Site icon Vistara News

‘ಮಂಕಿ’ಯಾದ ಮಿಯಾಂದಾದ್‌​, ಬೆಂಕಿಯಾದ ವೆಂಕಿ; ಇದು ಇಂಡೋ-ಪಾಕ್​ ಕದನ ಕತೆ

ಬೆಂಗಳೂರು: ಭಾರತ-ಪಾಕಿಸ್ತಾನ(IND vs PAK) ನಡುವಿನ ಕ್ರಿಕೆಟ್‌ ಪಂದ್ಯವೆಂದರೆ ಅಭಿಮಾನಿಗಳ ಜೋಶ್‌ ತಾರಕಕ್ಕೇರುತ್ತದೆ. ಅಂಗಳದಲ್ಲಿ ಆಟಗಾರರ ರೋಷಾವೇಶ ಕೂಡ ಬೇರೆಯೇ ಸ್ವರೂಪ ಪಡೆದುಕೊಂಡಿರುತ್ತದೆ. ಆಗಾಗ ಕಿರಿಕ್‌ ನಡೆಯುತ್ತಲೇ ಇರುತ್ತದೆ! 1992ರ ಸಿಡ್ನಿ ಪಂದ್ಯದಲ್ಲಿ ಜಾವೇದ್‌ ಮಿಯಾಂದಾದ್‌ ಕೀಪರ್‌ ಕಿರಣ್‌ ಮೋರೆ ಅವರನ್ನು ಅಣಕಿಸಲು ಮಂಗನಂತೆ ಕುಣಿದದ್ದು, ಮತ್ತು 1996ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕೆಣಕಿದ ಸೊಹೈಲ್‌ಗೆ ವೆಂಕಟೇಶ್​ ಪ್ರಸಾದ್‌ ಪೆವಿಲಿಯನ್‌ ದಾರಿ ತೋರಿಸಿದ್ದು ಇದಕ್ಕೊಂದು ಉತ್ತಮ ಉದಾಹರಣೆ.

ಮಂಗನಂತೆ ಕುಣಿದ ಮಿಯಾಂದಾದ್‌

ಅದು 1992ರ ವಿಶ್ವಕಪ್​ ಕೂಡದ ಸಿಡ್ನಿಯಲ್ಲಿ ನಡೆದ ಲೀಗ್‌ ಪಂದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ಮೊದಲ ವಿಶ್ವಕಪ್​ ಮುಖಾಮುಖಿ ಇದಾಗಿತ್ತು. ಇದಕ್ಕೂ ಮುನ್ನ ನಡೆದ ಮೂರು ವಿಶ್ವಕಪ್​ ಪಂದ್ಯಗಳಲ್ಲಿ ಇತ್ತಂಡಗಳು ಒಮ್ಮೇಯೂ ಮುಮುಖಿಯಾಗಿರಲಿಲ್ಲ.

ಇದನ್ನೂ ಓದಿ ವಿಶ್ವಕಪ್​ನಲ್ಲಿ ಇಂಡೋ-ಪಾಕ್​ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ!; ಬಗೆದಷ್ಟೂ ರೋಚಕ

ಈ ಪಂದ್ಯದಲ್ಲಿ ಭಾರತದ ಕೀಪರ್‌ ಕಿರಣ್‌ ಮೋರೆ ಅವರು ವಿಪರೀತ ಅಪೀಲು ಮಾಡುತ್ತಿದ್ದರು. ಇದನ್ನು ಸಹಿಸಲಾಗದೇ ಕ್ರೀಸ್‌ನಲ್ಲಿದ್ದ ಮಿಯಾಂದಾದ್‌ ಅಂಪೈರ್​ಗೆ ದೂರು ಸಲ್ಲಿಸಿ ಬ್ಯಾಟಿಂಗಿಗೆ ಸಜ್ಜಾಗಿದ್ದರು. 25ನೇ ಓವರ್​ ಎಸೆಯಲು ಬಂದ ಸಚಿನ್‌ ತೆಂಡೂಲ್ಕರ್​ ಅವರ ಎಸೆತವೊಂದನ್ನು ಮಿಯಾಂದಾದ್‌ ಕವರ್‌ ವಿಭಾಗದತ್ತ ಬಾರಿಸಿದರು. ರನ್​ಗಾಗಿ ಓಡಿದರೂ ಚೆಂಡು ಕ್ಷೇತ್ರರಕ್ಷಕನ ಕೈ ಸೇರಿದ್ದರಿಂದ ಮತ್ತೆ ಕ್ರೀಸ್​ನತ್ತ ಮರಳಿದರು. ಆಗ ಚೆಂಡನ್ನು ಪಡೆದ ಮೋರೆ ಮತ್ತೆ ಸ್ಟಂಪ್ಸ್‌ ಎಗರಿಸಿ ರನೌಟ್‌ಗೆ ಅಪೀಲು ಮಾಡಿದರು.

