ನವ ದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ತಮ್ಮ ವೃತ್ತಿ ಜೀವನದ ಕೊನೆಯ ಬಾಕ್ಸಿಂಗ್ ಪಂದ್ಯ ಆಡುವುದರಿಂದ ವಂಚಿತರಾಗಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಈ ಬಾರಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಮೇರಿ ಕೋಮ್ ಅವರ ವಿದಾಯದ ಪಂದ್ಯವಾಗಿತ್ತು. ಆದರೆ ದುರದೃಷ್ಟವಶಾತ್ ಮೇರಿ ಕೋಮ್ ಈ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ. ʼಫೈನಲ್ʼ ಪಂದ್ಯವನ್ನು ಆಡದೇ ನಿವೃತ್ತಿ ಪಡೆಯುತ್ತಿರುವುದು ವಿಷಾದಕರ!
ಮೇರಿ ಕೋಮ್‌ಗೆ ಎದುರಾದ ದುರದೃಷ್ಟದ ಟ್ವಿಸ್ಟ್!
ಶ್ರೇಷ್ಠ ಬಾಕ್ಸಿಂಗ್ ಚಾಂಪಿಯನ್! ಆರು ಬಾರಿ ವಿಶ್ವ ಚಾಂಪಿಯನ್ ಆದ ಹಿರಿಮೆ, ಭಾರತದ ಮಹಿಳೆಯರ ಬಾಕ್ಸಿಂಗ್‌ನಲ್ಲಿ ಹೊಸ ಚರಿತ್ರೆಯನ್ನು ಬರೆದ ಮೇರು ಆಟಗಾರ್ತಿ ಮೇರಿ ಕೋಮ್. ಬಾಕ್ಸಿಂಗ್‌ನಲ್ಲಿ ಐತಿಹಾಸಿಕ ಗೆಲುವಿಗೆ ಪಾತ್ರರಾದ ಆಟಗಾರ್ತಿ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಮುನ್ನ ಒಂದು ಪಂದ್ಯವನ್ನು ಆಡಿದ್ದರೆ, ಸರಿಯಾದ ರೀತಿಯಲ್ಲಿ ಬೀಳ್ಕೊಟ್ಟ ಹಾಗಾಗುತ್ತಿತ್ತು. ಬೇಸರದ ವಿಷಯವೆಂದರೆ ಮೇರಿ ಕೋಮ್ ಕೊನೆಯ ಪಂದ್ಯವನ್ನು ಆಡದೆ ವಿದಾಯ ಹೇಳಬೇಕಾದ ಸನ್ನೀವೇಶ ಎದುರಾಗಿದೆ.
ಮೇರಿ ಕೋಮ್ ಇನ್ನು 5 ತಿಂಗಳಲ್ಲಿ 40 ವರ್ಷಗಳನ್ನೂ ಪೂರೈಸುತ್ತಾರೆ. ಹಾಗಾಗಿ ಅವರು ಈ ಬಾರಿ ವೃತ್ತಿ ಜೀವನಕ್ಕೆ ವಿದಾಯ ಹೇಳಬೇಕು. 40 ವರ್ಷ ಪೂರೈಸಿದವರು ಬಾಕ್ಸಿಂಗ್ ಆಡುವಂತಿಲ್ಲ. ಅದು ಬಾಕ್ಸಿಂಗ್‌ನ ನಿಯಮ. ಆದ್ದರಿಂದ ಇದು ಅವರ ಕೊನೆಯ ಟೂರ್ನಮೇಂಟ್ ಆಗಿತ್ತು.
ಲಂಡನ್‌ನಲ್ಲಿ ನಡೆಯುತ್ತಿದ್ದ ಕಾಮನ್‌ವೆಲ್ತ್‌ನ ಪ್ರೀ-ಫೈನಲ್ ಪಂದ್ಯದ ವೇಳೆ ನೀತು ಘಂಘಸ್ ಹಾಗೂ ಮೇರಿ ಕೋಮ್ ಮುಖಾಮುಖಿಯಾಗಿದ್ದರು. ಪೈಪೋಟಿ ನಡೆಸುವಾಗ ಮೇರಿ ಕೆಳಕ್ಕೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡರು. ಮೊಣಕಾಲಿಗೆ ತೀವ್ರವಾದ ಗಾಯವಾಯಿತು. ನೋವಿನಿಂದ ಬಳಲುತ್ತಿದ್ದ ಮೇರಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಪಂದ್ಯದಲ್ಲಿ ರಿತು ಅವರನ್ನು ವಿನ್ನರ್ ಎಂದು ಘೋಷಿಸಲಾಯಿತು. ಆದರೆ, ಇದರಿಂದ ಮೇರಿ ಕೋಮ್ ಅವರಿಗೆ ದೊಡ್ಡ ನಷ್ಟವಾಗಿದೆ. ಒಂದು ಫೈನಲ್ ಪಂದ್ಯವನ್ನು ಆಡುವ ಮೂಲಕ ವಿದಾಯ ಹೇಳಬೇಕೆಂಬುದು ಆಸೆಯಾಗಿಯೇ ಉಳಿದುಬಿಡುತ್ತದೆ!
