ಚೆನ್ನೈ: ಪ್ಯಾರಿಸ್ ಒಲಿಂಪಿಕ್ಸ್ ಶೂಟಿಂಗ್ನಲ್ಲಿ ಅವಳಿ ಪದಕ ಗೆದ್ದ ಮನು ಭಾಕರ್ ಅವರು ತಮ್ಮ ನೆಚ್ಚಿನ ಭರತನಾಟ್ಯ(Manu Bhaker Bharatnatyam) ಕಲಿಕೆಗಾಗಿ ತಮಿಳುನಾಡಿನಲ್ಲಿದ್ದಾರೆ. ಇಲ್ಲಿನ ಸ್ಥಳೀಯ ಶಾಲಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಮನು ಭಾಕರ್(Manu Bhaker Dance) ವಿದ್ಯಾರ್ಥಿಗಳ ಜತೆಗೆ ವೇದಿಕೆಯಲ್ಲಿ ನೃತ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್(viral video) ಆಗಿದೆ.
ತಮಿಳುನಾಡಿನ ವೇಲಮ್ಮಾಳ್ ನೆಕ್ಸಸ್ ಗ್ರೂಪ್ನ ಶಾಲೆಯಲ್ಲಿ ನಡೆದ ಕ್ರೀಡಾ ಸ್ಕಾಲರ್‌ಷಿಪ್ ವಿತರಣಾ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಮನು ಭಾಕರ್ ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಕುರಿತಾದ ಸಂವಾದ ನಡೆಸಿದರು. ಬಳಿಕ ವಿದ್ಯಾರ್ಥಿಗಳ ಜತೆಗೆ ಕತ್ರಿನಾ ಕೈಫ್ ಹೆಜ್ಜೆ ಹಾಕಿದ್ದ ಕಾಲಾ ಚಷ್ಮಾ(‘Kala Chashma’ Song) ಹಿಂದಿ ಹಾಡೊಂದಕ್ಕೆ ನೃತ್ಯ ಮಾಡಿದರು.
ತಮಿಳುನಾಡಿನ ಶಿಕ್ಷಕರೊಬ್ಬರ ಸಹಾಯದಿಂದ ಆನ್ಲೈನ್ನಲ್ಲಿಯೇ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದ 22 ವರ್ಷದ ಮನು ಭಾಕರ್ ಇದೀಗ ಶೂಟಿಂಗ್ನಿಂದ ಮೂರು ತಿಂಗಳ ವಿಶ್ರಾಂತಿ ಪಡೆದು ನೇರವಾಗಿ ತರಗತಿಗೆ ಹಾಜರಾಗಿ ನೃತ್ಯ ಕಲಿಯಲಿದ್ದಾರೆ. ಜತೆಗೆ ವಯೋಲಿನ್ ಕಲಿಕೆ ಕೂಡ ಮಾಡಲಿದ್ದಾರೆ. ಇದಾದ ಬಳಿಕ ಕುದುರೆ ಸವಾರಿ ಮಾರ್ಷಿಯಲ್ ಆರ್ಟ್ಸ್ ಮತ್ತು ಸ್ಕೇಟಿಂಗ್ ಅಭ್ಯಾಸ ಕೂಡ ಮಾಡಲಿದ್ದೇನೆ ಎಂದು ಮನು ಅವರು ಹೇಳಿದ್ದರು.
ಪ್ಯಾರಿಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್ ಶೂಟಿಂಗ್ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು.
ಇದನ್ನೂ ಓದಿ Manu Bhaker: 3 ತಿಂಗಳ ರಜೆಯಲ್ಲಿ ಭರತನಾಟ್ಯ, ಕುದುರೆ ಸವಾರಿ, ಸ್ಕೇಟಿಂಗ್ ಕಲಿಯಲಿದ್ದಾರೆ ಮನು ಭಾಕರ್
ಭಾಕರ್(Manu Bhaker) ಅವರ ಜಾಹೀರಾತು ಮೌಲ್ಯದಲ್ಲಿ ಇದೀಗ ಭಾರೀ ಏರಿಕೆ ಕಂಡಿದೆ. ಮನು ಅವರ ಬ್ರ್ಯಾಂಡ್ ಮೌಲ್ಯ ಈಗ 1.5 ರೂ. ಆಗಿದೆ. ಅವರು ಪ್ರತಿ ಡಿಜಿಟಲ್ ಜಾಹೀರಾತಿಗೂ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್ ಕೇರ್, ನ್ಯೂಟ್ರೀಷಿಯನ್ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ 40 ಕಂಪನಿಗಳು(40 brands chasing Manu Bhaker) ಮನು ಅವರನ್ನು ಸಂಪರ್ಕಿಸಿದ್ದವು ಎಂದು ವರದಿಯಾಗಿತ್ತು.
ಭಾರತ ತಂಡದ ಸ್ಟಾರ್ ಕ್ರಿಕೆಟಿಗರು ಜಾಹೀರಾತು ಒಪ್ಪಂದಗಳಿಗೆ ವಾರ್ಷಿಕ 3 ರಿಂದ 6 ಕೋಟಿ ರೂ. ಪಡೆಯುತ್ತಾರೆ. ಬ್ಯಾಡ್ಮಿಂಟನ್ ಆಟಗಾರ್ತಿ ಪಿ,ವಿ ಸಿಂಧು 2022ರಲ್ಲಿ 2.21 ಕೋಟಿ ರೂ. ಮೊತ್ತದ ಒಪ್ಪಂದ ಪಡೆದಿದ್ದೇ ಭಾರತದಲ್ಲಿ ಕ್ರಿಕೆಟಿಗರ ಹೊರತಾಗಿ ಇತರ ಕ್ರೀಡಾಪಟುಗಳು ಪಡೆದ ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಒಲಿಂಪಿಕ್ಸ್ ಪದಕ ಗೆಲ್ಲುವ ಮೊದಲು ಮನು ಪ್ರತಿ ಒಪ್ಪಂದವನ್ನು 20-25 ಲಕ್ಷ ರೂ.ಗೆ ಮಾಡಿಕೊಳ್ಳುತ್ತಿದ್ದರು. ಸದ್ಯ ಮನು ಪಾಮ್ಯಾಕ್ಸ್ ಆಕ್ಟಿವ್ವೇರ್ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ.