Site icon Vistara News

IPL 2023 : ತವರಿನಲ್ಲಿ ಕೆಕೆಆರ್ ಮಿಂಚು; ಆರ್​ಸಿಬಿಗೆ 81 ರನ್​ಗಳ ಹೀನಾಯ ಸೋಲು

KKR has included the player of the game in the T20 match itself

#image_title

ಕೋಲ್ಕೊತಾ: ಆರ್​ಸಿಬಿಯ ಬೌಲರ್​ಗಳ ದೌರ್ಬಲ್ಯ ಹಾಗೂ ಬ್ಯಾಟ್ಸ್​​ಮನ್​ಗಳ ಅಸ್ಥಿರ ಪ್ರದರ್ಶನದಿಂದಾಗಿ ಐಪಿಎಲ್​ 16ನ ಆವೃತ್ತಿಯ (IPL 2023) 9ನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧ 81 ರನ್​ಗಳ ಹೀನಾಯ ಸೋಲಿಗೆ ಒಳಗಾಯಿತು. ಇದರೊಂದಿಗೆ ಮುಂಬಯಿ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಎಂಟು ವಿಕೆಟ್​ಗಳ ಗೆಲುವು ದಾಖಲಿಸಿದ್ದ ಫಾಫ್​ ಡು ಪ್ಲೆಸಿಸ್​ ಬಳಗದ ಖುಷಿ ಒಂದೇ ಪಂದ್ಯಕ್ಕೆ ಸೀಮಿತಗೊಂಡಿತು. ಕೆಕೆಅರ್​ ಸ್ಪಿನ್ನರ್​​ಗಳ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ಸಂಪೂರ್ಣ ವಿಫಲಗೊಂಡ ಆರ್​ಸಿಬಿ ತಂಡದ ಬ್ಯಾಟರ್​​ಗಳು ಪಂದ್ಯದುದ್ದಕ್ಕೂ ಪೆವಿಲಿಯನ್​ ಪರೇಡ್​ ನಡೆಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಇಲ್ಲಿ ಈಡನ್​ ಗಾರ್ಡನ್ಸ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕೊತಾ ನೈಟ್​ ರೈಡರ್ಸ್​ ಬಳಗ ನಿಗದಿತ 20 ಓವರ್​ಗಳಲ್ಲಿ 204 ರನ್​ ಬಾರಿಸಿತು. ದೊಡ್ಡ ಗುರಿಯನ್ನು ಬೆನ್ನಟ್ಟಲು ಮುಂದಾದ ಆರ್​ಸಿಬಿ ಸತತವಾಗಿ ವಿಕೆಟ್​ ಕಳೆದುಕೊಂಡು 17.4 ಓವರ್​ಗಳಲ್ಲಿ 123 ರನ್​ಗಳಿಗೆ ಆಲ್​ಔಟ್​ ಆಗಿ ಸೋಲೊಪ್ಪಿಕೊಂಡಿತು.

ದೊಡ್ಡ ಗುರಿ ಬೆನ್ನಟ್ಟಲು ಹೊರಟ ಆರ್​ಸಿಬಿ ಆರಂಭಿಕರಾದ ವಿರಾಟ್​ ಕೊಹ್ಲಿ (21) ಹಾಗೂ ಫಾಫ್​ ಡು ಪ್ಲೆಸಿಸ್​ (23) ಎದುರಾಳಿ ಬೌಲರ್​ಗಳಿಗೆ ಬೆದರಿದಂತೆ ಬ್ಯಾಟ್​ ಮಾಡಿದರು. ಅವರು ಔಟಾದ ಬಳಿಕ ಆರ್​ಸಿಬಿ ಸತತವಾಗಿ ವಿಕೆಟ್​ ಕಳೆದುಕೊಂಡಿತು. ಮೈಕೆಲ್​ ಬ್ರೇಸ್​ವೆಲ್​ (19), ಗ್ಲೆನ್​ ಮ್ಯಾಕ್ಸ್​ವೆಲ್​ (5), ಹರ್ಷಲ್ ಪಟೇಲ್​ (0), ಶಹಬಾಜ್​ ಅಹಮದ್​ (1), ದಿನೇಶ್ ಕಾರ್ತಿಕ್​ (9) ಆರ್​ಸಿಬಿ ಸೋಲಿಗೆ ಕಾರಣರಾದರು. ಕೊನೇ ಹಂತದಲ್ಲಿ ಡೇವಿಡ್​ ವಿಲ್ಲಿ (20) ಹಾಗೂ ಆಕಾಶ್​ದೀಪ್​ (17) ಸ್ವಲ್ಪ ಹೊತ್ತು ಬ್ಯಾಟಿಂಗ್ ಮಾಡಿ ತಂಡದ ಮೊತ್ತ 100 ಗಡಿ ದಾಟುವಂತೆ ನೋಡಿಕೊಂಡರು.

