ನವ ದೆಹಲಿ: ತವರಿನ ಸ್ಟೇಡಿಯಮ್ನಲ್ಲಿ ಅರ್ಧ ಶತಕ ಬಾರಿಸಿದ ವಿರಾಟ್ ಕೊಹ್ಲಿ (55 ರನ್) ಐಪಿಎಲ್ 16ನೇ ಆವೃತ್ತಿಯ 50ನೇ ಪಂದ್ಯದಲ್ಲಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 182 ರನ್ಗಳ ಸವಾಲೊಡ್ಡಲು ಆರ್ಸಿಬಿ ತಂಡಕ್ಕೆ ನೆರವಾದರು. ಇದು ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿಯ 6ನೇ ಅರ್ಧ ಶತಕವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್ ಲಾಮ್ರೋರ್ (54) ಸ್ಫೋಟಕ ಬ್ಯಾಟಿಂಗ್ ನಡೆಸಿ ಅರ್ಧ ಶತಕ ಬಾರಿಸುವುದರೊಂದಿಗೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು.
ಅರುಣ್ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಬೌಲಿಂಗ್ಗೆ ನೆರವಾಗುತ್ತಿದ್ದ ಪಿಚ್ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಬಾರಿಸಿತು.
ಇನಿಂಗ್ಸ್ ಆರಂಭಿಸಿದ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಆರ್ಸಿಬಿಗೆ ಉತ್ತಮ ಆರಂಭ ತಂದುಕೊಟ್ಟರು. ಈ ಜೋಡಿ ಮೊದಲ ವಿಕೆಟ್ಗೆ 82 ರನ್ ಬಾರಿಸಿತು. ಆದರೆ, ಮಾರ್ಷ್ ಎಸೆತಕ್ಕೆ ಸಿಕ್ಸರ್ ಬಾರಿಸಲು ಹೋದ ಪ್ಲೆಸಿಸ್ 45 ರನ್ಗಳಿಗೆ ಔಟಾದರು. ಈ ಮೂಲಕ ಮತ್ತೊಂದು ಅರ್ಧ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಬಳಿಕ ಆಡಲು ಬಂದ ಗ್ಲೆನ್ ಮ್ಯಾಕ್ಸ್ವೆಲ್ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೆ ತಂಡಕ್ಕೆ ಹಿನ್ನಡೆ ಉಂಟು ಮಾಡಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಮಹಿಪಾಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಕ್ರೀಸ್ಗೆ ಬಂದ ಮಹಿಪಾಲ್ ಲಾಮ್ರೋರ್ ಆರಂಭದಿಂದೇ ಅಬ್ಬರಿಸಿದರು. ಡೆಲ್ಲಿ ಬೌಲರ್ಗಳನ್ನು ಸತತವಾಗಿ ದಂಡಿಸಿದ ಅವರು 29 ಎಸೆತಗಳಿಗೆ 3 ಸಿಕ್ಸರ್ ಹಾಗೂ 6 ಫೋರ್ ಸಮೇತ 54 ರನ್ ಬಾರಿಸಿ ಕೊನೇ ತನಕ ಅಜೇಯರಾಗಿ ಉಳಿದರು. ಏತನ್ಮಧ್ಯೆ, ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿಯೂ ತಮ್ಮ ಅರ್ಧ ಶತರ ಪೂರೈಸಿದರು. ಅಲ್ಲದೆ, ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ಇದನ್ನೂ ಓದಿ : IPL 2023 : ಗಂಭೀರ್ ಜತೆ ಗಲಾಟೆ ಬಗ್ಗೆ ಬಿಸಿಸಿಐಗೆ ವಿವರಣೆ ನೀಡಿದ ವಿರಾಟ್ ಕೊಹ್ಲಿ, ದಂಡಕ್ಕೆ ಅಸಮಾಧಾನ
ಕೊನೆಯಲ್ಲಿ ದಿನೇಶ್ ಕಾರ್ತಿಕ್ 11 ರನ್ ಬಾರಿಸಿದರೆ ಅನುಜ್ ರಾವತ್ 8 ರನ್ ಕೊಡುಗೆ ಕೊಟ್ಟರು. ಡೆಲ್ಲಿ ಪರ ಬೌಲಿಂಗ್ನಲ್ಲಿ ಮಿಚೆಲ್ ಮಾರ್ಷ್ 2 ವಿಕೆಟ್ ಪಡೆದರೆ, ಮುಕೇಶ್ ಕುಮಾರ್ ಹಾಗೂ ಖಲೀಲ್ ಅಹಮದ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.