Site icon Vistara News

FIFA World Cup | ಆಹಾ! ಎಂಥ ‘ಚೆಂದಾ’ಟ!! ಮೆಸ್ಸಿ ಮ್ಯಾಜಿಕ್, ಅರ್ಜೆಂಟೀನಾಗೆ ವಿಶ್ವಕಪ್ ಕಿರೀಟ

FIFA WORLD CUP

ಸುಖೇಶ ಪಡಿಬಾಗಿಲು ಬೆಂಗಳೂರು

ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ವಿಶ್ವ ಕಪ್​ಗಾಗಿ ಕತಾರ್​ಗೆ ಕಾಲಿಟ್ಟಾಗ ಆ ತಂಡ ಆಟಗಾರರ ಮೊಗದಲ್ಲಿ ಅತೀವ ವಿಶ್ವಾಸವಿತ್ತು. ಅದು ಹೆಚ್ಚು ದಿನ ಇರಲಿಲ್ಲ. ಸಿ ಗುಂಪಿನಲ್ಲಿದ್ದ ಮೆಸ್ಸಿ ಪಡೆ ಲೀಗ್​ ಹಂತದ ಮೊದಲೇ ಪಂದ್ಯದಲ್ಲೇ ದುರ್ಬಲ ಸೌದಿ ಅರೇಬಿಯಾ ವಿರುದ್ಧ 1-2 ಗೋಲ್​ಗಳ ಅಂತರದಿಂದ ಮಣಿಯಿತು. ಆರಂಭದಲ್ಲೇ ಎದುರಾದ ಆಘಾತಕ್ಕೆ ಫಿಫಾ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ತಂಡದ ಸದಸ್ಯರು ತತ್ತರಿಸಿದರು. ಫುಟ್ಬಾಲ್​ ಕಾರಿಡಾರ್​ನಲ್ಲಿ ಈ ಸೋಲಿನ ಬಗ್ಗೆ ಜೋರು ಚರ್ಚೆ ನಡೆಯಿತು. ನಾಲ್ಕನೇ ವಿಶ್ವ ಕಪ್​ನಲ್ಲಿ ಪಾಲ್ಗೊಳ್ಳುತ್ತಿರುವ ವಿಶ್ವದ ಸ್ಟಾರ್​ ಆಟಗಾರನಿಗೆ ಈ ಬಾರಿಯೂ ನಿರಾಸೆ ಖಚಿತ ಎಂದು ಹೇಳಿದರು ಮಂದಿ. ಇದೀಗ ನಡೆದದ್ದೇ ಬೇರೆ. ಮೊದಲ ಪಂದ್ಯದಲ್ಲಿ ಸೋತು ಅಸಂಖ್ಯಾತ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಅರ್ಜೆಂಟೀನಾ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಕೋಟ್ಯಂತರ ಮಂದಿ ಆರಾಧಿಸುವ ಲಿಯೋನೆಲ್​ ಮೆಸ್ಸಿ ವಿಶ್ವ ಕಪ್​ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದು ತಮ್ಮ ಕೊನೇ ವಿಶ್ವ ಕಪ್​ ಎಂದು ಹೇಳಿಕೊಂಡಿದ್ದ ಮೆಸ್ಸಿಗೆ ಅತ್ಯುತ್ತಮ ಗಿಫ್ಟ್​ ಲಭಿಸಿದೆ. ಆ ತಂಡದ ಆಟಗಾರರ ಸಂಭ್ರಮಕ್ಕೆ ಎಣೆಯೇ ಇಲ್ಲ. ಕ್ಲಾಕ್​ ರೂಮ್​ನಲ್ಲಿ ಆಹೋರಾತ್ರಿ ಪಾರ್ಟಿ ನಡೆದಿದೆ.

