Site icon Vistara News

ವಿಸ್ತಾರ ಸಂಪಾದಕೀಯ: ಭಾರತೀಯ ಕುಸ್ತಿಪಟುಗಳ ಮಾನ ಹರಾಜಾಗದಿರಲಿ

let-the-honour-of-indian-wrestlers-not-be-auctioned

#image_title

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಏಳು ಮಹಿಳಾ ಕುಸ್ತಿ ಪಟುಗಳು ದಿಲ್ಲಿಯ ಜಂತರ್ ಮಂತರ್ ನಲ್ಲಿ ಕಳೆದ ಒಂದು ವಾರದಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುವುದು ಇವರ ಬೇಡಿಕೆಯಾಗಿದೆ. ಸಿಂಗ್ ಬಿಜೆಪಿ ಸಂಸದರೂ ಹೌದು. ತಮ್ಮನ್ನು ರಾಜಕೀಯ ಕಾರಣಕ್ಕಾಗಿ ಹಣಿಯಲಾಗುತ್ತಿದೆ ಎನ್ನುವುದು ಬ್ರಿಜ್ ಭೂಷಣ್ ಸಿಂಗ್ ಆರೋಪವಾಗಿದೆ. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದೆ. ಧರಣಿ ಕುಳಿತಿರುವವರು ಜಾಗತಿಕ‌ ಮಟ್ಟದ ಕ್ರೀಡಾಪಟುಗಳು ಆಗಿರುವುದರಿಂದಲೂ, ಪ್ರಕರಣ ಗಂಭೀರವಾಗಿರುವುದರಿಂದಲೂ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಭಾರತೀಯ ಕುಸ್ತಿ ಒಕ್ಕೂಟದ ಮಾನ ಹರಾಜಾಗುತ್ತಿದೆ. ಇದು ಇನ್ನಷ್ಟು ಅಪಖ್ಯಾತಿ ತರುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.

ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಏಳು ಮಹಿಳಾ ಕುಸ್ತಿಪಟುಗಳು ಸಂಸದರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪ ಹೊರಿಸಿ ಏಪ್ರಿಲ್ 21ರಂದು ಪ್ರತ್ಯೇಕ ಪೊಲೀಸ್ ದೂರುಗಳನ್ನು ದಾಖಲಿಸಿದ್ದಾರೆ. ಆದರೆ ದಿಲ್ಲಿ ಪೊಲೀಸರು ಬ್ರಿಜ್ ಭೂಷಣ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಕುಸ್ತಿಪಟುಗಳು ಮಂಗಳವಾರ ಸುಪ್ರೀಂ​ ಕೋರ್ಟ್​ ಮೊರೆ ಹೋಗಿದ್ದರು. ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್​​ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದೆ. ಪ್ರತಿಭಟಿಸುತ್ತಿರುವವರು ಸಾಮಾನ್ಯರಲ್ಲ. ಒಲಿಂಪಿಕ್ ಕಂಚಿನ ಪದಕ ವಿಜೇತರಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ, ವಿಶ್ವ ಪದಕ ವಿಜೇತ ವಿನೇಶ್ ಫೋಗಟ್ ಪ್ರತಿಭಟನೆಯಲ್ಲಿದ್ದಾರೆ.

