ನವ ದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(Women’s Boxing Championship) ಭಾರತದ ನಿಖತ್ ಜರೀನ್(Nikhat Zareen) ಅವರು ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಪಟ್ಟವನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಅವರು ಕಳೆದ ಆವೃತ್ತಿಯಲ್ಲೂ ಬಂಗಾರ ಗೆದ್ದಿದ್ದರು. ಈ ಮೂಲಕ ಸತತ ಎರಡು ಬಾರಿ ಚಾಂಪಿಯನ್ಪಟ್ಟ ಅಲಂಕರಿಸಿದ್ದಾರೆ. ಅವರಿಗೆ ಮಹೀಂದ್ರಾ&ಮಹೀಂದ್ರಾ ಕಂಪನಿಯ ಮುಖ್ಯಸ್ಥರಾದ ಆನಂದ್ ಮಹೀಂದ್ರಾ ಅವರ ಜನಪ್ರಿಯ ಎಸ್ಯುವಿ ಥಾರ್ (Mahindra Thar) ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅದರ ಜತೆ ಜರೀನ್ ಫೋಟೋ ತೆಗೆಸಿಕೊಂಡು ಸಂಭ್ರಮಪಟ್ಟಿದ್ದಾರೆ.
ಚಾಂಪಿಯನ್ಷಿಪ್ ಗೆದ್ದಿರುವ ನಿಖತ್ ಅವರು 82,27,985 ರೂಪಾಯಿ ಬಹುಮಾನ ಕೂಡ ಗೆದ್ದಿದ್ದಾರೆ. ಬಹುಮಾನ ಸಿಕ್ಕ ತಕ್ಷಣ ಅವರು ಆ ಹಣದಲ್ಲಿ ಮರ್ಸಿಡಿಸ್ ಬೆಂಜ್ ಕಾರೊಂದನ್ನು ಖರೀದಿ ಮಾಡುವ ಯೋಜನೆ ರೂಪಿಸಿಕೊಂಡಿದ್ದರಂತೆ. ಆದರೆ, ಮಹೀಂದ್ರಾ ಥಾರ್ ಸಿಕ್ಕಿದ ತಕ್ಷಣ ಅವರು ಮರ್ಸಿಡಿಸ್ ಖರೀದಿ ಮಾಡುವ ತಮ್ಮ ಯೋಜನೆಯನ್ನು ಬದಲಿಸಿದ್ದಾರೆ. ಸಿಕ್ಕಿರುವ ಹಣದಲ್ಲಿ ತಮ್ಮ ಪೋಷಕರನ್ನು ಉಮ್ರಾ ಧಾರ್ಮಿಕ ಯಾತ್ರೆಗೆ ಕಳುಹಿಸಲು ಮುಂದಾಗಿದ್ದಾರೆ.
ಮಹೀಂದ್ರಾ ಕಂಪನಿಯು ಕ್ರೀಡಾ ಸಾಧಕರಿಗೆ ತನ್ನ ಕಾರುಗಳನ್ನು ಉಡುಗೊರೆಯಾಗಿ ನೀಡುವುದು ಇದೇ ಮೊದಲಲ್ಲ. ಈ ಹಿಂದೆ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೂ ಥಾರ್ ನೀಡಿದ್ದರು. ಎಕ್ಸ್ಯುವಿ 700 ಕಾರನ್ನು ಕೂಡ ಪ್ಯಾರಾ ಜಾವೆಲಿನ್ ಎಸೆತಗಾರ ಸುಮಿತ್ ಅಂಟಿಲ್ಗೆ ಕೊಟ್ಟಿದ್ದರು.
ಮಿಂಚಿದ ಜರೀನ್
ಭಾನುವಾರ ಇಲ್ಲಿ ನಡೆದ 50 ಕೆಜಿ ವಿಭಾಗದ ಫೈನಲ್ ಕಾದಾಟದಲ್ಲಿ ನಿಖತ್ ಜರೀನ್ ಅವರು ವಿಯೆಟ್ನಾಂನ ಗುಯೆನ್ ಥಿ ಟಾಮ್(Nguyen Thi Tam) ಸವಾಲನ್ನು ಮಟ್ಟಿನಿಲ್ಲುವಲ್ಲಿ ಯಶಸ್ಸು ಸಾಧಿಸಿದರು. ಬಲಿಷ್ಠ ಪಂಚ್ಗಳ ಮೂಲಕ ಮೆರೆದಾಡಿದ ನಿಖತ್ ಜರೀನ್ 5-0 ಅಂತರದ ಗೆಲುವು ಸಾಧಿಸಿದರು. ಅವರ ಸತತ ಪಂಚ್ಗಳಿಗೆ ಬೆದರಿದ ಎದುರಾಳಿ ಗುಯೆನ್ ಥಿ ಟಾಮ್ ಒಂದೂ ಬೌಟ್ನಲ್ಲಿಯೂ ಮೇಲುಗೈ ಸಾಧಿಸುವಲ್ಲಿ ಯಶಸ್ಸು ಕಾಣಲಿಲ್ಲ.
ಇದನ್ನೂ ಓದಿ Women’s Boxing: ಚಿನ್ನಕ್ಕೆ ಸಿಹಿ ಮುತ್ತು ನೀಡಿದ ಸ್ವೀಟಿ ಬೂರಾ
ಒಟ್ಟಾರೆ ಭಾರತಕ್ಕೆ ಈ ಟೂರ್ನಿಯಲ್ಲಿ ಸಿಕ್ಕ ಮೂರನೇ ಚಿನ್ನದ ಪದಕ ಇದಾಗಿದೆ. ಶನಿವಾರ ನಡೆದ 48 ಕೆಜಿ ವಿಭಾಗದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ನೀತು ಗಂಗಾಸ್ ಅವರು ಮಂಗೋಲಿಯಾದ ಲುತ್ಸಾಯಿಖಾನ್ ಅಲ್ಟಂಟ್‌ಸೆಟ್‌ಸೆಗ್ ವಿರುದ್ಧ ಚಿನ್ನ ಗೆದ್ದು ಭಾರತಕ್ಕೆ ಮೊದಲ ಪದಕದ ಖಾತೆ ತೆರೆದಿದ್ದರು. ಇದರ ಬೆನ್ನಲ್ಲೇ 81 ಕೆಜಿ ವಿಭಾಗದಲ್ಲಿ ಸ್ವೀಟಿ ಬೂರಾ ಚೀನಾದ ವಾಂಗ್ ಲೀನಾ ಅವರನ್ನು ಮಣಿಸಿದ್ದರು.