ನವ ದೆಹಲಿ: ಭಾರತ ತಂಡದ ವಿಕೆಟ್ಕೀಪರ್ ಬ್ಯಾಟರ್ ಕೆ. ಎಲ್. ರಾಹುಲ್ ತಮ್ಮ ಬಲ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಜೂನ್ 7ರಿಂದ ಇಂಗ್ಲೆಂಡ್ನ ಕೆನಿಂಗ್ಟನ್ ಓವಲ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯದಿಂದ ಹೊರಕ್ಕೆ ಉಳಿಯುವುದಾಗಿ ತಿಳಿಸಿದ್ದಾರೆ. ಸೋಮವಾರ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2023 ಪಂದ್ಯದ ಫೀಲ್ಡಿಂಗ್ ಮಾಡುವಾಗ ರಾಹುಲ್ ಗಾಯಗೊಂಡಿದ್ದರು. ಇದೀಗ ಅವರು ಇನ್ಸ್ಟಾಗ್ರಾಮ್ ಮೂಲಕ ಅಲಭ್ಯತೆಯನ್ನು ಘೋಷಿಸಿದ್ದಾರೆ.
ವೈದ್ಯಕೀಯ ತಂಡದೊಂದಿಗೆ ಚರ್ಚೆ ನಡೆಸಿದ ಬಳಿಕ , ನಾನು ಶೀಘ್ರದಲ್ಲೇ ನನ್ನ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತೇನೆ ಎಂದು ತೀರ್ಮಾನಿದ್ದೇನೆ.. ಮುಂಬರುವ ವಾರಗಳಲ್ಲಿ ನನ್ನ ಪುನಶ್ಚೇತನ ಹಾಗೂ ಚೇತರಿಕೆಯ ಕಡೆಗೆ ಗಮನ ಕೊಡಲಿದ್ದೇನೆ. ಇದು ಕಠಿಣ ನಿರ್ಧಾಋ. ಆದರೆ ಸಂಪೂರ್ಣ ಚೇತರಿಕೆ ಹೊಂದಲು ಇದು ಅನಿವಾರ್ಯ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Virat Kohli : ವಿರಾಟ್ ಕೊಹ್ಲಿ ಎಂದು ಕೂಗಿದ ಅಭಿಮಾನಿಯನ್ನು ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿದ ಗಂಭೀರ್
ಐಪಿಎಲ್ನಲ್ಲಿ ಲಕ್ನೊ ತಂಡದ ನಾಯಕನಾಗಿರುವ ನಾನು ಈ ನಿರ್ಣಾಯಕ ಅವಧಿಯಲ್ಲಿ ತಂಡದಲ್ಲಿ ಇಲ್ಲದೇ ಹೋಗಿರುವುದಕ್ಕೆ ತುಂಬಾ ನೋವುಂಟಾಗಿದೆ. ಆದರೆ, ತಂಡದ ಇತರ ಸದಸ್ಯರು ಸಂದರ್ಭಕ್ಕೆ ತಕ್ಕಂತೆ ಎದ್ದು ನಿಲ್ಲುತ್ತಾರೆ ಮತ್ತು ಎಂದಿನಂತೆ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಾರೆ ಎಂಬ ನನಗೆ ವಿಶ್ವಾಸವಿದೆ. ನಾನು ಪ್ರತಿ ನಿತ್ಯ ಪಂದ್ಯ ನೋಡುತ್ತೇನೆ ಹಾಗೂ ಇಲ್ಲಿಂದಲೇ ಅಭಿನಂದಿಸುತ್ತೇನೆ ಎಂದು ರಾಹುಲ್ ಬರೆದುಕೊಂಡಿದ್ದಾರೆ.
“ನಾನು ಮುಂದಿನ ತಿಂಗಳು ಟೀಮ್ ಇಂಡಿಯಾದ ಜತೆ ಓವಲ್ಗೆ ತೆರಳಲು ಸಾಧ್ಯವಾಗದೇ ಇರುವುದಕ್ಕೆ ಬೇಸರವಾಗುತ್ತಿದೆ. ನೀಲಿ ಜೆರ್ಸಿಯೊಂದಿಗೆ ಕಾಣಿಸಿಕೊಳ್ಳಲು ಹಾಗೂ ನನ್ನ ದೇಶಕ್ಕೆ ಸಹಾಯ ಮಾಡಲು ಅವಕಾಶ ಸಿಗದೇ ಹೋಗಿರುವುದಕ್ಕೂ ನಿರಾಸೆಯಾಗಿದೆ. ಟೀಮ್ ಇಂಡಿಯಾಗೆ ಆಡುವುದೇ ನನ್ನ ಆದ್ಯತೆ ಎಂದು ಹೇಳಿದರು.
ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದಾಗಿ ಈಗಾಗಲೇ ಭಾರತ ತಂಡದಿಂದ ಹೊರಕ್ಕೆ ಉಳಿದಿದ್ದಾರೆ. ಇದೇ ವೇಳೆ ರಾಹುಲ್ ಕೂಡ ಗಾಯಕ್ಕೆ ಒಳಗಾಗಿದ್ದಾರೆ. ರಾಹುಲ್ ಅವರ ಅನುಪಸ್ಥಿತಿಯಿಂದ ಭಾರತ ತಂಡದ ಬ್ಯಾಟಿಂಗ್ ಮಧ್ಯಮ ಕ್ರಮಾಂಕ ಮತ್ತೆ ದುರ್ಬಲಗೊಂಡಿದೆ. ಅತ್ತ ನಾಯಕ ಇಲ್ಲದೆ ಎಲ್ಎಸ್ಜಿ ತಂಡಕ್ಕೂ ಸಮಸ್ಯೆ ಉಂಟಾಗಿದೆ.
ರಾಹುಲ್ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಾ ಓಡುಗಾಗ ತೊಡೆ ನೋವಿಗೆ ಒಳಗಾಗಿ ಕುಸಿದು ಬಿದ್ದಿದ್ದರು. ವೈದ್ಯಕೀಯ ತಂಡವು ಅವರಿಗೆ ಚಿಕಿತ್ಸೆ ನೀಡಿದ್ದರೂ ಸುಧಾರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಳಿಕ ನೋವು ಜಾಸ್ತಿಯಾದ ಕಾರಣ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಅವರು ಆಡಿರಲಿಲ್ಲ. ಕೃಣಾಲ್ ಪಾಂಡ್ಯ ತಂಡದ ನಾಯಕರಾಗಿ ಹೊಣೆಗಾರಿಗೆ ವಹಿಸಿಕೊಂಡಿದ್ದರು.