Site icon Vistara News

ವಿಸ್ತಾರ ಸಂಪಾದಕೀಯ: ಏಷ್ಯನ್ ಗೇಮ್ಸ್ ನಲ್ಲಿ ಐತಿಹಾಸಿಕ ಪದಕ ಸಾಧನೆ ಇನ್ನಷ್ಟು ಸಾಧನೆಗೆ ಸ್ಫೂರ್ತಿಯಾಗಲಿ

Vistara Editorial

ಚೀನಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಐತಿಹಾಸಿಕ ದಾಖಲೆ ಬರೆದಿದೆ. ಚೀನಾದಲ್ಲಿ ನಡೆದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ ಕ್ರೀಡಾಕೂಟಕ್ಕೆ ಶನಿವಾರ ತೆರೆ ಬಿದ್ದಿದ್ದು, 655 ಮಂದಿ ಕ್ರೀಡಾಳುಗಳನ್ನು ಹೊಂದಿದ್ದ ಭಾರತದ ತಂಡ ದಾಖಲೆಯ 107 ಪದಕಗಳೊಂದಿಗೆ ಹಿಂದಿರುಗಿದೆ. ಈ ಗಮನಾರ್ಹ ಸಾಧನೆಯು ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸಿದೆ. 2023ರ ಹ್ಯಾಂಗ್‌ಝೌ ಕ್ರೀಡಾಕೂಟಕ್ಕೆ ತೆರೆ ಬೀಳುತ್ತಿದ್ದಂತೆ ಭಾರತವು 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳೊಂದಿಗೆ ಎತ್ತರದ ಸ್ಥಾನದಲ್ಲಿ ಪ್ರತಿಷ್ಠಾಪಿತವಾಗಿದೆ. ಇದೊಂದು ಸ್ಮರಣೀಯ ಸಾಧನೆ. ಈ ಹಿಂದಿನ, ಜಕಾರ್ತಾದಲ್ಲಿ ನಡೆದ 2018ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 16 ಚಿನ್ನದ ಪದಕಗಳೊಂದಿಗೆ ಒಟ್ಟು 70 ಪದಕಗಳನ್ನು ಗೆದ್ದಿತ್ತು. ಏಷ್ಯನ್‌ ಗೇಮ್ಸ್‌ನಲ್ಲಿ ಇದುವರೆಗೆ ಅದೇ ಭಾರತದ ಉತ್ತಮ ಸಾಧನೆಯಾಗಿತ್ತು. ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಎಂಬ ಮೂರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವು 100ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವುದು ಇದು ಎರಡನೇ ಬಾರಿಗೆ. 2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 101 ಪದಕಗಳನ್ನು ಗೆದ್ದಿತ್ತು.

