Site icon Vistara News

KKR vs SRH: ನಾಳೆ ಮೊದಲ ಕ್ವಾಲಿಫೈಯರ್‌ ಪಂದ್ಯ; ಗೆದ್ದವರಿಗೆ ನೇರ ಫೈನಲ್‌ ಸೋತವರಿಗೆ ಇನ್ನೊಂದು ಅವಕಾಶ

KKR vs SRH

KKR vs SRH: First Qualifier Match Tomorrow; A direct final for the winner is another chance for the loser

ಅಹಮದಾಬಾದ್​: 17ನೇ ಆವೃತ್ತಿಯ ಐಪಿಎಲ್‌(IPL 2024) ಪಂದ್ಯಾವಳಿ ತನ್ನ ಲೀಗ್‌ ವ್ಯವಹಾರವನ್ನು ಮುಗಿಸಿದೆ. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್​ ಕಿಂಗ್ಸ್​ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದದ್ದು, ಪಾತಾಳದಲ್ಲಿದ್ದ ಆರ್​ಸಿಬಿ ಸತತವಾಗಿ 6 ಪಂದ್ಯಗಳನ್ನು ಗೆದ್ದು ಫೀನಿಕ್ಸ್‌ನಂತೆ ಎದ್ದು ನಿಂತು 4ನೇ ಸ್ಥಾನ ಅಲಂಕರಿಸಿದ್ದೆಲ್ಲ ಲೀಗ್‌ ಹಂತದ ಅಚ್ಚರಿ. ಇನ್ನು ಕ್ವಾಲಿಫೈಯರ್​ ಮತ್ತು ಎಲಿಮಿನೇಟರ್​ ಪಂದ್ಯದ ಕೌತುಕ.

ನಾಳೆ(ಮಂಗಳವಾರ) ನಡೆಯುವ ಮೊದಲ ಕ್ವಾಲಿಫೈಯರ್‌(KKR vs SRH Qualifier 1) ಪಂದ್ಯದಲ್ಲಿ ಈ ಬಾರಿಯ ಕೂಟದ ಅತ್ಯಂತ ಬಲಿಷ್ಠ ತಂಡಗಳಾದ ಕೋಲ್ಕತ್ತಾ ನೈಟ್​ ರೈಡರ್ಸ್(KKR vs SRH)​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಕಣಕ್ಕಿಳಿಯಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಇತ್ತಂಡಗಳ ಈ ಪಂದ್ಯ ಜಿದ್ದಾಜಿದ್ದಿ ಹೋರಾಟವೊಂದಕ್ಕೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆ ಇದೆ. ಇದರ ಮಧ್ಯೆ ಮಳೆಯ ಭೀತಿ ಕೂಡ ಎದುರಾಗಿದೆ.

ಇತ್ತಂಡಗಳಲ್ಲಿ ಕೆಕೆಆರ್​ ಲೀಗ್‌ ಹಂತದ ಅಗ್ರಸ್ಥಾನಿ ಎಂಬ ಹೆಗ್ಗಳಿಕೆ ಇದೆ. ಅಷ್ಟೇ ಅಲ್ಲ, ಲೀಗ್‌ ಹಂತದಲ್ಲಿ ಎದುರಾದ ಒಂದು ಪಂದ್ಯಗಳಲ್ಲಿ ಹೈದರಾಬಾದ್​ಗೆ 4 ರನ್​ ಅಂತರದ ಸೋಲುಣಿಸಿದ ಹಿರಿಮೆಯನ್ನೂ ಹೊಂದಿದೆ. ಜತೆಗೆ ಉಭಯ ತಂಡಗಳು 26 ಬಾರಿ ಮುಖಾಮುಖಿಯಾಗಿದ್ದು ಈ ಪೈಕಿ ಕೆಕೆಆರ್​ 17 ಪಂದ್ಯ ಗೆದ್ದಿದೆ. ಹೈದರಾಬಾದ್​ ಗೆದ್ದಿರುವುದು ಕೇವಲ 9 ಪಂದ್ಯ ಮಾತ್ರ. ಈ ಲೆಕ್ಕಾಚಾರದಲ್ಲಿ ಕೆಕೆಆರ್​ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನವಿಲ್ಲ.