ಕೋಲ್ಕೊತಾ ತಂಡದ ಬೌಲಿಂಗ್ ವಿಭಾಗದಲ್ಲಿ ವರುಣ್​ ಚಕ್ರವರ್ತಿ 15 ರನ್​ಗಳಿಗೆ 3 ವಿಕೆಟ್​ ಕಬಳಿಸಿದರೆ, ಇಂಪ್ಯಾಕ್ಟ್ ಪ್ಲೇಯರ್​ ಮೂಲಕ ಐಪಿಎಲ್​ಗೆ ಪದಾರ್ಪಣೆ ಮಾಡಿದ ಸುಯಾಶ್​ ಶರ್ಮಾ 30 ರನ್​ಗಳಿಗೆ 3 ವಿಕೆಟ್​ ಪಡೆದು ಮಿಂಚಿದರು. ಸುನೀಲ್​ ನರೈನ್​ 2 ವಿಕೆಟ್ ಉರುಳಿಸಿದರೆ ಶಾರ್ದುಲ್​ ಠಾಕೂರ್​ 1 ವಿಕೆಟ್​ ಪಡೆದರು.

ಶಾರ್ದೂಲ್​ ಠಾಕೂರ್​ ಅಬ್ಬರ

ಅದಕ್ಕಿಂತ ಮೊದಲು ಬ್ಯಾಟ್​ ಮಾಡಿದ ಕೋಲ್ಕೊತಾ ತಂಡದ ಪರ ಶಾರ್ದೂಲ್​ ಠಾಕೂರ್​ (68 ರನ್​, 29 ಎಸೆತ, 9 ಫೋರ್​, 3 ಸಿಕ್ಸರ್​) ಅವರ ವಿಸ್ಫೋಟಕ ಬ್ಯಾಟಿಂಗ್ನೆ ನಡೆಸಿದರು. ಠಾಕೂರ್​ಗೆ ಬೆಂಬಲವಾಗಿ ನಿಂತ ರಿಂಕು ಸಿಂಗ್​ 33 ಎಸೆತಗಳಲ್ಲಿ 46 ರನ್​ ಬಾರಿಸಿದ್ದಾರೆ. ಈ ಜೋಡಿ ಆರನೇ ವಿಕೆಟ್​ಗೆ 112 ರನ್​ ಬಾರಿಸುವ ಮೂಲಕ ಆರಂಭಿಕ ಮುನ್ನಡೆ ಪಡೆದಿದ್ದ ಆರ್​ಸಿಬಿ ಹೆಚ್ಚು ಹೊತ್ತು ಖುಷಿ ಪಡದಂತೆ ನೋಡಿಕೊಂಡಿತು.

ಕೆಕೆಆರ್​​ ಆರಂಭಿಕ ಬ್ಯಾಟರ್ ವೆಂಕಟೇಶ್ ಅಯ್ಯರ್​ ಅವರನ್ನು ಬೌಲ್ಡ್ ಮಾಡಿದ ಡೇವಿಡ್​ ವಿಲ್ಲಿ ಆರ್​ಸಿಬಿಗೆ ಉತ್ತಮ ಆರಂಭ ತಂದುಕೊಟ್ಟರು. 26 ರನ್​ಗಳಿಗೆ ಮೊದಲ ವಿಕೆಟ್​ ಕಳೆಕೊಂಡು ಕೋಲ್ಕೊತಾ ನಂತರದ ಎಸೆತದಲ್ಲಿ ಮನ್​ದೀಪ್​ ಸಿಂಗ್​ ವಿಕೆಟ್ ಕೂಡ ಶೂನ್ಯಕ್ಕೆ ಔಟಾದರು. ಅವರು ಕೂಡ ವಿಲ್ಲಿ ಎಸೆತಕ್ಕೆ ಬೌಲ್ಡ್ ಆದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ನಾಯಕ ನಿತೀಶ್​ ರಾಣಾ ಅವರು ಬ್ರೇಸ್​ವೆಲ್​ ಬೌಲಿಂಗ್​ಗೆ ಔಟಾದರು. ಅವರ ಗಳಿಕೆ ಕೇವಲ ಒಂದು ರನ್​. 89ಕ್ಕೆ 4 ವಿಕೆಟ್​ ನಷ್ಟ ಮಾಡಿಕೊಂಡ ಕೋಲ್ಕೊತಾ ಆತಂಕಕ್ಕೆ ಬಿತ್ತು. ಸ್ಫೋಟಕ ಬ್ಯಾಟರ್​ ಆ್ಯಂಡ್ರೆ ರಸೆಲ್​ ಕೂಡ ಶೂನ್ಯಕ್ಕೆ ಔಟಾಗುವುದರೊಂದಿಗೆ ಆರ್​​ಸಿಬಿ ಪಾಳೆಯದಲ್ಲಿ ಸಂತೋಷ ಹೆಚ್ಚಿತು.

