Site icon Vistara News

IPL 2023 : ಕೆಕೆಆರ್ ವಿರುದ್ಧ ಲಕ್ನೊ​​ಗೆ ರೋಚಕ 1 ರನ್ ವಿಜಯ, ಪ್ಲೇಆಫ್​ ಸ್ಥಾನ ಖಾತರಿ

KKR LSG IPL

#image_title

ಕೋಲ್ಕೊತಾ: ನಿಕೋಲಸ್ ಪೂರನ್​ ಅವರ (58) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್​ಗಳ ಆಕ್ರಮಣಕಾರಿ ದಾಳಿಯ ನೆರವು ಪಡೆದ ಲಕ್ನೊ ಸೂಪರ್​ ಜೈಂಟ್ಸ್​ ತಂಡ ಐಪಿಎಲ್​ 16ನೇ ಆವೃತ್ತಿಯ 68ನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧ 1 ರನ್​ ರೋಚಕ ವಿಜಯ ಸಾಧಿಸಿತು. ಇದರೊಂದಿಗೆ ಕೃಣಾಲ್​ ಪಾಂಡ್ಯ ನೇತೃತ್ವದ ಲಕ್ನೊ ಬಳಗ ಲೀಗ್ ಹಂತದ ತನ್ನ 14 ಪಂದ್ಯಗಳಲ್ಲಿ 17 ಅಂಕಗಳನ್ನು ಸಂಪಾದಿಸಿ ಪ್ಲೇಆಫ್​ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಅತ್ತ ಕೆಕೆಆರ್​ ತಂಡ ಲೀಗ್​ ಹಂತದಲ್ಲೇ ತನ್ನ ಅಭಿಯಾನ ಮುಗಿಸಿತು. ಪಂದ್ಯದಲ್ಲಿ ಕೊನೇ ತನಕ ಹೋರಾಟ ಸಂಘಟಿಸಿದ ರಿಂಕು ಸಿಂಗ್​ (67 ರನ್​ 33 ಎಸೆತ, 6 ಫೋರ್​, 4 ಸಿಕ್ಸರ್​) ಹೋರಾಟ ವ್ಯರ್ಥವಾಯಿತು.

ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಕೆಕೆಆರ್​ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 176 ರನ್ ಗಳಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಕೆಕೆಆರ್ ತಂಡ ರಿಂಕು ಸಿಂಗ್ ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಒಂದು ರನ್​ನಿಂದ ಸೋಲೊಪ್ಪಿಕೊಂಡಿತು. ಇದು ಕೂಡ ಹಾಲಿ ಆವೃತ್ತಿಯ ಐಪಿಎಲ್​ನ ಲಾಸ್ಟ್​ ಬಾಲ್​ ಥ್ರಿಲ್​ ಮ್ಯಾಚ್​ ಎನಿಸಿಕೊಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಶುರು ಮಾಡಿದ ಕೆಕೆಅರ್​ ತಂಡ ಜೇಸನ್ ರಾಯ್​ (45) ಹಾಗೂ ವೆಂಕಟೇಶ್ ಅಯ್ಯರ್​ (24) ಮೂಲಕ ಉತ್ತಮ ಆರಂಭ ಪಡೆಯಿತು. ಈ ಜೋಡಿ ಮೊದಲ ವಿಕೆಟ್​ಗೆ 61 ರನ್ ಪೇರಿಸಿತು. ಆದರೆ ಆ ಬಳಿಕ ನಿತೀಶ್ ರಾಣಾ (8 ರನ್​) ಹಾಗೂ ರಹ್ಮನುಲ್ಲಾ ಗುರ್ಬಜ್​ (10 ರನ್​) ಔಟಾಗುವ ಮೂಲಕ ಸತತವಾಗಿ ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್​ಗೆ ಬಂದ ರಿಂಕು ಸಿಂಗ್ ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿ ಕೊನೇ ತನಕವೂ ವಿಕೆಟ್​ ಕಳೆದುಕೊಳ್ಳದಂತೆ ನೋಡಿಕೊಂಡರು. ಆದರೆ, ಉಳಿದ ಆಟಗಾರರ ಬೆಂಬಲ ದೊರೆಯದ ಕಾರಣ ಕೆಕೆಆರ್​ ತಂಡಕ್ಕೆ ಕೇವಲ ಒಂದು ರನ್​ ಸೋಲಾಯಿತು.

ಮೊದಲು ಬ್ಯಾಟ್​ ಮಾಡಲು ಆರಂಭಿಸಿದ ಎಲ್​ಎಸ್​ಜಿ ತಂಡಕ್ಕೆ ಕರಣ್​ ಶರ್ಮಾ 3 ರನ್​ಗೆ ಔಟಾಗುವ ಮೂಲಕ ಆರಂಭಿಕ ಹಿನ್ನಡೆ ಉಂಟಾಯಿತು. ಆದರೆ, ಪ್ರೇರಕ್ ಮಂಕಡ್​ (26) ಹಾಗೂ ಮತ್ತೊಬ್ಬ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್​ (28) ಸ್ವಲ್ಪ ಹೊತ್ತು ಬ್ಯಾಟಿಂಗ್ ಮಾಡಿ 41 ರನ್​ಗಳ ಜತೆಯಾಟ ನೀಡಿದರು. ಆದರೆ ಪ್ರೇಕರ್ ಔಟಾದ ಬಳಿಕ ಕೀಸ್​ಗೆ ಇಳಿದ ಸ್ಫೋಟಕ ಬ್ಯಾಟರ್​ ಮಾರ್ಕ್​ ಸ್ಪೋಯ್ನಿಸ್ ಶೂನ್ಯ ಸುತ್ತುವ ಮೂಲಕ ಮತ್ತೊಂದು ಬಾರಿ ಆಘಾತ ಎದುರಾಯಿತು.

ಆಯುಷ್​, ನಿಕೋಲಸ್​ ಸೂಪರ್ ಆಟ

ನಾಯಕ ಕೃಣಾಲ್ ಪಾಂಡ್ಯ 9 ರನ್​ಗೆ ಔಟಾಗುವ ಜತೆ ಕ್ವಿಂಟನ್​ ಡಿ ಕಾಕ್​ ನಿರಾಸೆಯಿಂದ ಪೆವಿಲಿಯನ್​ಗೆ ಮರಳಿದರು. ಈ ವೇಳೆ ಲಕ್ನೊ ತಂಡಕ್ಕೆ 5 ವಿಕೆಟ್​ ನಷ್ಟಕ್ಕೆ 73 ರನ್ ಬಾರಿಸಿತು. ಬಳಿಕ ಕ್ರಿಸ್​ನಲ್ಲಿ ತಳವೂರಿದ ಆಯುಷ್​ ಬದೋನಿ (25) ಹಾಗೂ ನಿಕೋಲಸ್ ಪೂರನ್​ ಸ್ಕೋರ್ ಬೋರ್ಡ್​ ಹಿಗ್ಗಿಸಿದರು. ಈ ಜೋಡಿ ಆರನೇ ವಿಕೆಟ್​ಗೆ 74 ರನ್ ಸೇರಿಸಿದರು. ಸ್ಪಿನ್ನರ್​ ನರೈನ್​ಗೆ ವಿಕೆಟ್​ ಒಪ್ಪಿಸುವ ಮೂಲಕ ಬದೋನಿ ಔಟಾದರು.

Exit mobile version