ಲಿಯೋನೆನ್​ ಮೆಸ್ಸಿ ಎಂಬ ವಿಶ್ವ ಫುಟ್ಬಾಲ್ ಕ್ಷೇತ್ರದ ಮಾಂತ್ರಿಕನಿಗೆ ವಿಶ್ವ ಕಪ್​ ಗಿಫ್ಟ್​ ಸಿಗಲೇಬೇಕು ಎಂಬುದಾಗಿ ಇಡೀ ಜಗತ್ತೇ ಬಯಸಿತ್ತು. ವಿರೋಧಿ ತಂಡದ ಆಟಗಾರರಿಗೂ ಮೆಸ್ಸಿಯ ಆಟದ ವೈಖರಿ ಬಗ್ಗೆ ಒಲವಿತ್ತು. ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಅದೀಗ ಸತ್ಯವಾಗಿದೆ. ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. ಹಾಗೆಂದು ಈ ಫುಟ್ಬಾಲ್​ ಮಾಂತ್ರಿಕನ ವಿಜಯ ಯಾತ್ರೆ ಸುಲಭವಾಗಿರಲಿಲ್ಲ. ಹಲವಾರು ಸವಾಲುಗಳನ್ನು ಮೀರಿ ಅವರು ಕಪ್ ಗೆದ್ದಿದ್ದಾರೆ.

ದೈತ್ಯರ ಸಂಹಾರದ ನಡುವೆ ಯಾನ

ಕತಾರ್​ ವಿಶ್ವ ಕಪ್​ ಈ ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿ ನಡೆಯಿತು. ಬಲಿಷ್ಠ ಎಂದೆನಿಸಿಕೊಂಡ ತಂಡಗಳು ಟೂರ್ನಿಯ ದುರ್ಬಲ ತಂಡಗಳಿಗೆ ಮಣಿದಿದ್ದವು. ಬ್ರೆಜಿಲ್​ ತಂಡ ಕ್ರೊವೇಷಿಯಾ ವಿರುದ್ಧ ಸೋತಿರುವುದು, ರೋನಾಲ್ಡೊ ಇರುವ ಪೋರ್ಚುಗಲ್​ ತಂಡ ಮೊರಾಕ್ಕೊ ತಂಡಕ್ಕೆ ಮಣಿದಿರುವುದು ಇದಕ್ಕೆಲ್ಲ ಸ್ಪಷ್ಟ ಉದಾಹರಣೆಗಳು. ಈ ತಂಡಗಳ ಸೋಲಿನ ನಡುವೆ ಅರ್ಜೆಂಟೀನಾ ಕೂಡ ಯಾವುದಾದರೊಂದು ತಂಡದೆದುರು ಮಂಡಿಯೂರಲಿದೆ ಎಂದು ಅಂದುಕೊಂಡವರ ಅಂದಾಜನ್ನು ಮೆಸ್ಸಿ ಸುಳ್ಳಾಗಿಸಿದ್ದಾರೆ.

ಫೈನಲ್ ಫೈಟ್​ ಹೀಗಿತ್ತು

16ನೇ ಸುತ್ತಿನಲ್ಲಿ ಆಸ್ಟ್ರೇಲಿಯಾ, ಕ್ವಾರ್ಟರ್ ಫೈನಲ್​ನಲ್ಲಿ ನೆದರ್ಲೆಂಡ್ಸ್ ಹಾಗೂ ಸೆಮಿ ಫೈನಲ್​ನಲ್ಲಿ ಕ್ರೊವೇಷಿಯಾ ತಂಡದ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿಗೆ ಅಡಿಯಿಟ್ಟಿದ್ದ ಮೆಸ್ಸಿ ಬಳಗಕ್ಕೆ ಟ್ರೋಫಿ ಸುಲಭದ ತುತ್ತಾಗಿರಲಿಲ್ಲ. ಸೆಮಿ ಫೈನಲ್​ ಪಂದ್ಯದಲ್ಲಿ ಮೊರಾಕ್ಕೊ ತಂಡವನ್ನು ಮಣಿಸಿದ್ದ ಕಳೆದ ಬಾರಿಯ ಚಾಂಪಿಯನ್ ಪಡೆ ಫೈನಲ್​ ಹೋರಾಟದ ಎದುರಾಳಿ. ಫ್ರಾನ್ಸ್​ ನ ಡಿಫೆಂಡರ್​ಗಳು, ಮಿಡ್​ ಫೀಲ್ಡರ್​ಗಳೆಲ್ಲರೂ ಚಾಣಾಕ್ಷರು. ಜತೆಗೆ ಗೋಲ್ಡನ್​ ಬೂಟ್ ಗೆದ್ದಿರುವ ಸ್ಟಾರ್​ ಆಟಗಾರ ಕೈಲಿಯಾನ್​ ಎಂಬಾಪೆಯೂ ಇದ್ದಾರೆ. ಸವಾಲಿಗೆ ಸಿದ್ಧವಾಯಿತು ಅರ್ಜೆಂಟೀನಾ.

