ಬೆಂಗಳೂರು: ಕತಾರ್ನಲ್ಲಿ ಫಿಫಾ ವಿಶ್ವ ಕಪ್ ಕಳೆಗಟ್ಟುತ್ತಿದ್ದಾಗ ಫುಟ್ಬಾಲ್ ಅಭಿಮಾನಿಗಳ ಮನದ ಮೂಲೆಯಲ್ಲಿ ಆತಂಕ ಸುಳಿದಾಡುತ್ತಿತ್ತು. ಸೂಕರ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಪೀಲೆ (ಎಡ್ಸೆನ್ ಅರೆಂಟೀಸ್ ಡು ನಾಸಿಮೆಂಟೊ) ಕ್ಯಾನ್ಸರ್ ಉಲ್ಬಣಗೊಂಡು ಅದಾಗಲೇ ಆಸ್ಪತ್ರೆ ಸೇರಿದ್ದರು. ಅವರ ಪುತ್ರಿ ಕೆಲಿ ನಾಸಿಮೆಂಟೊ ಈ ವಾರ್ತೆಯನ್ನು ಜಗತ್ತಿಗೆ ತಿಳಿಸಿದ್ದರು. ಅಲ್ಲದೆ, ಅಪ್ಪರನ ಆರೋಗ್ಯ ಸ್ಥಿತಿಯ ಕ್ಷಣಕ್ಷಣದ ಮಾಹಿತಿಯೂ ನೀಡುತ್ತಿದ್ದರು. ಎಲ್ಲರಿಗೂ ಸಮಾಧಾನ ಹೇಳುತ್ತಿದ್ದರು. ಕರುಳಿನ ಕ್ಯಾನ್ಸರ್ ಬಂದಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ ಮೂತ್ರಪಿಂಡದ ಸಮಸ್ಯೆ ತಲೆದೋರಿತ್ತು. ಜತೆಗೆ ಕ್ಯಾನ್ಸರ್ ಗಂಟಲಿಗೂ ಹರಡಿತ್ತು. ಹುಟ್ಟು ಹೋರಾಟಗಾರನಾದ ಪೀಲೆ(RIP Pele) ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ವಿಶ್ವ ಕಪ್ ಫುಟ್ಬಾಲ್ಗೆ ಶುಭ ಹಾರಿಸಿದ್ದರು. ವಿಶೇಷವಾಗಿ ತಮ್ಮ ತಂಡಕ್ಕೆ.
ಆಸ್ಪತ್ರೆಯ ಬೆಡ್ನಲ್ಲಿಯೇ ಮಲಗಿ ವಿಶ್ವ ಕಪ್ ಸಮಾಚಾರಗಳನ್ನು ಪುತ್ರಿಯ ಮೂಲಕ ತಿಳಿದುಕೊಳ್ಳುತ್ತಿದ್ದರು ಫುಟ್ಬಾಲ್ ದೇವರು. ಬೇಗನೆ ಸುಧಾರಿಸಿಕೊಳ್ಳುವುದಾಗಿ ಆಶಾ ಭಾವನೆಯನ್ನೂ ವ್ಯಕ್ತಪಡಿಸಿದ್ದರು. ಫುಟ್ಬಾಲ್ ಜಗತ್ತು ಕೂಡ ಅವರಿಗಾಗಿ ಪ್ರಾರ್ಥಿಸಿತ್ತು. ದುಬೈನ್ ಬುರ್ಜ್ ಖಲೀಫಾದಲ್ಲಿ ಅವರ ಹೆಸರನ್ನು ಲೇಸರ್ ಲೈಟಿಂಗ್ ಮೂಲಕ ಸ್ಮರಿಸಲಾಗಿತ್ತು. ಬ್ರೆಜಿಲ್ ತಂಡದ ಸದಸ್ಯರೂ ದಿಗ್ಗಜನ ಚಿತ್ರ ಹಿಡಿದು ಗುಣಮುಖನಾಗಿ ಬಾ ಎಂದು ಹಾರೈಸಿದ್ದರು. ಇಷ್ಟೆಲ್ಲ ಗೌರವ ಸಂಪಾದಿಸಿದ ಪೀಲೆ ಗುರುವಾರ ರಾತ್ರಿ ಹಲವು ಸಾಧನೆಗಳನ್ನು ಕ್ರೀಡಾ ಜಗತ್ತಿಗೆ ಬಿಟ್ಟುಕೊಟ್ಟು ಇಹಲೋಕ ತ್ಯಜಿಸಿದರು. ಅಲ್ಲದೆ, ಆಸ್ಪತ್ರೆಯ ಹಾಸಿಗೆಯಲ್ಲೇ ಕೊನೇ ಕ್ರಿಸ್ಮಸ್ ಆಚರಿಸಿದ್ದರು. ಕೆಲವು ದಿನಗಳ ಹಿಂದೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬ ಸುದ್ದಿ ಬಂದಿತ್ತು. ಅವರನ್ನು ಜೀವನ ಕೊನೇ ಗಳಿಗೆಯನ್ನು ಎದುರು ನೋಡುತ್ತಿದ್ದಾರೆ ಎನ್ನಲಾಗಿತ್ತು. ಡಿಸೆಂಬರ್ 29ರಂದು ಆ ಸುದ್ದಿ ಸತ್ಯವಾಯಿತು.
