Site icon Vistara News

IPL 2023 : ಲಕ್ನೊ ಸೂಪರ್​ ಜಯಂಟ್ಸ್ ತಂಡಕ್ಕೆ 56 ರನ್​ಗಳ ಬೃಹತ್ ಅಂತರದ ​ ಜಯ

#image_title

ಮೊಹಾಲಿ: ಐಪಿಎಲ್​ 16ನೇ ಅವೃತ್ತಿಯ ಐಪಿಎಲ್​ನ 38ನೇ ಪಂದ್ಯದಲ್ಲಿ ರನ್​ಗಳ ಮಳೆಯೇ ಸುರಿಯಿತು. ದೊಡ್ಡ ಮೊತ್ತದ ಈ ಪಂದ್ಯದಲ್ಲಿ ಗೆಲುವು ಪ್ರವಾಸಿ ಲಕ್ನೊ ತಂಡದ ಪಾಲಾಯಿತು. ಆತಿಥೇಯ ಪಂಜಾಬ್​ ತಂಡವೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆದರೆ, 258 ರನ್​ಗಳ ಗುರಿಯನ್ನು ಭೇದಿಸಲು ಸಾಧ್ಯವಾಗದೇ 56 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಲಕ್ನೊ ತಂಡ ಮತ್ತೆ ಗೆಲುವಿನ ಹಾದಿಗೆ ಮರಳಿದರೆ, ಪಂಜಾಬ್​ ಬಳಗ ಸೋಲಿಗೆ ಸುಳಿಗೆ ಸಿಲುಕಿತು. ಇದು ಪಂಜಾಬ್​ನ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಹಾಲಿ ಆವೃತ್ತಿಯಲ್ಲಿ ದಾಖಲಾದ ಮೊದಲ 200 ಪ್ಲಸ್ ರನ್​

ಇಲ್ಲಿನ ಸವಾಯ್​ ಮಾನ್​ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಆತಿಥೇಯ ಪಂಜಾಬ್ ತಂಡದ ನಾಯಕ ಶಿಖರ್ ಧವನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ತಮಗೆ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಲಕ್ನೊ ಬ್ಯಾಟರ್​ಗಳು ಮೈದಾನ ತುಂಬೆಲ್ಲ ಬೌಂಡರಿ ಸಿಕ್ಸರ್​ಗಳ ಮಳೆ ಸುರಿಸಿದರು. ಇದರಿಂದಾಗಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 257 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಪಂಜಾಬ್​ ತಂಡ 19 .5 ಓವರ್​​ಗಳಲ್ಲಿ 201 ರನ್​​ಗಳಿಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು.

ಲಕ್ನೊ ತಂಡ ಗಳಿಸಿದ 257 ರನ್​ಗಳ ಬೃಹತ್ ಮೊತ್ತ ಪೇರಿಸಿದೆ. ಇದು ಐಪಿಎಲ್​ ಇತಿಹಾಸದಲ್ಲಿ ತಂಡವೊಂದು ಪೇರಿಸಿದ ಎರಡನೇ ಗರಿಷ್ಠ ಮೊತ್ತವಾಗಿದೆ. 2013ರಲ್ಲಿ ರಾಯಲ್​ ಚಾಲೆಂಜರ್ಸ್ ತಂಡ ಗಳಿಸಿರುವ 263 ರನ್​ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಲಕ್ನೊ ತಂಡದ ಪರ ಮಾರ್ಕ್​ ಸ್ಟೊಯ್ನಿಸ್​ (72) ಹಾಗೂ ಕೈಲ್​ ಮೇಯರ್ಸ್​(54) ರನ್ ಬಾರಿಸಿದರೆ ಆಯುಷ್​ ಬದೋನಿ (43) ಹಾಗೂ ನಿಕೋಲಸ್​ ಪೂರನ್​ (45) ಕೂಡ ದೊಡ್ಡ ಮೊತ್ತ ಪೇರಿಸಲು ನೆರವಾದರು.

ಬ್ಯಾಟಿಂಗ್ ಆರಂಭಿಸಿದ ಲಕ್ನೊ ತಂಡದ ಪರ ನಾಯಕ ಕೆ. ಎಲ್​ ರಾಹುಲ್ 12 ರನ್​ಗಳಿಗೆ ಔಟಾಗುವ ಮೂಲಕ ನಿರಾಸೆ ಮೂಡಿದರು. ಆದರೆ, ವೆಸ್ಟ್​ ಇಂಡೀಸ್​ ಬ್ಯಾಟರ್​ ಕೈಲ್​ ಮೇಯರ್ಸ್​ ತಮ್ಮ ಎಂದಿನ ಶೈಲಿಯಲ್ಲಿ ಅಬ್ಬರಿಸಿ 24 ಎಸೆತಗಳಲ್ಲಿ 4 ಸಿಕ್ಸರ್​, 7 ಫೋರ್​ಗಳ ಮೂಲಕ 54 ರನ್​ ಬಾರಿಸಿದರು. ಮೂರನೇ ಕ್ರಮಾಂಕದಕ್ಕೆ ಬಡ್ತಿ ಪಡೆದುಕೊಂಡ ಆಯುಷ್ ಬದೋನಿ ಕೂಡ 24 ಎಸೆತಗಳಲ್ಲಿ 4 ಫೋರ್ ಹಾಗೂ 4 ಸಿಕ್ಸರ್​ಗಳ ಮೂಲಕ 43 ರನ್​ ಗಳಿಸಿ ದೊಡ್ಡ ಮೊತ್ತ ಪೇರಿಸುವ ಆಟಕ್ಕೆ ಬೆಂಬಲ ಕೊಟ್ಟರು.