ಇದನ್ನೂ ಓದಿ IND vs PAK: ಇಂಡೋ-ಪಾಕ್​ ಪಂದ್ಯದ 10 ಸೆಕೆಂಡ್​ ಜಾಹೀರಾತಿನ ಮೌಲ್ಯ ಕೇಳಿದರೆ ಅಚ್ಚರಿ ಖಚಿತ

ಪಂದ್ಯ ಗೆದ್ದ ಭಾರತ

ರನೌಟ್‌ ಅಲ್ಲದಿದ್ದರೂ ಅಪೀಲು ಮಾಡಿದ್ದು ಮಿಯಾಂದಾದ್​ಗೆ ಪಿತ್ತ ನೆತ್ತಿಗೇರುವಂತೆ ಮಾಡಿತು. ಬ್ಯಾಟನ್ನು ಎರಡೂ ಕೈಗಳಿಂದ ಅಡ್ಡವಾಗಿ ಹಿಡಿದ ಮಿಯಾಂದಾದ್‌ ಮೋರೆಯತ್ತ ತಿರುಗಿ ಮಂಗನಂತೆ ಮೂರು ಸಲ ಕುಪ್ಪಳಿಸಿದರು. ಈ ಮೂಲಕ ಮೋರೆಯನ್ನು ಅಣಕಿದರು. ಮೈದಾನದಲ್ಲಿದ್ದ ಎಲ್ಲರಿಗೂ ಮಿಯಾಂದಾದ್‌ ಅವರ ಈ ಮಂಗನಾಟ ವಿಚಿತ್ರವಾಗಿ ಮತ್ತು ತಮಾಷೆಯಾಗಿ ಕಂಡಿತು. ಈಗಲೂ ಕೂಡ ಭಾರತ-ಪಾಪ್​ ಪಂದ್ಯ ಎಂದರೆ ಈ ಘಟನೆ ಮತ್ತೊಮ್ಮೆ ಕಣ್ಣಮುಂದೆ ಬರುತ್ತದೆ. ಪಾಕ್​ ವಿರುದ್ಧದ ಈ ಪಂದ್ಯವನ್ನು ಭಾರತ 43 ರನ್ನುಗಳಿಂದ ಗೆದ್ದು ಬೀಗಿತ್ತು.


ಸೊಹೈಲ್​ ಕಿರಿಕ್​; ತಿರುಗೇಟು ನೀಡಿದ ವೆಂಕಿ

ಇನ್ನೊಂದು ನಿದರ್ಶನ ಸಂಭವಿಸಿದ್ದು 1996ರ ಬೆಂಗಳೂರು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ. ಭಾರತ ನೀಡಿದ 288 ರನ್‌ ಚೇಸಿಂಗ್‌ ವೇಳೆ ಪಾಕ್​ ತಂಡದ ಸಯೀದ್‌ ಅನ್ವರ್‌-ಅಮೀರ್‌ ಸೊಹೈಲ್‌ ದಿಟ್ಟ ಆರಂಭ ಒದಗಿಸುತ್ತಿದ್ದರು. 48 ರನ್‌ ಆದಾಗ ಅನ್ವರ್‌ ವಿಕೆಟ್‌ ಬಿತ್ತು. ವೆಂಕಟೇಶ್​ ಪ್ರಸಾದ್‌ ಎಸೆತವೊಂದನ್ನು ಮಿಡ್‌-ಆಫ್‌ ಬೌಂಡರಿಗೆ ರವಾನಿಸುವ ಮೂಲಕ ನಾಯಕ ಸೊಹೈಲ್‌ ಅರ್ಧ ಶತಕ ಪೂರೈಸಿದರು.

ಇದನ್ನೂ ಓದಿ IND vs PAK: ಭಾರತ-ಪಾಕ್​ ಪಂದ್ಯ ನಡೆಯುವುದು ಅನುಮಾನ

ಅಷ್ಟಕ್ಕೇ ಸುಮ್ಮನಾಗದ ಸೊಹೈಲ್‌ ಮುಂದಿನ ಎಸೆತನ್ನೂ ಇದೇ ಮಾರ್ಗವಾಗಿ ಬೌಂಡರಿಗೆ ಅಟ್ಟುತ್ತೇನೆ ಎಂದು ವೆಂಕಿಯನ್ನು ಸನ್ನೆಯ ಮೂಲಕ ಕೆಣಕಿದರು. ಪ್ರಸಾದ್‌ ಇದನ್ನೇ ಸವಾಲಾಗಿ ಸ್ವೀಕರಿಸಿದರು. ಆಫ್‌-ಸ್ಟಂಪ್‌ ಮೇಲಿಂದ ಬಂದ ಮುಂದಿನ ಎಸೆತಕ್ಕೆ ಸೊಹೈಲ್‌ ಕ್ಲೀನ್​ ಬೌಲ್ಡ್​ ಆದರು. ಸೊಹೈಲ್‌ ಶೈಲಿಯಲ್ಲೇ ವೆಂಕಿ ಪೆವಿಲಿಯನ್‌ ತೋರಿಸುತ್ತ ಸೆಂಡ್‌-ಆಫ್‌’ ಮಾಡಿದರು. ಜತೆಗೆ ಮಾತಿನ ಮೂಲಕವೂ ತಿವಿದರು.


ಮನೆ ಮುಂದೆ ರಾಶಿ ರಾಶಿ ಉಡುಗೊರೆ

ಅಂದು ರಾತ್ರಿಯಿಡೀ ಪ್ರಸಾದ್‌ ಮನೆ ಮುಂದೆ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಮರುದಿನ ಮನೆಯಲ್ಲಿ ರಾಶಿ ರಾಶಿ ಉಡುಗೊರೆ ಬಂದು ಬಿದ್ದಿತ್ತು. ಸೊಹೈಲ್‌ ವಿಕೆಟ್‌ಗಾಗಿ ಅಭಿಮಾನಿ ಈ ಗಿಫ್ಟ್​ ನೀಡಿದ್ದರು. ಪ್ರಸಾದ್‌ ಅವರು ಈ ಪಂದ್ಯದಲ್ಲಿ 45ಕ್ಕೆ 3 ವಿಕೆಟ್‌ ಕಿತ್ತು ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Exit mobile version