ಪೀಲೆಯ ನಿಧನದಿಂದ ಫುಟ್ಬಾಲ್ನ ದೊಡ್ಡ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ವಿಶ್ವ ಫುಟ್ಬಾಲ್ ರಾಯಭಾರಿಯಾಗಿದ್ದ ಅವರು ಜೀವನದ ಕೊನೇ ಕ್ಷಣದ ತನಕವೂ ಕಾಲ್ಚೆಂಡಾಟದ ಶ್ರೇಷ್ಠತೆಯನ್ನು ಸಾರಿ ಹೇಳಿದ್ದರು. ಕ್ರೀಡೆಯ ರಾಯಭಾರಿಯಾಗಿದ್ದರು. ಶಾಂತಿಯ ಧೂತನಾಗಿದ್ದರು. ಹಲವಾರು ಯುವ ಫುಟ್ಬಾಲ್ ಪ್ರತಿಭೆಗಳಿಗೆ ದಾರಿ ದೀಪವಾಗಿದ್ದರು. ಸಾಧಿಸುವುದಾದರೆ ಪೀಲೆಯಂತೆ ಸಾಧನೆ ಮಾಡಬೇಕು ಎಂದು ಹೇಳುವಂತೆ ಜೀವಿಸಿದ್ದರು.
82 ವರ್ಷದ ಪೀಲೆಗೆ ಹಲವು ವರ್ಷಗಳ ಕಾಲ ಅನಾರೋಗ್ಯ ಕಾಡಿತ್ತು. ಮೊದಲಿಗೆ ಮೂತ್ರನಾಳದ ಸಮಸ್ಯೆ ಎದುರಿಸಿದ್ದ ಅವರು ಬಳಿಕ ಮೂತ್ರಪಿಂಡದ ವೈಫಲ್ಯದ ಕಾರಣಕ್ಕೆ ಡಯಾಲಿಸಿಸ್ಗೆ ಒಳಪಟ್ಟಿದ್ದರು. ಏತನ್ಮಧ್ಯೆ ಅವರಿಗೆ ಕರುಳಿನ ಕ್ಯಾನ್ಸರ್ ಕಾಣಸಿಕೊಂಡಿತ್ತು. ಶಸ್ತ್ರ ಚಿಕಿತ್ಸೆ ಮೂಲಕ ಅದನ್ನು ತೆಗೆದು ಹಾಕಲಾದರೂ, ಬಳಿಕ ಅದು ಗಂಟಲಿಗೆ ಹರಡಿತ್ತು. ಈ ವೇಳೆ ಮೂತ್ರಪಿಂಡದ ಸಮಸ್ಯೆಯೂ ಹೆಚ್ಚಾಗಿತ್ತು. ಅಂತೆಯೇ 2022ರ ನವೆಂಬರ್ 29ರಂದು ಮತ್ತೆ ಆಸ್ಪತ್ರೆ ಸೇರಿದ್ದರು. ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸಿದ್ದ ಅವರು ಆ ಬಳಿಕ ತೀವ್ರ ಅಸೌಖ್ಯಕ್ಕೆ ಒಳಗಾದರು. ಚಿಕಿತ್ಸೆಗೆ ಸ್ಪಂದಿಸುವುದನ್ನು ನಿಲ್ಲಿಸಿದರು. ಅಂತೆಯೇ ಒಂದು ತಿಂಗಳ ಕಾಲ ಆಸ್ಪತ್ತೆಯಲ್ಲಿದ್ದು ನಿಧನ ಹೊಂದಿದರು.
