ಕೋಲ್ಕೊತಾ: ನಿಕೋಲಸ್ ಪೂರನ್ ಅವರ (58) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಲಕ್ನೊ ಸೂಪರ್ ಜಯಂಟ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ 58ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಮೊದಲು ಬ್ಯಾಟ್ ಮಾಡಿ 176 ರನ್ ಬಾರಿಸಿತು. ಆರಂಭಿಕ ಕುಸಿತ ಕಂಡ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಚೇತರಿಸಿಕೊಂಡ ಎಲ್ಎಸ್ಜಿ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತು.
ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು.
ಮೊದಲು ಬ್ಯಾಟ್ ಮಾಡಲು ಆರಂಭಿಸಿದ ಎಲ್ಎಸ್ಜಿ ತಂಡಕ್ಕೆ ಕರಣ್ ಶರ್ಮಾ 3 ರನ್ಗೆ ಔಟಾಗುವ ಮೂಲಕ ಆರಂಭಿಕ ಹಿನ್ನಡೆ ಉಂಟಾಯಿತು. ಆದರೆ, ಪ್ರೇರಕ್ ಮಂಕಡ್ (26) ಹಾಗೂ ಮತ್ತೊಬ್ಬ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ (28) ಸ್ವಲ್ಪ ಹೊತ್ತು ಬ್ಯಾಟಿಂಗ್ ಮಾಡಿ 41 ರನ್ಗಳ ಜತೆಯಾಟ ನೀಡಿದರು. ಆದರೆ ಪ್ರೇಕರ್ ಔಟಾದ ಬಳಿಕ ಕೀಸ್ಗೆ ಇಳಿದ ಸ್ಫೋಟಕ ಬ್ಯಾಟರ್ ಮಾರ್ಕ್ ಸ್ಪೋಯ್ನಿಸ್ ಶೂನ್ಯ ಸುತ್ತುವ ಮೂಲಕ ಮತ್ತೊಂದು ಬಾರಿ ಆಘಾತ ಎದುರಾಯಿತು.
ಆಯುಷ್, ನಿಕೋಲಸ್ ಸೂಪರ್ ಆಟ
ನಾಯಕ ಕೃಣಾಲ್ ಪಾಂಡ್ಯ 9 ರನ್ಗೆ ಔಟಾಗುವ ಜತೆ ಕ್ವಿಂಟನ್ ಡಿ ಕಾಕ್ ನಿರಾಸೆಯಿಂದ ಪೆವಿಲಿಯನ್ಗೆ ಮರಳಿದರು. ಈ ವೇಳೆ ಲಕ್ನೊ ತಂಡಕ್ಕೆ 5 ವಿಕೆಟ್ ನಷ್ಟಕ್ಕೆ 73 ರನ್ ಬಾರಿಸಿತು. ಬಳಿಕ ಕ್ರಿಸ್ನಲ್ಲಿ ತಳವೂರಿದ ಆಯುಷ್ ಬದೋನಿ (25) ಹಾಗೂ ನಿಕೋಲಸ್ ಪೂರನ್ ಸ್ಕೋರ್ ಬೋರ್ಡ್ ಹಿಗ್ಗಿಸಿದರು. ಈ ಜೋಡಿ ಆರನೇ ವಿಕೆಟ್ಗೆ 74 ರನ್ ಸೇರಿಸಿದರು. ಸ್ಪಿನ್ನರ್ ನರೈನ್ಗೆ ವಿಕೆಟ್ ಒಪ್ಪಿಸುವ ಮೂಲಕ ಬದೋನಿ ಔಟಾದರು. ಬಳಿಕ ಆಡಲು ಇಳಿದ ಕೃಷ್ಣಪ್ಪ ಗೌತಮ್ 4 ಎಸೆತಗಳಿಗೆ 11 ರನ್ ಬಾರಿಸಿದರು. ಕೆಕೆಆರ್ ತಂಡದ ಪರವಾಗಿ ಸುನೀಲ್ ನರೈನ್ ಹಾಗೂ ಶಾರ್ದುಲ್ ಠಾಕೂರ್ ಹಾಗೂ ವೈಭವ್ ಅರೋರಾ ತಲಾ 2 ವಿಕೆಟ್ ಬಾರಿಸಿದರು.