ಆದರೆ 2023ರ ಹ್ಯಾಂಗ್‌ಝೌ ಕ್ರೀಡಾಕೂಟವು ಪ್ರಮಾಣ ಮತ್ತು ಗುಣಮಟ್ಟ ಎರಡರಲ್ಲೂ ಅದನ್ನು ಮೀರಿಸಿದೆ. ಸ್ಪರ್ಧೆಯ ಕೊನೆಯ ದಿನವಾದ ಶನಿವಾರ, ಭಾರತ ಒಟ್ಟು 12 ಪದಕಗಳನ್ನು ಪಡೆಯುವ ಮೂಲಕ ಹೊಸ ಎತ್ತರಕ್ಕೆ ಏರಿತು. ಇವುಗಳಲ್ಲಿ 6 ಚಿನ್ನದ ಪದಕಗಳು, 4 ಬೆಳ್ಳಿ ಪದಕಗಳು ಮತ್ತು 2 ಕಂಚಿನ ಪದಕಗಳು ಸೇರಿವೆ. ಈ ಅಸಾಮಾನ್ಯ ಯಶಸ್ಸು ಭಾರತೀಯ ಅಥ್ಲೀಟ್‌ಗಳು, ತರಬೇತುದಾರರು ಮತ್ತು ಅವರ ಪ್ರತಿಭೆಯನ್ನು ಪೋಷಿಸುವಲ್ಲಿ ಸಹಕಾರಿಯಾಗಿರುವ ಸಂಪೂರ್ಣ ಆಡಳಿತ ವ್ಯವಸ್ಥೆ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಇಷ್ಟು ಪದಕಗಳ ಬೇಟೆಯಿಂದಾಗಿ ಮುಂಬರುವ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಸ್ಪರ್ಧಾ ಸ್ಥಾನಮಾನ ಪಡೆಯಲು ಭಾರತಕ್ಕೆ ಅವಕಾಶಗಳು ಒದಗಿವೆ. ಒಟ್ಟು 74 ಒಲಿಂಪಿಕ್ ಕೋಟಾಗಳನ್ನು ವಿವಿಧ ಕ್ರೀಡೆಗಳಲ್ಲಿ ಭಾರತ ಪಡೆದಿದೆ. ಬಿಲ್ಲುಗಾರಿಕೆಯಲ್ಲಿ 6, ಕಲಾತ್ಮಕ ಈಜಿನಲ್ಲಿ 10, ಬಾಕ್ಸಿಂಗ್‌ನಲ್ಲಿ 34, ಬ್ರೇಕಿಂಗ್‌ನಲ್ಲಿ 2, ಹಾಕಿಯಲ್ಲಿ 2, ಆಧುನಿಕ ಪೆಂಟಾಥ್ಲಾನ್‌ನಲ್ಲಿ 10, ಸೈಲಿಂಗ್‌ನಲ್ಲಿ 6, ಟೆನ್ನಿಸ್‌ನಲ್ಲಿ 2 ಮತ್ತು ವಾಟರ್ ಪೋಲೋದಲ್ಲಿ 2.

ಇದನ್ನೂ ಓದಿ : Asian Games : ಸಾರ್ವಕಾಲಿಕ ದಾಖಲೆಯ 107 ಪದಕಗಳೊಂದಿಗೆ ಏಷ್ಯನ್ ಗೇಮ್ಸ್ ಅಭಿಯಾನ ಮುಗಿಸಿದ ಭಾರತ

ಈ ಐತಿಹಾಸಿಕ ಸಾಧನೆಯಲ್ಲಿ ನಾವು ಅನೇಕ ಪ್ರತಿಭಾನ್ವಿತ ಕ್ರೀಡಾಳುಗಳನ್ನು ನೆನೆಯಬೇಕಾಗಬಹುದು. ಅತ್ಯಂತ ರೋಚಕವಾಗಿ ನಡೆದ ಕಬಡ್ಡಿ ಪಂದ್ಯಗಳಲ್ಲಿ ಭಾರತದ ಮಹಿಳಾ ತಂಡ ಚಿನ್ನ ತಂದಿದೆ. ಭಾರತದ ಶೂಟಿಂಗ್‌ ಹಾಗೂ ಬಿಲ್ಗಾರಿಕೆಯಂತೂ ಈ ಬಾರಿ ಅಸೀಮ ಮಟ್ಟ ಮುಟ್ಟಿದ್ದು, ನಮ್ಮ ಕ್ರೀಡಾಳುಗಳು ಕ್ರಮವಾಗಿ 7 ಹಾಗೂ 5 ಚಿನ್ನಗಳೊಂದಿಗೆ ಹಿಂದಿರುಗಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ನಮ್ಮ ಸ್ಪರ್ಧಿಗಳು ಪರಿಶ್ರಮಪೂರ್ವಕ 6 ಚಿನ್ನದ ಪದಕಗಳನ್ನು ಕೊರಳಿಗೇರಿಸಿ ಬೀಗಿದ್ದಾರೆ. ಕಬಡ್ಡಿ, ಕ್ರಿಕೆಟ್‌, ಸ್ಕ್ವಾಶ್‌ನಲ್ಲಿ ತಲಾ ಎರಡು, ಬ್ಯಾಡ್ಮಿಂಟನ್‌, ಈಕ್ಷೆಸ್ಟ್ರಿಯನ್‌, ಟೆನಿಸ್‌, ಹಾಕಿಯಲ್ಲಿ ಒಂದೊಂದು ಚಿನ್ನದ ಪದಕಗಳು ದೇಶದ ಪಾಲಾಗಿವೆ. ಇದರಂತೆಯೇ ಬೆಳ್ಳಿ ಹಾಗೂ ಕಂಚಿನ ಪದಕಗಳು ಕೂಡ ದೊರೆತಿವೆ. ಭಾರತದ ಕ್ರೀಡಾಳುಗಳ ಕ್ರೀಡಾಸ್ಫೂರ್ತಿ ಮೆರೆದಿದೆ.

