ವಿಶ್ವಕಪ್ ಕ್ರಿಕೆಟ್- 2023 ಪಂದ್ಯಾವಳಿಯಲ್ಲಿ ಭಾರತ ತಂಡ ಪ್ರಭಾವಿ ಪ್ರದರ್ಶನ ನೀಡುತ್ತಿದೆ. ಇಲ್ಲಿಯವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಎಲ್ಲದರಲ್ಲೂ ಗೆದ್ದು ಅಂಕಪಟ್ಟಿಯಲ್ಲಿ 14 ಅಂಕಗಳನ್ನು ಸಂಪಾದಿಸಿ ಸೆಮಿಫೈನಲ್ ಹಂತಕ್ಕೆ ತಲುಪಿದೆ. ಭಾರತ ತಂಡಕ್ಕೆ ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿವೆ. ದಕ್ಷಿಣ ಆಫ್ರಿಕಾ ಮತ್ತು ನೆದರ್ಲ್ಯಾಂಡ್ಸ್ ತಂಡ. ಇವೆರಡರಲ್ಲೂ ಗೆದ್ದರೆ ಅಜೇಯ ತಂಡವಾಗಿ ಸೆಮಿ ಫೈನಲ್ನಲ್ಲಿ ಆಡಲಿದೆ. ರ್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡಿರುವ ಇಂಡಿಯಾ ಕ್ರಿಕೆಟ್ ಟೀಂ, ಈ ವರ್ಷದ ವಿಶ್ವ ಕಪ್ ಗೆಲ್ಲಲಿದೆ ಎಂಬ ಅಭಿಮಾನಿಗಳ ಕನಸು ನನಸಾಗಲಿದೆ ಎಂದುಕೊಂಡರೆ ತಪ್ಪೇನಿಲ್ಲ. ಮುಖ್ಯವಾಗಿ ನಮ್ಮ ತಂಡದ ಎಲ್ಲ ಆಟಗಾರರ ತಂಡಸ್ಫೂರ್ತಿ ಹಾಗೂ ಪ್ರದರ್ಶನ ಮನ ಮೆಚ್ಚುವಂತಿದೆ. ಯಾರೂ ಇಲ್ಲಿ ಒಬ್ಬ ಆಟಗಾರನನ್ನೇ ನೆಚ್ಚಿ ಕೂತಿಲ್ಲ. ತಂಡದಲ್ಲಿರುವ ಹನ್ನೊಂದೂ ಆಟಗಾರರೂ ತಮ್ಮದೇ ಆದ ರೀತಿಯಲ್ಲಿ ಗರಿಷ್ಠ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾಗುತ್ತಿದ್ದಾರೆ.
ಭಾರತ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಸಮರ್ಥ ಪ್ರದರ್ಶನ ನೀಡುತ್ತಿದೆ. ಆಟಗಾರರೆಲ್ಲರೂ ಜೀವನ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. ರೋಹಿತ್ ಶರ್ಮಾ ಒಂದು ಶತಕ (ಅಫಘಾನಿಸ್ತಾನ ವಿರುದ್ಧ ಬಾರಿಸಿದ್ದರೆ ವಿರಾಟ್ ಕೊಹ್ಲಿಯೂ ಬಾಂಗ್ಲಾ ವಿರುದ್ಧ ಶತಕ ಬಾರಿಸಿದ್ದಾರೆ. ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್, ಕೆ. ಎಲ್ ರಾಹುಲ್ ಸೇರಿದಂತೆ ಎಲ್ಲರೂ ಬ್ಯಾಟಿಂಗ್ನಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಭಾರತ ತಂಡದ ಬೌಲರ್ಗಳು ಉರಿಚೆಂಡಿನ ದಾಳಿ ನಡೆಸುತ್ತಿದ್ದಾರೆ. ಇಂಗ್ಲೆಂಡ್ ತಂಡವನ್ನು 129 ರನ್ಗೆ ಆಲೌಟ್ ಮಾಡಿ ಭಾರತ ಭರ್ತಿ 100 ರನ್ಗಳ ಗೆಲುವು ಸಾಧಿಸಿತ್ತು. ಲಂಕಾ ತಂಡವನ್ನು 55 