ಕೋಲ್ಕೊತಾ: ಐಪಿಎಲ್ 16ನೇ ಆವೃತ್ತಿಯ (IPL 2023) 68ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆತಿಥೇಯ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಪ್ರವಾಸಿ ಲಕ್ನೊ ಸೂಪರ್ ಜಯಂಟ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಬೇಕಾಗಿದೆ. ಎರಡೂ ತಂಡಗಳಿಗೆ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಲೀಗ್ ಹಂತದ ಕೊನೇ ಪಂದ್ಯವಾಗಿದೆ. ಲಕ್ನೊ ಸೂಪರ್ ಜಯಂಟ್ಸ್ ತಂಡ ಈ ಪಂದ್ಯಕ್ಕೆ ಮೊದಲು ಆಡಿರುವ 13 ಪಂದ್ಯಗಳಲ್ಲಿ ಏಳು ಜಯ ಹಾಗೂ ಒಂದು ಪಂದ್ಯ ರದ್ದಾಗುವ ಮೂಲಕ 15 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಗೆಲುವು ತಂಡದ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಲಿದೆ. ಆದರೆ, ನಿತೀಶ್ ರಾಣಾ ನೇತೃತ್ವದ ಕೆಕೆಆರ್ ತಂಡ ಪ್ಲೇಆಫ್ ಅವಕಾಶ ನಷ್ಟ ಮಾಡಿಕೊಂಡಿರುವ ಕಾರಣ ಗೆಲುವಿನ ಮೂಲಕ ಅಭಿಯಾನ ಮುಗಿಸಲು ಯೋಜನೆ ರೂಪಿಸಲಿದೆ.
ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ಆಯೋಜನೆಗೊಂಡಿದೆ. ಭರಪೂರ ರನ್ ಗಳಿಸಲು ಸಾಧ್ಯವಾಗುವ ಸ್ಟೇಡಿಯಮ್ನಲ್ಲಿ ಇತ್ತಂಡಗಳು ಗೆಲುವಿಗಾಗಿ ಕಾದಾಡಲಿವೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ಕೆಕೆಆರ್ ತಂಡದ ನಾಯಕ ನಿತೀಶ್ ರಾಣಾ, ದೊಡ್ಡ ಅಂತರದಿಂದ ಗೆಲ್ಲಬೇಕು ಎಂಬ ಉದ್ದೇಶದಿಂದ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದೇನೆ. ಈ ಪಂದ್ಯದಲ್ಲಿ ಸಕಾರಾತ್ಮಕವಾಗಿ ಆಡಲು ಬಯಸುತ್ತೇವೆ. ರಿಂಕು ನಮ್ಮ ತಂಡಕ್ಕೆ ಆಧಾರವಾಗಿದ್ದಾರೆ. ಬಹುತೇಕ ಎಲ್ಲ ಪಂದ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಸುಯಾಶ್ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ನಾವು ಅದೇ ತಂಡದೊಂದಿಗೆ ಆಡಲಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : IPL 2023: ಅಂತಿಮ ಹಂತದಲ್ಲಿ ಐಪಿಎಲ್ಗೆ ಮಳೆ ಕಾಟ; ಪ್ಲೇ ಆಫ್ ರೇಸ್ನಲ್ಲಿರುವ ಆರ್ಸಿಬಿ,ಲಕ್ನೋಗೆ ಹಿನ್ನಡೆ ಸಾಧ್ಯತೆ
ಎಲ್ಎಸ್ಜಿ ತಂಡದ ನಾಯಜಕ ಕೃಣಾಲ್ ಪಾಂಡ್ಯ ಮಾತನಾಡಿ, ಟಾಸ್ ಗೆದ್ದಿದ್ದರೆ ನಾವು ಮೊದಲು ಫೀಲ್ಡಿಂಗ್ ಮಾಡುತ್ತಿದ್ದೆವು. ಒಟ್ಟಾರೆಯಾಗಿ ದಿನದ ಕೊನೆಯಲ್ಲಿ, ನೀವು ಉತ್ತಮ ಕ್ರಿಕೆಟ್ ಆಡಬೇಕು ಎಂಬುದೇ ನಮ್ಮ ಯೋಜನೆ. ಐಪಿಎಲ್ ಅಂಕಪಟ್ಟಿಯಲ್ಲಿ ನಮ್ಮ ಸ್ಥಾನದ ಬಗ್ಗೆ ಅರಿವಿದೆ. ನಮ್ಮ ಹಣೆಬರಹ ನಮ್ಮ ಕೈಯಲ್ಲಿದೆ. ಉತ್ತಮ ಕ್ರಿಕೆಟ್ ಆಡುವತ್ತ ಗಮನ ಹರಿಸುತ್ತೇವೆ. ಹಿಂದಿನ ಪಂದ್ಯದಲ್ಲಿ ನಾವು ಉತ್ತಮವಾಗಿ ಡಿಫೆಂಡ್ ಮಾಡಿದ್ದೇವೆ. ಅಂತೆಯೇ ಈ ಬಾರಿಯೂ ದೊಡ್ಡ ಮೊತ್ತವನ್ನು ಪೇರಿಸಿ ಅದನ್ನು ರಕ್ಷಿಸುತ್ತೇವೆ. ತಂಡದಲ್ಲಿ ಒಂದೆರಡು ಬದಲಾವಣೆಗಳಿವೆ. ಹೂಡಾ ಬದಲಿಗೆ ನಾವು ಕರಣ್ ಆಡಲಿದ್ದಾರೆ. ಗೌತಮ್ ಸ್ವಪ್ನಿಲ್ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಆಡುವ 11ರ ಬಳಗ ಇಂತಿದೆ
ಲಕ್ನೊ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್, ಕರಣ್ ಶರ್ಮಾ, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ (ನಾಯಕ), ಆಯುಷ್ ಬಡೋನಿ, ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್.
ಕೋಲ್ಕತಾ ನೈಟ್ ರೈಡರ್ಸ್ರ: ರಹ್ಮಾನುಲ್ಲಾ ಗುರ್ಬಾಜ್ , ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೈಭವ್ ಅರೋರಾ, ಹರ್ಷಿತ್ ರಾಣಾ.