ಸಿಡಿದ ಸ್ಟೊಯ್ನಿಸ್​

ಮೇಯರ್ಸ್ ಔಟಾದ ಬಳಿಕ ಬ್ಯಾಟ್​ ಹಿಡಿದು ಬಂದ ಆಸ್ಟ್ರೇಲಿಯಾದ ಆಲ್​ರೌಂಡರ್​ ಮಾರ್ಕ್​ ಸ್ಟೊಯ್ನಿಸ್​ ಪಂಜಾಬ್​ ಬೌಲರ್​ಗಳನ್ನು ಬಿಡುವಿಲ್ಲದೆ ದಂಡಿಸಿದರು. 5 ಸಿಕ್ಸರ್​ ಹಾಗೂ 6 ಫೋರ್​ಗಳ ನೆರವಿನಿಂದ 40 ಎಸೆತಗಳಲ್ಲಿ 72 ರನ್ ಬಾರಿಸಿದರು. ಅವರು 30 ಎಸೆತಗಳಲ್ಲಿ ಅವರು ಅರ್ಧ ಶತಕ ಬಾರಿಸಿದರು.

ಬದೋನಿ ಔಟಾದ ಬಳಿಕ ಕ್ರೀಸ್​ಗೆ ಬಂದ ವಿಕೆಟ್​ ಕೀಪರ್ ನಿಕೋಲಸ್​ ಪೂರನ್​ ಕೂಡ ಅಬ್ಬರಿಸಿದರು. 7 ಫೋರ್​ ಒಂದು ಸಿಕ್ಸರ್​ ನೆರವಿನಿಂದ 19 ಎಸೆತಗಳಲ್ಲಿ 45 ರನ್ ಬಾರಿಸಿದ ಅವರು ತಂಡದ ಮೊತ್ತ 250ರ ಗಡಿ ದಾಟುವಂತೆ ನೋಡಿಕೊಂಡರು. ಬ್ಯಾಟಿಂಗ್​ನಲ್ಲಿ ಹಿಂಬಡ್ತಿ ಪಡೆದ ದೀಪಕ್ ಹೂಡ 6 ಎಸೆತಗಳಲ್ಲಿ 11 ರನ್ ಬಾರಿಸಿದರು.

ಭೇದಿಸಲಾಗದ ದೊಡ್ಡ ಗರಿ

ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಲು ಹೊರಟ ಪಂಜಾಬ್​ ತಂಡವೂ ಉತ್ತಮವಾಗಿ ಬ್ಯಾಟ್​ ಮಾಡಿತು. ಆದರೆ, ಓವರ್​ಗೆ 12ಕ್ಕಿಂತಲೂ ಅಧಿಕ ರನ್​ರೇಟ್​ ಬೇಕಾಗಿದ್ದ ಕಾರಣ ಗೆಲುವು ಸುಲಭವಾಗಿರಲಿಲ್ಲ. ಆರಂಭಿಕರಾದ ಪ್ರಭ್​ಸಿಮ್ರಾನ್​ ಸಿಂಗ್ (9) ಹಾಗೂ ಶಿಖರ್ ಧವನ್​ (1) ಔಟಾಗುವ ಮೂಲಕ ಹಿನ್ನಡೆಯೂ ಆಯಿತು. ಆದರೆ, ಅಥರ್ವ ಟೈಡೆ (66), ಸಿಕಂದರ್​ ರಾಜಾ (36), ಲಿಯಾಮ್​ ಲಿವಿಂಗ್​ಸ್ಟನ್​ (23), ಸ್ಯಾಮ್​ ಕರ್ರನ್​ (21), ಜಿತೇಶ್ ಶರ್ಮಾ (24) ಕೊಡುಗೆಗಳ ಮೂಲಕ ರನ್​ ಶಿಖರವನ್ನು ಪಂಜಾಬ್ ತಂಡ ಏರಲು ಯತ್ನಿಸಿತು. ಆದರೆ, ದೊಡ್ಡ ಮೊತ್ತವನ್ನು ದಾಟಲಾಗದೇ ಸೋತಿತು.

Exit mobile version