ಕೌಲಾಲಂಪುರ: ಭಾರತದ ಸ್ಟಾರ್ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಎಚ್.ಎಸ್. ಪ್ರಣಯ್ ಅವರು ಇಲ್ಲಿ ನಡೆಯುತ್ತಿರುವ ಮಲೇಷ್ಯ ಮಾಸ್ಟರ್ ಸೂಪರ್ 500 ಬ್ಯಾಡ್ಮಿಂಟನ್(Malaysia Masters) ಕೂಟದಲ್ಲಿ ಅಧಿಕಾರಯುತ ಗೆಲುವು ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ ಕಿದಂಬಿ ಶ್ರೀಕಾಂತ್ ಸೋತು ನಿರಾಸೆ ಮೂಡಿಸಿದರು.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅವಳಿ ಒಲಿಂಪಿಕ್ಸ್ ಪದಕ ವಿಕೇತೆ ಪಿ.ವಿ ಸಿಂಧು ಅವರು ನೆರೆಯ ದೇಶವಾದ ಚೀನಾದ ಯಿ ಮ್ಯಾನ್ ಝಾಂಗ್ ಅವರನ್ನು 21-16, 13-21, 22-20 ಅಂತರದಿಂದ ಹಿಮ್ಮಟಿಸಿದರು. ಒಂದು ಗಂಟೆ 14 ನಿಮಿಷ ನಡೆದ ಈ ಜಿದ್ದಾಜಿದ್ದಿನ ಹೋರಾಟದಲ್ಲಿ ಆರನೇ ಶ್ರೇಯಾಂಕದ ಸಿಂಧು ತೀವ್ರ ಹೋರಾಟ ನಡೆಸಿ ಗೆಲುವು ಸಾಧಿಸಿದರು. ಆರಂಭಿಕ ಗೇಮ್ ಗೆದ್ದು ಮುನ್ನಡೆ ಸಾಧಿಸಿದರೂ ದ್ವಿತೀಯ ಗೇಮ್‌ನಲ್ಲಿ ತಿರುಗಿಬಿದ್ದ ಮ್ಯಾನ್ ಝಾಂಗ್ ಗೆಲುವು ದಾಖಲಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಅಂತಿಮ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಕೋರ್ಟ್ಗಿಳಿದ ಸಿಂಧು ಬಲಿಷ್ಠ ಹೊಡೆತಗಳ ಮೂಲಕ ಎದುರಾಳಿಗೆ ಆಘಾತವಿಕ್ಕಿದರು.
ಗುರುವಾರ ನಡೆದಿದ್ದ ಫ್ರೀ ಕಾರ್ಟರ್ ಫೈನಲ್ನಲ್ಲಿ ಸಿಂಧು ಅವರು ಜಪಾನಿನ ಆಯಾ ಒಹೋರಿ ಅವರನ್ನು 21-16, 21-11 ಗೇಮ್‌ಗಳಿಂದ ಉರುಳಿಸಿದ್ದರು. ಈ ಮೂಲಕ ಒಹೋರಿ ವಿರುದ್ಧ ಸಿಂಧು 13ನೇ ಗೆಲುವು ದಾಖಲಿಸಿದ್ದರು. ಸದ್ಯ ಅವರ ಪ್ರದರ್ಶನವನ್ನು ಗಮನಿಸುವಾಗ ಟೂರ್ನಿಯಲ್ಲಿ ಪದಕ ಗೆಲ್ಲುವ ಭರವಸೆ ಮೂಡಿದೆ.
ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶ ಕಂಡುಬಂದಿದೆ. ಎಚ್.ಎಸ್. ಪ್ರಣಯ್ ಅವರು ಗೆದ್ದು ಮುಂದಿನ ಹಂತಕ್ಕೆ ತೇರ್ಗಡೆಯಾದರೆ, ಕಿದಂಬಿ ಶ್ರೀಕಾಂತ್ ಅವರು ಸೋತು ಟೂರ್ನಿಯಿಂದ ಹೊರಬಿದ್ದರು.
ವಿಶ್ವದ 9ನೇ ರ್‍ಯಾಂಕಿನ ಪ್ರಣಯ್ ದ್ವಿತೀಯ ಗೇಮ್‌ನಲ್ಲಿ ಸೋತಿದ್ದರೂ ಅಮೋಘವಾಗಿ ಆಡಿ ಜಪಾನಿನ ಬಲಿಷ್ಠ ಆಟಗಾರ ಕೆಂಟ ನಿಶಿಮೊಟೊಗೆ ಆಘಾತವಿಕ್ಕಿದರು. ಮೂರು ಗೇಮ್ಗಳ ಈ ಮ್ಯಾರಥಾನ್ ಫೈಪೋಟಿಯಲ್ಲಿ ಭಾರತದ ಪ್ರಣಯ್ ಅಂತಿಮವಾಗಿ ಪ್ರಾಬಲ್ಯ ಮರೆದರು. ಗೆಲುವಿನ ಅಂತರದ 25-23,18-21,21-13. ಉಭಯ ಆಟಗಾರರ ಈ ಹೋರಾಟ 91 ನಿಮಿಷಗಳ ವರೆಗೆ ಸಾಗಿತ್ತು. ಶಿಮೊಟೊ ಅವರು 2022ರ ಜಪಾನ್ ಓಪನ್ ಮತ್ತು ಈ ವರ್ಷದ ಸ್ಪೇಯ್ನ ಮಾಸ್ಟರ್ ಕೂಟದ ಪ್ರಶಸ್ತಿ ಜಯಿಸಿದ ಸಾಧಕರಾಗಿದ್ದರು. ಕಳೆದ ಪಂದ್ಯದಲ್ಲಿ ಪ್ರಣಯ್ ಚೀನಾದ ಶಿ ಫೆಂಗ್ ಲಿ ಎದುರು 13-21, 21-16, 21-11 ಪ್ರಯಾಸದ ಗೆಲುವು ಕಂಡಿದ್ದರು.
ಇದನ್ನೂ ಓದಿ Malaysia Masters: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಿಂಧು, ಶ್ರೀಕಾಂತ್, ಪ್ರಣಯ್
ದಿನದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ ಅವರು ಇಂಡೋನೇಶ್ಯದ ಅರ್ಹತಾ ಆಟಗಾರ ಕ್ರಿಸ್ಟಿಯನ್ ಅದಿನಾಟ ವಿರುದ್ಧ 21-16, 16-21, 11-21 ಅಂತರದ ಆಘಾತಕಾರಿ ಸೋಲು ಕಂಡರು. ಮೊದಲ ಗೇಮ್‌ನಲ್ಲಿ ಮುನ್ನಡೆ ಸಾಧಿಸಿದರೂ ಉಳಿದ ಎರಡು ಗೇಲ್ಗಳಲ್ಲಿ ಅತ್ಯಂತ ನಿರಾಶದಾಯಕ ಆಟವಾಡುವ ಮೂಲಕ ಪರಾಭವಗೊಂಡರು.