ಕ್ರೀಡೆ ಎಂಬುದು ನಮ್ಮ ಈ ಕ್ಷಣದ ಪ್ರತಿಭೆ, ಪರಿಶ್ರಮ, ದೃಢತೆ, ತಂಡಸ್ಫೂರ್ತಿ ಎಲ್ಲವನ್ನೂ ಲೋಕದ ಕಣ್ಣಿನ ಮುಂದೆ ತೆರೆದಿಡುವ ಸಂಗತಿ. ಒಂದು ರಾಷ್ಟ್ರ ಹೇಗಿರುತ್ತದೋ ಅದರ ಕ್ರೀಡಾ ಸಾಧನೆಯೂ ಹಾಗೇ ಇರುತ್ತದೆ. ಪಾಕಿಸ್ತಾನದಂಥ ಛಿದ್ರವಾಗಿ ಹೋದ ದೇಶಗಳಿಂದ ಅತ್ಯುತ್ತಮ ಕ್ರೀಡಾ ಸಾಧನೆ ಯಾಕೆ ಮಾಡಲಾಗುವುದಿಲ್ಲ ಎಂದರೆ, ಅಲ್ಲಿ ಅದಕ್ಕೆ ಪೂರಕವಾದ ವಾತಾವರಣವೂ ತರಬೇತಿಯೂ ಇರುವುದಿಲ್ಲ. ಯಾವ ದೇಶ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದೆಯೋ ಅದು ತನ್ನ ಪ್ರಜೆಗಳನ್ನು ಸಂತೋಷವಾಗಿಟ್ಟಿದೆ, ಯುವಕರನ್ನು ಪ್ರೋತ್ಸಾಹಿಸುತ್ತಿದೆ, ಅಲ್ಲಿ ಹೋರಾಟದ ಕೆಚ್ಚು ಬಲವಾಗಿ ಇದೆ ಎಂದು ಅರ್ಥ ಮಾಡಬಹುದು. ಭಾರತವೂ ‌ಅಂಥ ದೇಶ ಎಂಬುದನ್ನು ಇದೀಗ ನಮ್ಮ ಸಾಧನೆಯೇ ಮನದಟ್ಟು ಮಾಡುತ್ತಿದೆ. ಇನ್ನು ನಾವು ಧ್ಯಾನ್‌ಚಂದ್‌ ಮುಂತಾದವರ ಹಾಕಿಯ ಕಾಲ, ಕಪಿಲ್‌ದೇವ್‌ ಅವರ ಕ್ರಿಕೆಟ್‌ ಕಾಲಗಳೇ ನಮ್ಮ ಸುವರ್ಣಯುಗ ಎಂದು ಕೊರಗುತ್ತಾ ಕೂರಬೇಕಿಲ್ಲ. ಈ ಕ್ಷಣವೇ ನಮ್ಮ ಕ್ರೀಡೆಯ ಸುವರ್ಣಯುಗ ಎನ್ನಲು ಅಡ್ಡಿಯಿಲ್ಲ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಇರಾನ್ ಹೋರಾಟಗಾರ್ತಿಗೆ ನೊಬೆಲ್ ಶಾಂತಿ ಪುರಸ್ಕಾರ ಸೂಕ್ತ ಆಯ್ಕೆ