ರನ್ಗಳಿಗೆ ಆಲ್ಔಟ್ ಮಾಡಿ 302 ರನ್ ಗೆಲುವು ದಾಖಲಿಸಿದೆ. ಮೊಹಮ್ಮದ್ ಶಮಿ ಎರಡು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಬುಮ್ರಾ ಕೂಡ ಆರಂಭಿಕ ಸ್ಪೆಲ್ನಲ್ಲಿ ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿಯುತ್ತಿದ್ದಾರೆ. ಸಿರಾಜ್ ಅಹಮದ್ ಉಪಯುಕ್ತ ನೆರವು ನೀಡುತ್ತಿದ್ದಾರೆ. ಸ್ಪಿನ್ನರ್ ಕುಲ್ದೀಪ್ ಯಾದವ್ ಪ್ರಮುಖ ಹಣಾಹಣಿಯಲ್ಲಿ ಗೆಲುವಿನ ಜವಾಬ್ದಾರಿ ಹೊತ್ತುಕೊಂಡಿದ್ದರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಪಾಕ್ ಕ್ರೂರ ನಡೆ, ಆಫ್ಘನ್ ನಿರಾಶ್ರಿತರು ಅತಂತ್ರ
ಸದ್ಯಕ್ಕೆ ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಕೊಹ್ಲಿಗೆ ಎರಡನೇ ಸ್ಥಾನ. ಅವರು ಪಂದ್ಯಾವಳಿಯಲ್ಲಿ 442 ರನ್ ಬಾರಿಸಿದ್ದಾರೆ ಅವರು. ರೋಹಿತ್ 402 ರನ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ಶಮಿ 18 ರನ್ಗಳಿಗೆ 5 ವಿಕೆಟ್ ಪಡೆದು ಮಿಂಚಿದ್ದು ವಿಶ್ವ ಕಪ್ನಲ್ಲಿ ಅತ್ಯುತ್ತಮ ಸಾಧನೆಯಾಗಿದೆ. ಗೆಲುವಿನ ಪ್ರದರ್ಶನದಲ್ಲಿ 100ಕ್ಕೆ ನೂರರಷ್ಟು ಫಲಿತಾಂಶ ಪಡೆದಿದೆ ಭಾರತ. ಭಾರತ ತಂಡ ವಿಶ್ವ ಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿದೆ. ಕಪ್ ಗೆಲ್ಲುವುದು ಭಾರತವೇ ಎಂಬುದು ಅಭಿಮಾನಿಗಳ ನಿರೀಕ್ಷೆ. ಇದುವರೆಗೂ ಭಾರತ ಎರಡು ಏಕದಿನ ಕ್ರಿಕೆಟ್ ವಿಶ್ವಕಪ್‌ಗಳನ್ನು ಗೆದ್ದಿದೆ. ಕಪಿಲ್ ದೇವ್ ನಾಯಕತ್ವದಲ್ಲಿ 1983ರಲ್ಲಿ ಹಾಗೂ ಎಂ.ಎಸ್ ಧೋನಿ ನೇತೃತ್ವದಲ್ಲಿ 2011ರಲ್ಲಿ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಪಂದ್ಯಾವಳಿ ಏಕದಿನ ಕ್ರಿಕೆಟ್‌ನ ಸಂಪೂರ್ಣ ಬೆರಗನ್ನೂ ಅದ್ಭುತವನ್ನೂ ಸಾದರಪಡಿಸುತ್ತದೆ. ಅನೇಕ ಪ್ರತಿಭೆಗಳ ಆಗಮನ ನಿರ್ಗಮನಗಳು, ಹಳೆಯ ದಾಖಲೆಗಳ ಭಂಗ, ಹೊಸ ದಾಖಲೆಗಳ ಸೃಷ್ಟಿಗಳಿಗೆ ಕಾರಣವಾಗುತ್ತದೆ. 12 ವರ್ಷಗಳಿಂದ ಭಾರತ ಮತ್ತೊಂದು ಏಕದಿನ ವಿಶ್ವಕಪ್‌ಗಾಗಿ ಹಸಿದಿದೆ. ನಮ್ಮ ಪ್ರತಿಭೆಗಳು ಇದನ್ನು ಗೆಲ್ಲಬಲ್ಲರು; ಗೆಲ್ಲಲಿ ಎಂದು ಆಶಿಸೋಣ.