ಮೇರಿ ಕೋಮ್ ನಡೆದು ಬಂದ ಹಾದಿ!
20 ದಶಕಗಳ ವೃತ್ತಿ ಜೀವನದಲ್ಲಿ ಮೇರಿ ಕೋಮ್ ಅನೇಕ ಕಷ್ಟಗಳನ್ನು ಎದುರಿಸಿ, ಅವುಗಳನ್ನು ಮೆಟ್ಟಿ ನಿಂತ ಸಾಧಕಿ. ಗಾಯಗಳಿಂದ, ಪೆಟ್ಟುಗಳಿಂದ ಆದ ನೋವನ್ನು ಮೀರಿ ಅತ್ಯಂತ ಉನ್ನತ ಮಟ್ಟದಲ್ಲಿ ಪದಕವನ್ನು ಗೆಲ್ಲುವಲ್ಲಿ ಮೇರಿ ಕೋಮ್ ಅನೇಕರಿಗೆ ಸ್ಫೂರ್ತಿಯಾದವರು. ಮಗುವಿಗೆ ಜನ್ಮ ನೀಡಿದ ಬಳಿಕವೂ ಮತ್ತೊಮ್ಮೆ ಬಾಕ್ಸಿಂಗ್ ಅಖಾಡಕ್ಕೆ ಕಾಲಿಟ್ಟು ಎದುರಾಳಿಗಳಿಗೆ ಸೋಲುಣಿಸಿದವರು.
ಇಂತಹ ಒಂದು ಅಪರೂಪದ ಆಟಗಾರ್ತಿಗೆ ಸೂಕ್ತ ವಿದಾಯ ದೊರಕಬೇಕಿತ್ತು!
ಮೇರಿ ಕೋಮ್‌ಗೆ ಪದಕವನ್ನು ಗೆಲ್ಲುವ ಹಂಬಲವೇನಿಲ್ಲ. ಈಗಾಗಲೇ ಕಾಮ್‌ವೆಲ್ತ್ ಗೇಮ್‌ನಲ್ಲಿ ಈಗಾಗಲೇ ಮೇರಿ ಕೋಮ್ ಚಿನ್ನದ ಪದಕವನ್ನು ಗೆದ್ದು ಸಾಧನೆ ಮಾಡಿದ್ದಾರೆ. ಅಲ್ಲದೆ, ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದು ಯುವ ಆಟಗಾರರಿಗೆ ಅವಕಾಶ ನೀಡಿದ್ದರು. ಅಪರೂಪದ ಆಟಗಾರ್ತಿ ಮೇರಿ ಕೊಮ್‌ಗೆ ಸೂಕ್ತವಾದ ಬೀಳ್ಕೊಡುಗೆ ನೀಡುವುದು ಪದಕಕ್ಕಿಂತ ಅಮೂಲ್ಯವಾದದ್ದು.
ಯಾರೊಬ್ಬ ಕ್ರೀಡಾಪಟುವಿಗಾದರೂ ವೃತ್ತಿ ಜೀವನದ ಕೊನೆಯ ಪಂದ್ಯ ಅತ್ಯಂತ ಸ್ಮರಣೀಯವಾಗಿರುತ್ತದೆ. ಜೀವನ ಪರ್ಯಂತ ಅದನ್ನು ನೆನಪಿಗೆ ಬಂದು ಕಾಡುತ್ತದೆ. ಹಾಗಾಗಿ ಅಂತಿಮ ಪಂದ್ಯ ಎನ್ನುವುದು ಮಹತ್ವವಾಗಿರುತ್ತದೆ. ಇದರಿಂದ ವಂಚಿತವಾದರೆ ಕ್ರೀಡಾಪಟುವಿನ ಮನಸ್ಸಿಗೆ ಯಾತನೆ ಉಂಟಾಗಬಹುದು. ಅದರಲ್ಲೂ ಮೇರಿ ಕೋಮ್ ಕಾಮನ್‌ವೆಲ್ತ್‌ನ ಫೈನಲ್ ಪಂದ್ಯವನ್ನು ಆಡದೇ ವಿದಾಯ ಹೇಳಬೇಕಾಗಿರುವುದು ನಿಜಕ್ಕೂ ಬೇಸರ ಉಂಟುಮಾಡುತ್ತದೆ.
ಈ ಬಗ್ಗೆ ಮೇರಿ ಕೋಮ್ ಅವರ ಕೋಚ್ ಚೋಟೆ ಲಾಲ್ ಯಾದವ್ ಹಾಗೂ ಭಾಸ್ಕರ್ ಭಟ್ ಕೂಡ ಮಾತನಾಡಿ, ಮೇರಿ ಕೋಮ್‌ಗೆ ಎದುರಾದ ಸನ್ನಿವೇಶದ ಬಗ್ಗೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಮಿನಿ ಒಲಂಪಿಕ್ಸ್ ಪಂದ್ಯದಲ್ಲಿ ಶಿವಮೊಗ್ಗದ ಕ್ರೀಡಾಪಟುಗಳ ಗೆಲುವು