ನವ ದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿಸಬೇಕು ಎಂದು ಒತ್ತಾಯಿಸಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ನವ ದೆಹಲಿಯ ಜಂತರ್ಮಂತರ್ನಲ್ಲಿ ಬುಧವಾರ ಮಧ್ಯರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಪೊಲೀಸರು ಹಾಗೂ ಕುಸ್ತಿಪಟುಗಳ ನಡುವೆ ಜಟಾಪಟಿ ನಡೆದಿದೆ ಎಂಬುದಾಗಿ ವರದಿಯಾಗಿದೆ.
ಆಪ್ ನಾಯಕ ಸೋಮ್ನಾಥ್ ಬಾರ್ತಿ ಅವರೊಂದಿಗೆ ಹಲವಾರು ಮಂದಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ಜಂತರ್ಮಂತರ್ಗೆ ಬಂದಿದ್ದಾರೆ. ಅವರು ಯಾವುದೇ ಅನುಮತಿ ತೆಗೆದುಕೊಂಡಿರಲಿಲ್ಲ. ಅವರನ್ನು ತಡೆಯಲು ಹೋದಾಗ ಪ್ರತಿಭಟನಾಕಾರರು ಪ್ರತಿರೋಧ ತೋರಿದ್ದಾರೆ ಎಂದು ಡೆಲ್ಲಿ ಪೊಲೀಸರು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಮಾಧ್ಯಮ ಮುಂದೆ ಮಾತನಾಡಿ, ನಮ್ಮ ಮೇಳೆ ಡೆಲ್ಲಿ ಪೊಲೀಸರು ದೌರ್ಜನ್ಯ ಆರಂಭಿಸಿದ್ದಾರೆ. ನನಗೆ ದೇಶದ ಬೆಂಬಲ ಬೇಕು. ನಮ್ಮ ಜತೆಗೆ ಇರುವ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ನಾಳೆ ಎಲ್ಲರೂ ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿ ಎಂದು ಕರೆಕೊಟ್ಟಿದ್ದಾರೆ. ರೈತರು ಹಾಗೂ ಮುಖಂಡರು ಜಂತರ್ಮಂತ್ನಲ್ಲಿ ಸೇರುವ ಮೂಲಕ ನಮಗೆ ಬೆಂಬಲ ಸೂಚಿಸಬೇಕು ಎಂದು ಇದೇ ವೇಳೆ ತಿಳಿಸಿದ್ದಾರೆ.
ಡೆಲ್ಲಿ ಪೊಲೀಸರು ಗೂಂಡಾಗಿರಿ ಆರಂಭಿಸಿದ್ದಾರೆ. ಅವರ ಆಟ ನಡೆಯುವುದಿಲ್ಲ. ರೈತರೇ ನಮ್ಮ ಬೆಂಬಲಕ್ಕೆ ಬನ್ನಿ. ಇಂಥದ್ದನ್ನು ಸಹಿಸಿಕೊಳ್ಳುವುದು ಬೇಡ. ಟ್ರ್ಯಾಕ್ಟರ್ ಮತ್ತು ಟ್ರಾಲಿಗಳು ಏನೇ ಇರಲಿ. ಹತ್ತಿಕೊಂಡು ಬಂದು ನಮಗೆ ಬೆಂಬಲ ಸೂಚಿಸಿ ಎಂದು ಪ್ರತಿಭಟನಾಕಾರು ಕೋರಿದ್ದಾರೆ.
ಹೊಸದಿಲ್ಲಿ ಡಿಸಿಪಿ ಪ್ರಣವ್ ತಾಯಲ್ ಪ್ರತಿಕ್ರಿಯಿಸಿ, ಆಪ್ ಕಾರ್ಯಕರ್ತರ ದೊಡ್ಡ ಗುಂಪೊಂದು ಪ್ರತಿಭಟನೆ ನಡೆಯುತ್ತಿದ್ದ ಜಾಗದಲ್ಲಿ ಜಮಾಯಿಸಿದೆ. ಪೊಲೀಸರು ಹಾಕಿರುವ ಬ್ಯಾರಿಕೇಡ್ಗಳನ್ನು ಎಸೆದು ಒಳಕ್ಕೆ ಹೋಗಿದ್ದಾರೆ. ಪೊಲೀಸರು ಮಧ್ಯ ಪ್ರವೇಶ ಮಾಡಿ ಅವರನ್ನು ತಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಾಜಿ ಕುಸ್ತಿಪಟು ರಾಜ್ವೀರ್ ಪ್ರತಿಕ್ರಿಯೆ ನೀಡಿ, ಮಳೆಯಿಂದಾಗಿ ನಮ್ಮ ಹಾಸಿಗೆಗಳು ಒದ್ದೆಯಾಗಿವೆ. ಹೀಗಾಗಿ ಬೇರೆ ಹಾಸಿಗೆಗಳನ್ನು ಮಡಚಿಕೊಂಡು ಒಳಗೆ ತರುತ್ತಿದ್ದೆವು. ಮದ್ಯದ ಅಮಲಿನಲ್ಲಿರುವ ಪೊಲೀಸರು ನಮ್ಮನ್ನು ತಡೆದರು. ಅಲ್ಲದೆ, ವಿನೇಶ್ಗೆ ನಿಂದಿಸಿದರು. ಇದರಿಂದ ಸಮಸ್ಯೆ ಉಂಟಾಯಿತು ಎಂದು ಹೇಳಿದ್ದಾರೆ.
ಬುಧವಾರ ಸಂಜೆ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಪಿ ಟಿ ಉಷಾ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಕುಸ್ತಿಪಟುಗಳ ಜತೆ ಮಾತನಾಡಿದ್ದರು. ಈ ವೇಳೆಯೂ ಸಣ್ಣ ಪ್ರಮಾಣದ ತಳ್ಳಾಟ ನಡೆಯಿತು ಎಂಬುದಾಗಿ ವರದಿಯಾಗಿತ್ತು.
ಕುಸ್ತಿಪಟುಗಳು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪಿಟಿ ಉಷಾ ವಾರದ ಹಿಂದೆ ಬೇಸರ ವ್ಯಕ್ತಪಡಿಸಿದ್ದರು. ಅವರು ನಮ್ಮ ದೇಶದ ಮಾನ ಕಳೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಉಷಾ ಅವರ ಅಭಿಪ್ರಾಯ ಟೀಕೆಗಳಿಗೆ ಈಡಾಗಿತ್ತು.