ಎಂಟು ಓವರ್​​ಗಳಲ್ಲಿ 110 ರನ್​

11.3 ಓವರ್​ಗಳಲ್ಲಿ89 ರನ್​ಗಳಿಗೆ ಐದು ವಿಕೆಟ್​ ಕಳೆದುಕೊಂಡ ಕೋಲ್ಕೊತಾ ದೊಡ್ಡ ಮೊತ್ತ ಪೇರಿಸಲು ಸಾಧ್ಯವೇ ಇಲ್ಲ ಎಂದು ಆರ್​ಸಿಬಿ ಬಳಗ ಭಾವಿಸಿತ್ತು. ಆದರೆ, ಆ ಲೆಕ್ಕಾಚಾರವನ್ನು ಶಾರ್ದೂಲ್​ ಹಾಗೂ ರಿಂಕು ಸಿಂಗ್ ಸುಳ್ಳಾಗಿಸಿದರು. ಕ್ರೀಸ್​ಗೆ ಬಂದ ಶಾರ್ದೂಲ್​ ನುರಿತ ಬ್ಯಾಟರ್​ಗಳು ನಾಚುವಂತೆ ರನ್ ಗಳಿಸಿದರು. 20 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಅವರು 29 ಎಸೆತಗಳಲ್ಲಿ 68 ರನ್​ ಬಾರಿಸಿದರು. ಆರಂಭದಲ್ಲಿ ಹೆಚ್ಚು ನಿಧಾನವಾಗಿ ಆಡಿದ ರಿಂಕು ಸಿಂಗ್ ಕೂಡ ಬಳಿಕ ಫೋರ್, ಸಿಕ್ಸರ್​ಗಳ ಮಳೆ ಸುರಿಸಿದರು. ಇವರಿಬ್ಬರ ಬ್ಯಾಟಿಂಗ್ ಅಬ್ಬರಕ್ಕೆ ಆರ್​ಸಿಬಿ ಬೌಲರ್​ಗಳು ನಿರುತ್ತರರಾದರು.

ಇದನ್ನೂ ಓದಿ : IPL 2023: ಆರ್​ಸಿಬಿ ಈ ಬಾರಿಯೂ​ ಕಪ್ ಗೆಲ್ಲಲ್ಲ; ಎಬಿಡಿ ವಿಲಿಯರ್ಸ್​ ಅಚ್ಚರಿಯ ಹೇಳಿಕೆ

ರಿಂಕು ಸಿಂಗ್​ ಹಾಗೂ ಶಾರ್ದೂಲ್​ ಬ್ಯಾಟಿಂಗ್ ಅಬ್ಬರಕ್ಕೆ ಕೊನೇ 48 ಎಸೆತಗಳಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ 110 ರನ್ ಬಾರಿಸಿತು. ಈ ಮೂಲಕ ಆರ್​ಸಿಬಿ ಯೋಜನೆ ಬುಡಮೇಲಾಯಿತು. ಮೊದಲು ಉತ್ತಮ ಬೌಲಿಂಗ್ ಮಾಡಿದ್ದ ಆರ್​ಸಿಬಿ ಬೌಳರ್​ಗಳು ಬಳಿಕ ಅನಿಯಂತ್ರಿತ ರನ್ ಬಿಟ್ಟುಕೊಟ್ಟರು. 23 ಇತರ ರನ್​ಗಳನ್ನು ಬಿಟ್ಟುಕೊಡುವ ಮೂಲಕ ಬೌಲಿಂಗ್​ ದೌರ್ಬಲ್ಯವನ್ನು ಸಾಬೀತು ಪಡಿಸಿತು. ಇವೆಲ್ಲದರ ನಡುವೆ ಡೇವಿಡ್​ ವಿಲ್ಲಿ (4 ಓವರ್​, 16 ರನ್​, 2 ವಿಕೆಟ್​) ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದರು. ಕರಣ್​ ಶರ್ಮಾ 26 ರನ್​ ನೀಡಿ 2 ವಿಕೆಟ್ ತಮ್ಮದಾಗಿಸಿಕೊಂಡರು.

Exit mobile version