ಜಿರೋದಿಂದ ಹೀರೊ ತನಕ
ಬಡ ಫುಟ್ಬಾಲ್ ಆಟಗಾರನೊಬ್ಬನ ಪುತ್ರನಾಗಿ ಅಕ್ಟೋಬರ್ 23ರಂದು ಜನಿಸಿದ್ದ ಪೀಲೆ ಕಡುಬಡತನದಲ್ಲೇ ಬಾಲ್ಯ ಕಳೆದಿದ್ದರು. ಡ್ಸೆನ್ ಅರೆಂಟೀಸ್ ಡು ನಾಸಿಮೆಂಟೊ ಎಂಬ ಹೆಸರಿನ ಅವರು ಶೂ ಪಾಲೀಶ್ ಮಾಡಿಕೊಂಡು ಕುಟುಂಬದವರ ಆದಾಯದ ಮೂಲವಾಗಿದ್ದರು. ಆದರೆ, 11ನೇ ವರ್ಷವಿದ್ದಾಗ ಅವರು ಬ್ರೆಜಿಲ್ ಮಾಜಿ ಆಟಗಾರ ವಾಲ್ಡೆಮರ್ ಡಿ ಬ್ರಿಟೊ ಅವರ ಕಣ್ಣಿಗೆ ಬಿದ್ದಿದ್ದರು. ಪೀಲೆಯ ಕಾಲ್ಚಳಕವನ್ನು ಗಮನಿಸಿದ ಬ್ರಿಟೊ ಅವರ ಮನೆಯವರನ್ನು ಒಪ್ಪಿಸಿ ಫುಟ್ಬಾಲ್ ಕ್ಷೇತ್ರಕ್ಕೆ ಪರಿಚಯಿಸಿದ್ದರು. ಪೀಲೆ ಎಂಬ ಹೆಸರನ್ನೂ ಅವರು ನಾಮಕರಣ ಮಾಡಿದರು. ಬ್ರೆಜಿಲ್ನ ಸ್ಯಾಂಟೋಸ್ ಕ್ಲಬ್ಗೆ ಸೇರಿದ ಪೀಲೆ ಅಲ್ಲಿಂದ ತಿರುಗಿ ನೋಡಲೇ ಇಲ್ಲ. ಮೊದಲ ಪಂದ್ಯದಲ್ಲೇ ಗೋಲ್ ಬಾರಿಸಿದ ಅವರು ಕೊನೇವರೆಗೂ ಗೋಲ್ಗಳ ಸುರಿಮಳೆಗೈದಿದ್ದಾರೆ.
16 ವರ್ಷವಿದ್ದಾಗ ಅಂದರೆ 1957ರಲ್ಲಿ ಬ್ರೆಜಿಲ್ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ಅವರು ಅರ್ಜೆಂಟೀನಾ ವಿರುದ್ದ ಮೊದಲ ಪಂದ್ಯವಾಡಿದ್ದರು. ಅದರಲ್ಲೇ ಗೋಲ್ ಬಾರಿಸಿ ಜಗತ್ತಿನ ಗಮನ ಸೆಳೆದಿದ್ದರು. ಅಲ್ಲದೆ ಸಣ್ಣ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಗೋಲ್ ಬಾರಿಸಿದ ಆಟಗಾರ ಎಂಬ ಖ್ಯಾತಿ ಗಿಟ್ಟಿಸಿಕೊಂಡಿದ್ದರು.
