ಮೊಹಾಲಿ: ಬ್ಯಾಟರ್ಗಳ ಅಬ್ಬರದ ಪ್ರದರ್ಶನದ ನೆರವು ಪಡೆದ ಲಕ್ನೊ ಸೂಪರ್ ಜಯಂಟ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ 38ನೇ ಪಂದ್ಯದಲ್ಲಿ 255 ರನ್ಗಳ ಬೃಹತ್ ಮೊತ್ತ ಪೇರಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಪೇರಿಸಿದ ಎರಡನೇ ಗರಿಷ್ಠ ಮೊತ್ತವಾಗಿದೆ. 2013ರಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಗಳಿಸಿರುವ 263 ರನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಲಕ್ನೊ ತಂಡದ ಪರ ಮಾರ್ಕ್ ಸ್ಟೊಯ್ನಿಸ್ (72) ಹಾಗೂ ಕೈಲ್ ಮೇಯರ್ಸ್(54) ರನ್ ಬಾರಿಸಿದರೆ ಆಯುಷ್ ಬದೋನಿ (43) ಹಾಗೂ ನಿಕೋಲಸ್ ಪೂರನ್ (45) ಕೂಡ ದೊಡ್ಡ ಮೊತ್ತ ಪೇರಿಸಲು ನೆರವಾದರು.
ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆತಿಥೇಯ ಪಂಜಾಬ್ ತಂಡದ ನಾಯಕ ಶಿಖರ್ ಧವನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ತಮಗೆ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ಲಕ್ನೊ ಬ್ಯಾಟರ್ಗಳು ಮೈದಾನ ತುಂಬೆಲ್ಲ ಬೌಂಡರಿ ಸಿಕ್ಸರ್ಗಳ ಮಳೆ ಸುರಿಸಿದರು. ಇದರಿಂದಾಗಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 257 ರನ್ ಬಾರಿಸಿತು.
ಬ್ಯಾಟಿಂಗ್ ಆರಂಭಿಸಿದ ಲಕ್ನೊ ತಂಡದ ಪರ ನಾಯಕ ಕೆ. ಎಲ್ ರಾಹುಲ್ 12 ರನ್ಗಳಿಗೆ ಔಟಾಗುವ ಮೂಲಕ ನಿರಾಸೆ ಮೂಡಿದರು. ಆದರೆ, ವೆಸ್ಟ್ ಇಂಡೀಸ್ ಬ್ಯಾಟರ್ ಕೈಲ್ ಮೇಯರ್ಸ್ ತಮ್ಮ ಎಂದಿನ ಶೈಲಿಯಲ್ಲಿ ಅಬ್ಬರಿಸಿ 24 ಎಸೆತಗಳಲ್ಲಿ 4 ಸಿಕ್ಸರ್, 7 ಫೋರ್ಗಳ ಮೂಲಕ 54 ರನ್ ಬಾರಿಸಿದರು. ಮೂರನೇ ಕ್ರಮಾಂಕದಕ್ಕೆ ಬಡ್ತಿ ಪಡೆದುಕೊಂಡ ಆಯುಷ್ ಬದೋನಿ ಕೂಡ 24 ಎಸೆತಗಳಲ್ಲಿ 4 ಫೋರ್ ಹಾಗೂ 4 ಸಿಕ್ಸರ್ಗಳ ಮೂಲಕ 43 ರನ್ ಗಳಿಸಿ ದೊಡ್ಡ ಮೊತ್ತ ಪೇರಿಸುವ ಆಟಕ್ಕೆ ಬೆಂಬಲ ಕೊಟ್ಟರು.
ಸಿಡಿದ ಸ್ಟೊಯ್ನಿಸ್
ಮೇಯರ್ಸ್ ಔಟಾದ ಬಳಿಕ ಬ್ಯಾಟ್ ಹಿಡಿದು ಬಂದ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕ್ ಸ್ಟೊಯ್ನಿಸ್ ಪಂಜಾಬ್ ಬೌಲರ್ಗಳನ್ನು ಬಿಡುವಿಲ್ಲದೆ ದಂಡಿಸಿದರು. 5 ಸಿಕ್ಸರ್ ಹಾಗೂ 6 ಫೋರ್ಗಳ ನೆರವಿನಿಂದ 40 ಎಸೆತಗಳಲ್ಲಿ 72 ರನ್ ಬಾರಿಸಿದರು. ಅವರು 30 ಎಸೆತಗಳಲ್ಲಿ ಅವರು ಅರ್ಧ ಶತಕ ಬಾರಿಸಿದರು.
ಇದನ್ನೂ ಓದಿ : IPL 2023 : ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ 21 ರನ್ಗಳ ಸೋಲು ಕಂಡ ಆರ್ಸಿಬಿ
ಬದೋನಿ ಔಟಾದ ಬಳಿಕ ಕ್ರೀಸ್ಗೆ ಬಂದ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಕೂಡ ಅಬ್ಬರಿಸಿದರು. 7 ಫೋರ್ ಒಂದು ಸಿಕ್ಸರ್ ನೆರವಿನಿಂದ 19 ಎಸೆತಗಳಲ್ಲಿ 45 ರನ್ ಬಾರಿಸಿದ ಅವರು ತಂಡದ ಮೊತ್ತ 250ರ ಗಡಿ ದಾಟುವಂತೆ ನೋಡಿಕೊಂಡರು. ಬ್ಯಾಟಿಂಗ್ನಲ್ಲಿ ಹಿಂಬಡ್ತಿ ಪಡೆದ ದೀಪಕ್ ಹೂಡ 6 ಎಸೆತಗಳಲ್ಲಿ 11 ರನ್ ಬಾರಿಸಿದರು.