Site icon Vistara News

IPL 2023 : ಸ್ಟೊಯ್ನಿಸ್​ ಅರ್ಧ ಶತಕ; ಮುಂಬಯಿ ಇಂಡಿಯನ್ಸ್​ ತಂಡಕ್ಕೆ 178 ರನ್​ ಗೆಲುವಿನ ಸವಾಲು

Lucknow Super Giants vs Mumbai Indians IPL 63rd Match First innings Score

#image_title

ಲಖನೌ: ಬಲಗೈ ಬ್ಯಾಟರ್​ ಮಾರ್ಕ್​ ಸ್ಪೊಯ್ನಿಸ್​ (ಅಜೇಯ 89) ಅವರ ಸ್ಫೋಟಕ ಅರ್ಧ ಶತಕದ ನೆರವು ಪಡೆದ ಲಕ್ನೊ ಸೂಪರ್ ಜೈಂಟ್ಸ್​ ತಂಡ ಐಪಿಎಲ್ 16ನೇ ಆವೃತ್ತಿಯ 63ನೇ ಪಂದ್ಯದಲ್ಲಿ ಎದುರಾಳಿ ಮುಂಬಯಿ ಇಂಡಿಯನ್ಸ್​ ತಂಡಕ್ಕೆ 178 ರನ್​​ಗಳ ಗೆಲುವಿನ ಸವಾಲು ಒಡ್ಡಿದೆ. ನಾಯಕ ಕೃಣಾಲ್​ ಪಾಂಡ್ಯ ಕೂಡ 49 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು.

ಇಲ್ಲಿನ ಅಟಲ್​ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮಂಗಳವಾರ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಮುಂಬಯಿ ಇಂಡಿಯನ್ಸ್ ತಂಡದ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಲಕ್ನೊ ಸೂಪರ್​ ಜೈಂಟ್ಸ್​ ತಂಡ ನಿಗದಿತ 20 ಓವರ್​​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ .177 ರನ್​ ಬಾರಿಸಿತು.

ಬ್ಯಾಟಿಂಗ್ ಆರಂಭಿಸಿದ ಲಕ್ನೊ ಸೂಪರ್ ಜೈಂಟ್ಸ್ ತಂಡ ಹೀನಾಯ ಆರಂಭ ಪಡೆಯಿತು. ಆರಂಭಿಕರಾಗಿ ಬಡ್ತಿ ಪಡೆದ ಹೊರತಾಗಿಯೂ ದೀಪಕ್​ ಹೂಡ 5 ರನ್​ ಮಾತ್ರ ಗಳಿಸಿ ಔಟಾದರು. ಈ ಮೂಲಕ ಅವರು ಹಾಲಿ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದರು. ತಮಗೆ ಸಿಕ್ಕ ಯಾವುದೇ ಅವಕಾಶವನ್ನೂ ಅವರು ಬಳಸಿಕೊಳ್ಳಲಿಲ್ಲ. ದಕ್ಷಿಣ ಆಫ್ರಿಕಾದ ವಿಕೆಟ್​ಕೀಪರ್​ ಬ್ಯಾಟರ್ ಕ್ವಿಂಟನ್ ಡಿ ಕಾಕ್​ 16 ರನ್​ ಗಳಿಸಿ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ಅವಕಾಶ ಪಡೆದ ಪ್ರೇರಕ್​ ಮಂಕಡ್​ ಗೋಲ್ಡನ್​ ಡಕ್​ ಆದರು. ತಾವೆದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್​​ಕೀಪರ್​​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಆತಿಥೇಯ ತಂಡ 35 ರನ್​ಗಳಿಗೆ 3 ವಿಕೆಟ್​ ನಷ್ಟ ಮಾಡಿಕೊಂಡು ಸಂಕಷ್ಟಕ್ಕೆ ಬಿತ್ತು.

ಸ್ಟೊಯ್ನಿಸ್, ಕೃಣಾಲ್​ ಅರ್ಧ ಶತಕದ ಜತೆಯಾಟ

ಆರಂಭಿಕ ಮುನ್ನಡೆ ಪಡೆದುಕೊಂಡ ಖುಷಿಯಲ್ಲಿದ್ದ ಮುಂಬಯಿ ತಂಡಕ್ಕೆ ನಾಲ್ಕನೇ ಕ್ರಮಾಕದಲ್ಲಿ ಆಡಲು ಇಳಿದ ನಾಯಕ ಕೃಣಾಲ್​ ಪಾಂಡ್ಯ ಪ್ರತಿರೋಧ ಒಡ್ಡಲು ಆರಂಭಿಸಿದರು. ಅವರ ಜತೆ ಸೇರಿದ ಆಸ್ಟ್ರೇಲಿಯಾದ ಬಲಗೈ ಬ್ಯಾಟರ್​ ಸ್ಟೊಯ್ನಿಸ್​ ಕೂಡ ಮುಂಬಯಿ ಬೌಲರ್​ಗಳ ಬೆವರಿಳಿಸಲು ಆರಂಭಿಸಿದರು. ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಈ ಜೋಡಿ ಮುಂದಿನ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್​ ಮಾಡಲು ಮುಂದಾದರು. ಅದರಲ್ಲೂ ಸ್ಟೊಯ್ನಿಸ್​ ಅಬ್ಬರದ ಬ್ಯಾಟಿಂಗ್ ನಡೆಸಿದರು.

42 ಎಸೆತಗಳನ್ನು ಎದುರಿಸು 1 ಸಿಕ್ಸರ್ ಹಾಗೂ 1 ಫೋರ್​ ಸಮೇತ 49 ರನ್ ಬಾರಿಸಿದ್ದ ಕೃಣಾಲ್​ ಪಾಂಡ್ಯ ಗಾಯಗೊಂಡು ಮೈದಾನ ತೊರೆಯುವಂತಾಯಿತು. ಈ ವೇಳೆ ತಂಡದ ಮೊತ್ತ 117ಕ್ಕೆ ಏರಿತ್ತು. ಈ ಬಳಿಕ ಏಕಾಏಕಿ ಸ್ಫೋಟಕ ಬ್ಯಾಟಿಂಗ್ ಮಾಡಲು ಆರಂಭಿಸಿದ ಸ್ಟೊಯ್ನಿಸ್​ ತಮ್ಮ ಅರ್ಧ ಶತಕ ಪೂರೈಸಿದರು. ಅಲ್ಲದೆ, 47 ಎಸೆತಗಳನ್ನು ಎದುರಿಸಿ 8 ಸಿಕ್ಸರ್​ ಹಾಗೂ 4 ಫೋರ್​ ಮೂಲಕ 89 ರನ್​ ಬಾರಿಸಿದರು. ಇವರ ಭರ್ಜರಿ ಬ್ಯಾಟಿಂಗ್ ಕಾರಣಕ್ಕೆ ಲಕ್ನೊ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು. ಕೊನೆಯಲ್ಲಿ ನಿಕೋಲಸ್​ ಪೂರನ್ 8 ಎಸೆತಕ್ಕೆ 8 ರನ್​ ಬಾರಿಸಿದರು.

ಮುಂಬಯಿ ಪರ ಬೌಲಿಂಗ್​ನಲ್ಲಿ ಜೇಸನ್​ ಬ್ರೆಹ್ರೆನ್​ಡಾರ್ಫ್​ 30 ರನ್​​ ನೀಡಿ ಎರಡು ವಿಕೆಟ್ ಕಬಳಿಸಿದರು. ಪಿಯೂಷ್​ ಚಾವ್ಲಾ ಕೂಡ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.

Exit mobile version