ಕೆಲವೇ ವರ್ಷಗಳ ಹಿಂದೆ ಈ ಸನ್ನಿವೇಶ ಇರಲಿಲ್ಲ. ಇಡೀ ದೇಶದ ಫೋಕಸ್‌ ಕ್ರಿಕೆಟ್‌ನ ಕಡೆಗಿತ್ತು. ಹೆಚ್ಚು ಹಣ, ಜನಪ್ರಿಯತೆ, ಯುವಕರ ಗಮನ ಎಲ್ಲವೂ ಕ್ರಿಕೆಟ್‌ನ ಕಡೆಗಿತ್ತು. ಸರ್ಕಾರದ ಒಲವೂ ಹಾಗೇ ಇತ್ತು. ನಿಧಾನವಾಗಿ ಈ ಚಿತ್ರಣ ಬದಲಾಯಿತು. ಇದಕ್ಕೆ ಪ್ರತಿಭಾವಂತ ಕ್ರೀಡಾಳುಗಳು ಮುಖ್ಯ ಕಾರಣ. ನಮ್ಮ ಬ್ಯಾಡ್ಮಿಂಟನ್‌- ಟೆನಿಸ್ ಚಾಂಪಿಯನ್‌ಗಳು, ಕುಸ್ತಿಪಟುಗಳು, ಹಾಕಿ ವೀರರು, ಬಿಲ್ಗಾರಿಕೆ ಚತುರರು, ಅಥ್ಲೀಟ್‌ಗಳು, ಓಟಗಾರರು ಚಿನ್ನ ಬೆಳ್ಳಿಯ ಪದಕಗಳನ್ನು ಗೆದ್ದು ತರತೊಡಗಿದಂತೆ ಯುವಜನತೆಯ ಗಮನ ಅತ್ತ ಹರಿಯಿತು. ತರಬೇತಿದಾರರು, ಕೋಚ್‌ಗಳು ಹೆಚ್ಚಿದರು. ತರಬೇತಿ ಕೇಂದ್ರಗಳು ಹುಟ್ಟಿಕೊಂಡವು. ಸರ್ಕಾರ ಕೂಡ ಗ್ರಾಮೀಣ ಕ್ರೀಡಾಳುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸ್ಕೀಮ್‌ಗಳನ್ನು ತರತೊಡಗಿತು. ಆಳುವವರು ಮುನ್ನೋಟ ಉಳ್ಳವರಾದರೆ ಯಾವುದೇ ಕ್ಷೇತ್ರ ಪ್ರವರ್ಧಮಾನ ಸಾಧಿಸುತ್ತದೆ. ಒಲಿಂಪಿಕ್ಸ್‌ನಲ್ಲಿ ನಮ್ಮವರು ಸಾಧನೆ ಮಾಡಿದರು. ಹೀಗೆ ಬೆಳೆಯುತ್ತ ಹೋದ ನಮ್ಮ ಕ್ರೀಡಾ ಸಾಧನೆ ಇಂದು ಈ ಮಟ್ಟ ಮುಟ್ಟಿದೆ. ಇದಕ್ಕಾಗಿ ಹೆಮ್ಮೆ ಪಡೋಣ. ಇದರ ಜತೆಗೇ, ನಾವು ಇನ್ನಷ್ಟು ಪ್ರೋತ್ಸಾಹ ನೀಡಬೇಕಾದ ಕ್ರೀಡೆಗಳಿವೆ. ಬಿಲ್ಗಾರಿಕೆ, ಶೂಟಿಂಗ್‌, ಅಥ್ಲೆಟಿಕ್ಸ್ ಮುಂತಾದವುಗಳು ನಮ್ಮಲ್ಲಿ ಇನ್ನೂ ಸಾಕಷ್ಟು ಬೆಳೆದಿಲ್ಲ. ಅವುಗಳಿಗೆ ಮೂಲಸೌಕರ್ಯಗಳಿಲ್ಲ. ಇದನ್ನು ಒದಗಿಸುವ ಕೆಲಸ ಆಗಬೇಕು. ಉತ್ಸಾಹದಿಂದ ಮುಂಬರುವ ಕ್ರೀಡಾಳುಗಳಿಗೆ ನೆರವು ಒದಗಿಸುವ ವ್ಯವಸ್ಥೆ ಇರಬೇಕು. ಆಗ ನಾವು ಇನ್ನಷ್ಟು ಪದಕಗಳನ್ನು ಬೇಟೆಯಾಡುವ ದೃಶ್ಯವನ್ನು ಕಾಣಬಹುದು.

Exit mobile version