1958, 1966 ಹಾಗೂ 1970ರ ವಿಶ್ವ ಕಪ್ ಗೆದ್ದ ಬ್ರೆಜಿಲ್ ತಂಡದ ಸದಸ್ಯರಾಗಿದ್ದ ಅವರು ಮೂರು ವಿಶ್ವ ಕಿರೀಟ ಧರಿಸಿದ ಏಕೈಕ ಆಟಗಾರ. ಒಟ್ಟಾರೆಯಾಗಿ 14 ವಿಶ್ವ ಕಪ್ ಪಂದ್ಯಗಳನ್ನು ಆಡಿರುವ ಅವರು 12 ಗೋಲ್ಗಳನ್ನು ಬಾರಿಸಿದ್ದಾರೆ. ಈ ಸಾಧನೆ ಮುರಿಯಲು ಇನ್ನೂ ಯಾರಿಗೂ ಆಗಿಲ್ಲ ಎಂಬುದು ಪೀಲೆಯ ಸಾಧನೆಯ ಶ್ರೇಷ್ಠತೆಯನ್ನು ತೋರಿಸುತ್ತದೆ.
ಸ್ಯಾಂಟೋಸ್ ಕ್ಲಬ್ಗೆ ಆಡಿರುವ ಅವರು 1975ರಲ್ಲಿ ಅಮೆರಿಕದ ನ್ಯೂಯಾರ್ಕ್ ಕಾಸ್ಮೋಸ್ ಕ್ಲಬ್ ಜತೆಯೂ ಒಪ್ಪಂದ ಮಾಡಿಕೊಂಡಿದ್ದರು. ಆದರೆ, 70ರ ದಶಕದಲ್ಲಿ ಅವರು ಗಾಯದ ಸಮಸ್ಯೆಯ ಸುಳಿಗೆ ಸಿಲುಕಿದರು. ಹೀಗಾಗಿ 1974ರಲ್ಲಿ ಮೊದಲ ಬಾರಿ ವಿದಾಯ ಘೋಷಿಸಿದರು. 1975ರಲ್ಲಿ ಮತ್ತೆ ಮರಳಿದ ಅವರು ನ್ಯೂಯಾರ್ಕ್ ಕಾಸ್ಮೋಸ್ ಕ್ಲಬ್ ಪರ ಆಡಿದ್ದರು. 1977ರಲ್ಲಿ ಅಂತಿಮ ಪಂದ್ಯ ಆಡಿದ್ದರು.
ವಿದಾಯದ ಬಳಿಕ ಅವರು 1995ರಿಂದ 98ರವರೆಗೆ ಬ್ರೆಜಿಲ್ನ ಕ್ರೀಡಾ ಸಚಿವರಾಗಿ ಕೆಲಸ ಮಾಡಿದ್ದರು. ಜತೆಗೆ ಜಾಗತಿಕ ಫುಟ್ಬಾಲ್ನ ಅಂಬಾಸಿಡರ್ ಕೂಡ ಆಗಿದ್ದರು.
1978ರಲ್ಲಿ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ ಪಡೆದ ಪೀಲೆ, 1993ರಲ್ಲಿ ನ್ಯಾಷನಲ್ ಸೂಕರ್ ಹಾಲ್ಆಫ್ ಫೇಮ್ ಗೌರವ ಗಿಟ್ಟಿಸಿದ್ದರು. 1999ರಲ್ಲಿ ನ್ಯಾಷನಲ್ ಒಲಿಂಪಿಕ್ ಕಮಿಟಿಯ ಶತಮಾನದ ಕ್ರೀಡಾಪಟು (ಅಥ್ಲೀಟ್ ಆಫ್ ಸೆಂಚುರಿ), ಅದೇ ವರ್ಷ ವಿಶ್ವ ಕ್ರೀಡಾ ಪ್ರಶಸ್ತಿ ಪಡೆದುಕೊಂಡಿದ್ದರು.
ಇದನ್ನೂ ಓದಿ | Pele Passes Away | ಬ್ರೆಜಿಲ್ ಫುಟ್ಬಾಲ್ ದಂತಕತೆ ಪೀಲೆ ಇನ್ನಿಲ್ಲ