗಳೂರು: ಅನುಭವಿ ಮತ್ತು ಹಿರಿಯ ಆಟಗಾರ ಕರುಣ್ ನಾಯರ್(Karun Nair) ಅವರು ತಮ್ಮ ತವರು ತಂಡವಾದ ಕರ್ನಾಟಕವನ್ನು(Karnataka cricket team) ತೊರೆದು ವಿದರ್ಭ ತಂಡವನ್ನು ಸೇರಿಕೊಂಡಿದ್ದಾರೆ. ಮುಂದಿನ ಆವೃತ್ತಿಯ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ವಿದರ್ಭ(Vidarbha cricket team) ಪರ ಕಣಕ್ಕಿಳಿಯಲಿದ್ದಾರೆ. ಕರ್ನಾಟಕ ತಂಡ(Karun Nair joins Vidarbha) ತೊರೆದ ವಿಚಾರವನ್ನು ಕರುಣ್​ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಖಚಿತಪಡಿಸಿದ್ದಾರೆ.

ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ ಮತ್ತು ಅನೇಕ ಸ್ಟಾರ್​ ಆಟಗಾರು ತಂಡದಲ್ಲಿ ಮಿಂಚುತ್ತಿರುವ ಕಾರಣದಿಂದ ಕಳೆದ ಋತುವಿನಲ್ಲಿ ಸಿದ್ಧಾರ್ಥ್, ಕರುಣ್​ ನಾಯರ್​ಗೆ ಸರಿಯಾದ ಅವಕಾಶ ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ಈ ಬಾರಿ ತಂಡ ತೊರೆದು ಬೇರೆ ತಂಡದ ಪರ ತಮ್ಮ ಕ್ರಿಕೆಟ್​ ಜೀವನ ಮುಂದುವರಿಸಲು ನಿರ್ಧರಿಸಿದ್ದಾರೆ. ಕರ್ನಾಟಕ ತಂಡದ ಪರ ಅವರು ಆಡಿದ ಕೆಲ ಅವಿಸ್ಮರಣೀಯ ಇನಿಂಗ್ಸ್​ನ ಫೋಟೊಗಳನ್ನಿ ಇನ್​ಸ್ಟಾಗ್ರಾಮ್​ನಲ್ಲಿ ಪ್ರಕಟಿಸಿ ವಿದರ್ಭ ಪರ ಆಡುವ ವಿಚಾರವನ್ನು ತಿಳಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಕ್ರಿಕೆಟ್​ ಅವಕಾಶ ನೀಡಿದ ಕರ್ನಾಟಕ ಕ್ರಿಕೆಟ್​ ಮಂಡಳಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

2012ರಲ್ಲಿ ಕರುಣ್​ ಅವರು ಕರ್ನಾಟಕ ಪರ ಪದಾರ್ಪಣೆ ಮಾಡಿದರು. ಆರಂಭಿಕ ಹಂತದಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಒಂದೇ ವರ್ಷದಲ್ಲಿ ಮೂರು ಸ್ವರೂಪಗಳ ತಂಡದಲ್ಲಿ ಅವಕಾಶ ಪಡೆದರು. ಅವರ ಈ ಪ್ರದರ್ಶನ ಭಾರತ ತಂಡದ ಆಯ್ಕೆಗೂ ಕಾರಣವಾಗಿತ್ತು. ಆದರೆ ಹೆಚ್ಚು ದಿನಗಳ ಕಾಲ ಭಾರತ ತಂಡದ ಪರ ಆಡುವ ಅದೃಷ್ಟ ಮಾತ್ರ ಅವರ ಪಾಲಿಗೆ ಒಲಿಯಲಿಲ್ಲ.