ಭಾನುವಾರ ರಾತ್ರಿ ನಡೆದ ಫೈನಲ್​ನಲ್ಲಿ ಪೂರ್ವಯೋಜನೆಯಂತೆ ಅರ್ಜೆಂಟೀನಾ ಆಡಿತು. ಮೊದಲ ನಿಮಿಷದಿಂದಲೇ ಆಕ್ರಮಣಕಾರಿ ಧೋರಣೆ. ಎದುರಾಳಿ ತಂಡದ ಆಟಗಾರರಿಗೆ ಸುಳಿವು ಸಿಗದಷ್ಟು ವೇಗದಲ್ಲಿ ಓಡಿ ಚೆಂಡನ್ನು ಗೋಲ್​ ಪೋಸ್ಟ್​ಗೆ ನುಗ್ಗಿಸುವುದು ತಂತ್ರಗಾರಿಕೆಯಾಗಿತ್ತು. 23ನೇ ನಿಮಿಷದಲ್ಲಿ ಫ್ರಾನ್ಸ್​ ಆಟಗಾರ ಅಲ್ವಾರೆಜ್​ ಗೋಲ್​ ಫೋಸ್ಟ್​ ಬಳಿಯ ಬಾಕ್ಸ್​ನೊಳಗೆ ಅರ್ಜೆಂಟೀನಾ ತಂಡದ ಡಿ ಮಾರಿಯಾ ಅವರನ್ನು ಉದ್ದೇಶಪೂರ್ವಕವಾಗಿ ತಳ್ಳಿದರು. ಅಂಪೈರ್ ಬಳಿಯಿಂದ​ ಪೆನಾಲ್ಟಿ ಸಂದೇಶ. ಮೆಸ್ಸಿಗೆ ಯಶಸ್ಸು ಸಿಕ್ಕಿತು. ಅರ್ಜೆಂಟೀನಾಗೆ 1-0 ಮುನ್ನಡೆ.

ಅದಾಗಿ 13 ನಿಮಿಷದ ಬಳಿಕ ಅರ್ಜೆಂಟೀನಾದ ಸ್ಟ್ರೈಕರ್​ ಏಂಜಲ್​ ಡಿ ಮಾರಿಯಾ ಅದ್ಭುತ ಸಾಹಸ ಮಾಡಿದರು. ಎದುರಾಳಿ ತಂಡದ ನಾಯಕ ಹಾಗೂ ಗೋಲ್​ ಕೀಪರ್​ ಲೋರಿಸ್ ಅವರನ್ನು ವಂಚಿಸಿ ಚೆಂಡನ್ನು ಗೋಲ್​ ಪೋಸ್ಟ್​ ಕಡೆಗೆ ತಳ್ಳಿದರು. 2-0 ಮುನ್ನಡೆ ಪಡೆದ ಅರ್ಜೆಂಟೀನಾ ಸುಲಭವಾಗಿ ಗೆಲ್ಲುವುದೆಂದು ಎಲ್ಲರೂ ಭಾವಿಸಿದರು. ಪ್ರಥಮಾರ್ಧದ ಆಟ ಮುಗಿದ ಸಾಕಷ್ಟು ಹೊತ್ತಿನ ಅದೇ ಭಾವ.