ಹೆಡ್​-ಅಭಿಷೇಕ್​ ಬಲ


25 ವರ್ಷದ ಎಡಗೈ ದಾಂಡಿಗ ಅಭಿಷೇಕ್​ ಶರ್ಮ ಮತ್ತು ಟ್ರಾವಿಸ್​ ಹೆಡ್​​ ಜಿದ್ದಿಗೆ ಬಿದ್ದವತರಂತೆ ಬ್ಯಾಟ್​ ಬೀಸಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಈ ಜೋಡಿ ಪವರ್​ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರುವುದರಲ್ಲಿ ಯಾವುದೇ ಅನುಮಾನ ಬೇಡ. ಈಗಾಗಲೇ ಈ ಜೋಡಿ ಲೀಗ್​ನಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿ 5 ಓವರ್​ನಲ್ಲಿಯೇ 100ರ ಗಡಿ ದಾಟಿದ ದಾಖಲೆಯನ್ನು ಕೂಡ ಹೊಂದಿದ್ದಾರೆ. ಅಭಿಷೇಕ್​ ಶರ್ಮ ಈ ಬಾರಿಯ ಕೂಟದಲ್ಲಿ 41 ಸಿಕ್ಸರ್​ ಬಾರಿಸಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್​ ಕ್ಲಾಸೆನ್​, ಐಡೆನ್​ ಮಾರ್ಕ್ರಮ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​, ಭುವನೇಶ್ವರ್​ ಕುಮಾರ್​, ಟಿ. ನಟರಾಜನ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.

ಇದನ್ನೂ ಓದಿ KKR vs SRH Qualifier 1: ಕೆಕೆಆರ್​-ಹೈದರಾಬಾದ್​ ಮುಖಾಮುಖಿ ದಾಖಲೆ, ಪಿಚ್​ ರಿಪೋರ್ಟ್​ ಹೇಗಿದೆ?

ಕೆಕೆಆರ್​ ಕೂಡ ಸಮರ್ಥ ತಂಡ


ಗೌತಮ್​ ಗಂಭಿರ್​ ಅವರ ಮಾರ್ಗದರ್ಶನ ಮತ್ತು ಆಟಗಾರರ ಸಂಘಟಿತ ಪ್ರದರ್ಶನ ಕೆಕೆಆರ್​ ಪಾಲಿನ ಬಲ. ಅದರಲ್ಲೂ ಆಲ್​ರೌಂಡರ್​ ಸುನೀಲ್​ ನರೈನ್​ ಅವರಂತು ಈ ಬಾರಿ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ತಂಡಕ್ಕೆ ಹಿನ್ನಡೆಯಾಗಿರುವುದೆಂದರೆ ಇಂಗ್ಲೆಂಡ್​ನ ಫಿಲ್​ ಸಾಲ್ಟ್ ಪಾಕ್​ ವಿರುದ್ಧದ ಟಿ20 ಸರಣಿಯ ಭಾಗವಾಗಿ ತವರಿಗೆ ಮರಳಿದ್ದು. ಹೀಗಾಗಿ ಅವರ ತಂಡ ಇವರ ಸೇವೆ ಕಳೆದುಕೊಂಡಿದೆ. ಇವರ ಸ್ಥಾನದಲ್ಲಿ ಅಫಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಈ ಪಂದ್ಯದಲ್ಲಿ ಆಡಲಿದ್ದಾರೆ. ಮೊದಲ ಪಂದ್ಯವನ್ನಾಡುತ್ತಿರುವ ಕಾರಣ ಅವರ ಫಾರ್ಮ್​ ಹೇಗಿರಲಿದೆ ಎನ್ನುವುದು ಕೂಡ ಇಲ್ಲಿ ಮುಖ್ಯವಾಗಿದೆ.

ಆ್ಯಂಡ್ರೆ ರೆಸಲ್​ ಈ ಬಾರಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ. ಯುವ ಆಟಗಾರ ಆಂಗ್ಕ್ರಿಶ್ ರಘುವಂಶಿ, ಗಾಯದಿಂದ ಚೇತರಿಕೆ ಕಂಡು ಕಮ್​ಬ್ಯಾಕ್​ ಮಾಡಿರುವ ನಿತೇಶ್​ ರಾಣಾ, ವೆಂಕಟೇಶ್​ ಅಯ್ಯರ್​ ಮತ್ತು ನಾಯಕ ಶ್ರೇಯಸ್​ ಅಯ್ಯರ್​ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ನೆರವು ನೀಡಲಿದ್ದಾರೆ. ರಿಂಕು ಸಿಂಗ್​ ಕಳೆದ ಆವೃತ್ತಿಯಲ್ಲಿ ತೋರಿದ ಪ್ರದರ್ಶನ ಇದುವರೆಗೂ ತೋರಿಲ್ಲ. ಹೀಗಾಗಿ ಈ ಮಹತ್ವದ ಪಂದ್ಯದಲ್ಲಿ ಅವರು ಅಬ್ಬರಿಸುವ ಅನಿವಾರ್ಯತೆ ಇದೆ. 24 ಕೋಟಿ ವೀರ ಮಿಚೆಲ್​ ಸ್ಟಾರ್ಕ್​ ಈ ಪಂದ್ಯದಲ್ಲಾದರೂ ತಾವು ಪಡೆದ ಈ ಮೊತ್ತಕ್ಕೆ ನ್ಯಾಯ ಒದಗಿಸಲೇ ಬೇಕು. ದುಬಾರಿ ಮೊತ್ತ ಪಡೆದರೂ ಕೂಡ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ.

Exit mobile version