ತ್ರಿಶತಕ ಬಾರಿಸಿದ ಎರಡನೇ ಭಾರತೀಯ

ಇಂಗ್ಲೆಂಡ್ ವಿರುದ್ಧದ ಚೆನ್ನೈಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಅವರು ಶ್ರೇಷ್ಠ ಬ್ಯಾಟಿಂಗ್​ ಮೂಲಕ ಅಜೇಯ ತ್ರಿಶತಕ ಬಾರಿಸಿದ್ದರು. ಈ ಮೂಲಕ ವೀರೆಂದ್ರ ಸೆಹವಾಗ್ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆದರೆ ಇದಾದ ಬಳಿಕ ಕರುಣ್ ನಾಯರ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

ಕರುಣ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 6 ಟೆಸ್ಟ್ ಮತ್ತು 2 ಏಕ ದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ ತ್ರಿಶತಕ ಸೇರಿದಂತೆ ಒಟ್ಟು 374 ರನ್ ಗಳಿಸಿದ್ದಾರೆ. ಇದರ ಜತೆಗೆ ಏಕ ದಿನ ಕ್ರಿಕೆಟ್‌ನಲ್ಲಿ 2 ಪಂದ್ಯಗಳಲ್ಲಿ 46 ರನ್ ಗಳಿಸಿದ್ದಾರೆ. ಜೂನ್ 2016 ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಇದಾಗ ಬಳಿಕ ಅವರು ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ Karun Nair | ಕ್ರಿಕೆಟ್​ನಲ್ಲಿ ಒಂದು ಅವಕಾಶ ನೀಡಿ; ಕರುಣ್ ನಾಯರ್​​ ಹತಾಶೆಯ ಟ್ವೀಟ್​

ದೇಶಿ ಕ್ರಿಕೆಟ್​ನಲ್ಲಿ ಉತ್ತಮ ಸಾಧನೆ

ಕರುಣ್ ನಾಯರ್ ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ 48.94 ಸರಾಸರಿಯಲ್ಲಿ 15 ಶತಕ ಮತ್ತು 27 ಅರ್ಧ ಶತಕಗಳೊಂದಿಗೆ 5922 ರನ್ ಗಳಿಸಿದ್ದಾರೆ. ಅವರು 90 ಲಿಸ್ಟ್ ಎ ಪಂದ್ಯಗಳಲ್ಲಿ 2 ಶತಕ ಮತ್ತು 12 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 2119 ರನ್ ಗಳಿಸಿದ್ದಾರೆ. 150 ಟಿ20 ಪಂದ್ಯಗಳಲ್ಲಿ 2 ಶತಕ ಮತ್ತು 16 ಅರ್ಧ ಶತಕ ಬಾರಿಸಿ 2989 ರನ್ ಕಲೆಹಾಕಿದ್ದಾರೆ.

ರಣಜಿ ಯಾವಾಗ ಆರಂಭ?

ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಾದ ರಣಜಿ ಟ್ರೋಫಿ (Ranji Trophy) 2024ರ ಜನವರಿ 5ರಿಂದ ಆರಂಭವಾಗಲಿದೆ. ಲೀಗ್ ಹಂತವು ಫೆಬ್ರವರಿ 19ರಂದು ಕೊನೆಗೊಳ್ಳಲಿದೆ. ನಾಕೌಟ್ ಸುತ್ತುಗಳು ಫೆಬ್ರವರಿ 23 ರಂದು ಪ್ರಾರಂಭವಾಗಲಿದ್ದು, ಪಂದ್ಯಾವಳಿಯು ಮಾರ್ಚ್ 14 ರಂದು ಕೊನೆಗೊಳ್ಳಲಿದೆ.

ರಣಜಿ ಟ್ರೋಫಿಯಲ್ಲಿ ಎಲೈಟ್ ಮತ್ತು ಪ್ಲೇಟ್ ಎಂಬ ಎರಡು ವಿಭಾಗಗಳು ಇರಲಿದ್ದು, ಅಗ್ರ ವಿಭಾಗದಲ್ಲಿ ಎಂಟು ತಂಡಗಳ ನಾಲ್ಕು ಗುಂಪುಗಳು ಇರಲಿವೆ ಮತ್ತು ಕೆಳಗಿನ ವಿಭಾಗವು ಆರು ತಂಡಗಳ ಒಂದು ಗುಂಪನ್ನು ಒಳಗೊಂಡಿರುತ್ತದೆ. ಎಲೈಟ್ ವಿಭಾಗದ ಒಂದು ತಂಡವು ಚಾಂಪಿಯನ್​ ಆಗಲು 10 ಪಂದ್ಯಗಳನ್ನು ಆಡಬೇಕು. ಇದರಲ್ಲಿ ಏಳು ಲೀಗ್ ಪಂದ್ಯಗಳು ಸೇರಿವೆ, ನಂತರ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್.

Exit mobile version