ಚೆನ್ನೈ: ಬ್ಯಾಟ್ಸ್ಮನ್ಗಳ ಸಂಘಟಿತ ಪ್ರಯತ್ನದ ಫಲವಾಗಿ ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಮುಂಬಯಿ ಇಂಡಿಯನ್ಸ್ ತಂಡ ಎದುರಾಳಿ ಲಕ್ನೊ ಸೂಪರ್ ಜೈಂಟ್ಸ್ ತಂಡಕ್ಕೆ 183 ರನ್ಗಳ ಗೆಲುವಿನ ಗುರಿಯನ್ನು ಒಡ್ಡಿದೆ. ಇದು ಹಾಲಿ ಆವೃತ್ತಿಯ ಐಪಿಎಲ್ನ ಎಲಿಮಿನೇಟರ್ ಪಂದ್ಯವಾಗಿದ್ದು ಸೋತ ತಂಡ ಟೂರ್ನಿಯಿಂದ ಹೊರಕ್ಕೆ ಬೀಳಲಿದೆ. ಮುಂಬಯಿ ತಂಡದ ಪರ ಕ್ಯಾಮೆರೂನ್ ಗ್ರೀನ್ 41 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಇಲ್ಲಿನ ಎಂಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಮುಂಬಯಿ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ಬಳಗ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿತು.
ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ಉತ್ತಮ ಆರಂಭ ಪಡೆಯಲಿಲ್ಲ. 30 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡರೆ 38 ರನ್ಗಳಿಗೆ 2ನೇ ವಿಕೆಟ್ ಪತನಗೊಂಡಿತು. ಆದರೆ, ಮೂರನೇ ವಿಕೆಟ್ಗೆ ಜತೆಯಾದ ಸೂರ್ಯಕುಮಾರ್ ಯಾದವ್ (33) ಹಾಗೂ ಕ್ಯಾಮೆರಾನ್ ಗ್ರೀನ್ (41) ತಂಡಕ್ಕೆ ಆಧಾರವಾದರು. ಈ ಜೋಡಿ 66 ರನ್ಗಳ ಜತೆಯಾಟ ನೀಡುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
ಲಕ್ನೊ ತಂಡದ ಪರ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದ್ದ ಅಫಘಾನಿಸ್ತಾನದ ಆಟಗಾರ ನವಿನ್ ಉಲ್ ಹಕ್ (38 ರನ್ಗಳಿಗೆ 4 ವಿಕೆಟ್) ಒಂದೇ ಓವರ್ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಕ್ಯಾಮೆರೂನ್ ಗ್ರೀನ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಈ ಮೂಲಕ ಮುಂಬಯಿ ತಂಡದ ರನ್ ಗಳಿಕೆ ಏಕಾಏಕಿ ಕುಸಿತ ಕಂಡಿತು. ಬಳಿಕ ತಿಲಕ್ ವರ್ಮಾ (26) ಹಾಗೂ ಕೊನೇ ಹಂತದಲ್ಲಿ ಸ್ಫೋಟಕ ಪ್ರದರ್ಶನ ನೀಡಿದ ನೇಹಲ್ ವಧೇರಾ (12 ಎಸೆತಕ್ಕೆ 23) ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಟಿಮ್ ಡೇವಿಡ್ 13 ರನ್ ಬಾರಿಸಿದರೆ ಕ್ರಿಸ್ ಜೋರ್ಡಾನ್ 4 ರನ್ಗೆ ಸೀಮಿತಗೊಂಡರು.
ಇದನ್ನೂ ಓದಿ : MS Dhoni : ಧೋನಿ ಮುಂದಿನ ವರ್ಷವೂ ಆಡುತ್ತಾರೆ ಎಂಬ ಸೂಚನೆ ನೀಡಿದ ಡ್ವೇನ್ ಬ್ರಾವೊ
ಲಕ್ನೊ ತಂಡದ ಪರ ಯಶ್ ಠಾಕೂರ್ 33 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಬಳಿಸಿದರು. ಮೊಹ್ಸಿನ್ ಖಾನ್ 24 ರನ್ಗಳಿಗೆ 1 ವಿಕೆಟ್ ತಮ್ಮದಾಗಿಸಿಕೊಂಡರು.