ಪಂದ್ಯ ಮುಗಿಯಲು ಇನ್ನೇನು 10 ನಿಮಿಷಗಳು ಬಾಕಿ ಇರುವಾಗ ಚಿತ್ರಣವೇ ಬದಲಾಯಿತು. ದ್ವಿತೀಯಾರ್ಧದ ಆರಂಭದಿಂದ ನಿಧಾನಕ್ಕೆ ಮೇಲುಗೈ ಸಾಧಿಸಲು ಆರಂಭಿಸಿದ ಫ್ರಾನ್ಸ್ ತಂಡಕ್ಕೆ 80ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಲಭಿಸಿತು. ಅದರ ಲಾಭವನ್ನು ಕೈಲಿಯಾನ್​ ಎಂಬಾಪೆ ಪಡೆದರು. ಈಗ ಅರ್ಜೆಂಟೀನಾ ತಂಡಕ್ಕೆ 2-1 ಮುನ್ನಡೆ ಲಭಿಸಿತು. ಅದಾಗಿ ಒಂದು ನಿಮಿಷ ದಾಟುವಷ್ಟರಲ್ಲಿ ಮತ್ತೊಂದು ಪ್ರಖರ ಗೋಲ್​ ಬಾರಿಸಿದರು ಎಂಬಾಪೆ. 2-2ರ ಸಮಬಲದಲ್ಲಿ ನಿಂತಿತು ಪಂದ್ಯ. ಅರ್ಜೆಂಟೀನಾದ ಸುಲಭ ಜಯದ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ. 90 ನಿಮಿಷಗಳ ಒಳಗೆ ಮತ್ತೆ ಗೋಲ್ ಬರಲಿಲ್ಲ. ರೆಫರಿಗಳು ಹೆಚ್ಚುವರಿ 30 ನಿಮಿಷಗಳ ಆಟವನ್ನು ಆಡಿಸಲು ಮುಂದಾದರು.

ಮೊದಲ 15 ನಿಮಿಷಗಳಲ್ಲಿ ಕಾಲ್ಚೆಂಡು ಅತ್ತಿಂದಿತ್ತ ಸುಳಿದಾಡಿದೇ ಹೊರತು ಗೋಲ್​ ಪೋಸ್ಟ್​ನೊಳಗೆ ನುಗ್ಗಲಿಲ್ಲ. 108 ನಿಮಿಷಕ್ಕೆ ಮೆಸ್ಸಿ ಯಶಸ್ಸು ಪಡೆದರು. ಮತ್ತೆ ಅರ್ಜೆಂಟೀನಾಗೆ 3-2 ಮುನ್ನಡೆ. ಈ ಬಾರಿ ಎದುರಾಳಿಗೆ ಗೋಲ್ ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂದು ಅಂದುಕೊಂಡಿದ್ದರು ಎಲ್ಲರು. ಅರ್ಜೆಂಟೀನಾ ತಂಡದ ಮಾಂಟಿಯೆಲ್​ ಅವರು ಎಂಬಾಪೆ ಗೋಲ್​ಪೋಸ್ಟ್​​ ನೆಡೆಗೆ ಒದ್ದ ಚೆಂಡನ್ನು ತಡೆಯು ಪ್ರಯತ್ನ ಮಾಡುವಾಗ ಕೈ ತಾಗಿತು. ಅಂಪೈರ್​ ಪೆನಾಲ್ಟಿ ಕೊಟ್ಟರು. ಎಂಬಾಪೆಗೆ ಹ್ಯಾಟ್ರಿಕ್​ ಗೋಲ್​ಗಳ ಸಾಧನೆ ಮಾಡಿಯೇಬಿಟ್ಟರು. ಹೆಚ್ಚುವರಿ ಅವಧಿಯಲ್ಲೂ ಫಲಿತಾಂಶ ಪ್ರಕಟಗೊಳ್ಳಲಿಲ್ಲ. ರೆಫರಿಗಳು ಪೆನಾಲ್ಟಿ ಶೂಟೌಟ್​ ಮೊರೆ ಹೋದರು.