ಡಬ್ಲ್ಯುಎಫ್ಐನ ಕಾರ್ಯನಿರ್ವಹಣೆಯಲ್ಲಿ ಹಣಕಾಸಿನ ದುರುಪಯೋಗ ನಡೆದಿದೆ. ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ. ಭಾರತದಲ್ಲಿ ನಡೆದ ಕೆಲವೊಂದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯ ವೇಳೆ ಮಹಿಳಾ ಕುಸ್ತಿಪಟುಗಳ ಮೇಲೆ ಬ್ರಿಜ್​ ಭೂಷಣ್​ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ ಕುಸ್ತಿಪಟುಗಳು ಆರೋಪಿಸಿದ್ದಾರೆ. ದೂರು ದಾಖಲಿಸಿಕೊಳ್ಳುವುದಕ್ಕೇ ನಿರಾಕರಿಸಿರುವ ಪೊಲೀಸರ ನಡೆಯ ಹಿನ್ನೆಲೆಯಲ್ಲಿ ರಾಜಕೀಯ ಪ್ರಭಾವ ಇರುವಂತಿದೆ. ಕುಸ್ತಿಪಟುಗಳು ಜನವರಿಯಲ್ಲಿ ಪ್ರತಿಭಟನೆ ಮಾಡಿದಾಗ ಕ್ರೀಡಾ ಸಚಿವಾಲಯದ ಮಧ್ಯಸ್ಥಿಕೆಯಲ್ಲಿ ತನಿಖೆಗೆ ಮೇಲುಸ್ತುವಾರಿ ಸಮಿತಿ ರಚನೆ ಮಾಡಿತ್ತು. ತನಿಖೆ ನಡೆಸಿದ ಸಮಿತಿಯು, ವರದಿ ಸಲ್ಲಿಸಿದೆ. ವರದಿಯ ವಿವರಗಳು ಸಿಕ್ಕಿಲ್ಲ. ಈಗ ಆ ಸಮಿತಿಯನ್ನೂ ವಿಸರ್ಜಿಸಲಾಗಿದೆ. ಬ್ರಿಜ್‌ಭೂಷಣ್‌ ಭಾರಿ ಪ್ರಭಾವಿಯೂ ಹೌದು. ಇವರ ಹಿಡಿತದಲ್ಲಿ ಕುಸ್ತಿ ಫೆಡರೇಶನ್‌ ಇದೆ. ಮೂರು ಬಾರಿ ಇದಕ್ಕೆ ಅಧ್ಯಕ್ಷರಾಗಿರುವ ಇವರು ಮುಂದಿನ ಚುನಾವಣೆಯಲ್ಲಿ ಮಗನನ್ನು ಅಧ್ಯಕ್ಷನಾಗಿಸಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ನಿಂದನೆಗಳು ಆಡಿದವರಿಗೇ ಹಾನಿಕರ, ಮಾತಿನಲ್ಲಿ ಎಚ್ಚರವಿರಲಿ

ಈ ವಿಚಾರವಾಗಿ ದೇಶದ ಖ್ಯಾತನಾಮ ಕ್ರೀಡಾಪಟುಗಳ ನಡುವೆಯೂ ವಾಗ್ವಾದ ನಡೆಯುತ್ತಿದೆ. ಇದು ಹೀಗೆಯೇ ಮುಂದುವರಿದರೆ, ಅಂತಾರಾಷ್ಟ್ರೀಯ ಕುಸ್ತಿ ಸಮಿತಿ ಭಾರತೀಯ ಕುಸ್ತಿ ಒಕ್ಕೂಟದ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾದರೆ ಇದರ ಪರಿಣಾಮ ಎಲ್ಲ ಕುಸ್ತಿ ಪಟುಗಳ ಮೇಲಾಗಲಿದೆ. ಕೇಂದ್ರ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಈ ವಿವಾದಕ್ಕೆ ತೆರೆ ಎಳೆಯಬೇಕು. ಈ ವಿವಾದದ ಹಿಂದೆ ಎಷ್ಟು ಸತ್ಯಾಂಶವಿದೆ, ಅಥವಾ ರಾಜಕೀಯ ಹಿತಾಸಕ್ತಿ ಅಡಗಿದೆಯಾ ಎನ್ನುವುದನ್ನೂ ಪತ್ತೆ ಹಚ್ಚಬೇಕಿದೆ. ಕುಸ್ತಿ ಒಕ್ಕೂಟವೂ ಸೇರಿದಂತೆ ಹಲವಾರು ಕ್ರೀಡಾ ಒಕ್ಕೂಟಗಳ ಮೇಲೆ ರಾಜಕಾರಣಿಗಳ ಭಾರಿ ಹಿಡಿತವಿದೆ. ಕೆಲವನ್ನು ಆ ಹಿಡಿತದಿಂದ ಮುಕ್ತಿಗೊಳಿಸಲಾಗಿದ್ದರೂ ಕುಸ್ತಿ ಒಕ್ಕೂಟ ಮಾತ್ರ ಇನ್ನೂ ಪಾಳೇಗಾರಿಕೆಯ ಸನ್ನಿವೇಶದಲ್ಲೇ ಇದ್ದಂತಿದೆ. ಪುರುಷ ಕುಸ್ತಿ ಪಟುಗಳಿಗೂ ಅಪರಾಧಕ್ಕೂ ಇರುವ ಸಂಬಂಧವೂ ಆಗಾಗ ದೇಶದ ಗಮನ ಸೆಳೆದಿದೆ. ಸರ್ಕಾರ ಕೂಡಲೇ ಇದರ ಬಗ್ಗೆ ಗಮನ ಹರಿಸಿ, ವಿವಾದಕ್ಕೆ ತೆರೆಯೆಳೆದು, ಜಾಗತಿಕ ಕ್ರೀಡಾವಲಯದಲ್ಲಿ ನಮ್ಮ ದೇಶ ನಗೆಪಾಟಲಿಗೀಡಾಗುವುದನ್ನು ತಪ್ಪಿಸಬೇಕಿದೆ.

Exit mobile version