ಎಂಬಾಪೆಗೆ ಅಭಿನಂದಿಸಿದ ಮೆಸ್ಸಿ

ಪೆನಾಲ್ಟಿ ಹಂತದಲ್ಲಿ ಫ್ರಾನ್ಸ್​ ತಂಡದ ಕಿಂಗ್​ ಸ್ಲೇ ಕಾಮನ್​ ಹಾಗೂ ಅರುಲಿನ್​ ಚವಾಮೆನಿ ಅವರ ಎರಡು ಹಾಗೂ ಮೂರನೇ ಯತ್ನವನ್ನು ಅರ್ಜೆಂಟೀನಾದ ಗೋಲ್​ ಕೀಪರ್​ ಎಮಿಲಿಯಾನೊ ಮಾರ್ಟಿನೆಜ್​ ತಡೆದರು. ಅರ್ಜೆಂಟೀನಾ ಪರ ಮೆಸ್ಸಿ ಸೇರಿದಂತೆ ಮೊದಲ ನಾಲ್ವರು ಗೋಲ್​ ಬಾರಿಸಿದರು. ಅಲ್ಲಿಗೆ ವಿಜಯದ ಮಾಲೆ ಅರ್ಜೆಂಟೀನಾ ತಂಡದ ಕೊರಳಿಗೆ ಬಿತ್ತು.

ವಿದಾಯದ ಜಯ

ಮುಂದಿನ ವಿಶ್ವ ಕಪ್​ ಆಡುವುದಿಲ್ಲ ಎಂದು ಹಿಂದೆಯೇ ಘೋಷಿಸಿದ್ದ ಮೆಸ್ಸಿಗೆ ಇದು ವಿದಾಯದ ಜಯ. 35 ವರ್ಷದ ಅವರು ಹಲವಾರು ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದರೂ ವಿಶ್ವ ಕಪ್​ ಕೊರತೆ ಎದುರಿಸಿದ್ದರು. ಕೊನೇ ವಿಶ್ವ ಕಪ್​ನಲ್ಲಿ ಅವರಿಗೆ ಅದೂ ಲಭಿಸಿತು. ಅಲ್ಲಿಗೆ ಅವರ ಫುಟ್ಬಾಲ್​ ವೃತ್ತಿ ಪರಿಪೂರ್ಣವಾಯಿತು. ಅವರ ಯಶೋಗಾಥೆ ಇಲ್ಲಿಗೆ ಕೊನೆಯಾಗಿಲ್ಲ. ಹಾಲಿ ವಿಶ್ವ ಕಪ್​ನ ಗೋಲ್ಡನ್​ ಬಾಲ್​ ಪ್ರಶಸ್ತಿ ಅವರಿಗೆ ಲಭಿಸಿದೆ. ಅವರೀಗ ಪ್ಲೇಯರ್​ ಆಫ್​ ಟೂರ್ನಮೆಂಟ್​ ಕೂಡ.

ಸಚಿನ್​ ನೆನಪಿಸಿದ ಮೆಸ್ಸಿ

ಭಾರತದ ಕ್ರಿಕೆಟ್ ದಿಗ್ಗಜ ಸಚಿನ್​​ ತೆಂಡೂಲ್ಕರ್ ಅವರ ಜರ್ಸಿ ನಂಬರ್ 10. ಮೆಸ್ಸಿಯ ನಂಬರ್​ ಕೂಡ 10. ಸಚಿನ್ ಅವರು ಇದು ನನ್ನ ಕೊನೇ ವಿಶ್ವ ಕಪ್​ ಎಂದ ವರ್ಷ (2011) ಭಾರತ ತಂಡ ಏಕ ದಿನ ವಿಶ್ವ ಕಪ್​ ಗೆದ್ದಿತ್ತು. ಅಂತೆಯೇ ಮೆಸ್ಸಿ ಇದು ನನ್ನ ಕೊನೇ ವಿಶ್ವ ಕಪ್​ ಎಂದ ಸಲವೇ ವಿಶ್ವ ಕಪ್​ ಗೆದ್ದಿದ್ದಾರೆ. ಈ ಮೂಲಕ ಲೆಜೆಂಡ್​ಗಳ ಸಾಧನೆ ಅವಿಸ್ಮರಣೀಯ ಎನಿಸಿದೆ. ಮೆಸ್ಸಿ ಈ ಹಿಂದೆ 2006, 2010 ಹಾಗೂ 2014ರ ವಿಶ್ವ ಕಪ್​ನಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ | FIFA World Cup | ಮೆಸ್ಸಿಗೆ ವಿಜಯದ ವಿದಾಯ; ಅರ್ಜೆಂಟೀನಾ ತಂಡ ಚಾಂಪಿಯನ್​

Exit mobile version