ಅಹಮದಾಬಾದ್: ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವೇಗದ ಬೌಲರ್ ಮೊಹಮ್ಮದ್ ಶಮಿ ಎರಡು ವಿಕೆಟ್ ಪಡೆದಿದ್ದಾರೆ. ನಾಲ್ಕು ಓವರ್ಗಳಲ್ಲಿ 29 ರನ್ಗಳಿಗೆ 2 ವಿಕೆಟ್ ಕಬಳಿಸಿದರು. ಈ ಮೂಲಕ ಅವರು ತಂಡದ ಯಶಸ್ವಿ ಬೌಲರ್ ಎನಿಸಿಕೊಂಡರು. ಇದೆಲ್ಲದಕ್ಕಿಂತ ಹೆಚ್ಚಾಗಿ ಅವರು ಮೊದಲ ವಿಕೆಟ್ ಪಡೆದ ತಕ್ಷಣ ಐಪಿಎಲ್ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ಡೆವೋನ್ ಕಾನ್ವೆ ಒಂದು ರನ್ಗೆ ಔಟ್ ಆದರು. ಶಮಿ ಎಸೆದ ಮಾರಕ ಬೌಲಿಂಗ್ಗೆ ಅವರು ಕ್ಲೀನ್ ಬೌಲ್ಡ್ ಆದರು. ಈ ವೇಳೆ ಶಮಿ 100 ಐಪಿಎಲ್ ವಿಕೆಟ್ಗಳನ್ನು ಕಿತ್ತಿರುವ 19ನೇ ಬೌಲರ್ ಎನಿಸಿಕೊಂಡರು. ಶಮಿ ತಮ್ಮ 94ನೇ ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದರು.
ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ನ ಡ್ವೆನ್ ಬ್ರಾವೊ ಮೊದಲ ಸ್ಥಾನದಲ್ಲಿದ್ದಾರೆ. ಅವರು ಐಪಿಎಲ್ನ 158 ಇನಿಂಗ್ಸ್ಗಳಲ್ಲಿ 183 ವಿಕೆಟ್ ಕಬಳಿಸಿದ್ದಾರೆ. ಮುಂಬಯಿ ಇಂಡಿಯನ್ಸ್ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ಎರಡನೇ ಸ್ಥಾನದಲ್ಲಿದ್ದಾರೆ. 122 ಐಪಿಎಲ್ ಮ್ಯಾಚ್ಗಳಲ್ಲಿ ಅವರು 170 ತಮ್ಮದಾಗಿಸಿಕೊಂಡಿದ್ದಾರೆ.
ಆರ್ಸಿಬಿ ಮಾಜಿ ಸ್ಪಿನ್ನರ್ ಹಾಗೂ ಹಾಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಯಜ್ವೇಂದ್ರ ಚಹಲ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. 130 ಎಸೆತಗಳಲ್ಲಿ ಅವರು 166 ವಿಕೆಟ್ ಪಡೆದಿದ್ದಾರೆ.
ಉತ್ತಮ ಮೊತ್ತ ಪೇರಿಸಿದ ಚೆನ್ನೈ
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಬ್ಯಾಟರ್ ಡೆವೋನ್ ಕಾನ್ವೆ 1 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ಹಿನ್ನಡೆ ಉಂಟು ಮಾಡಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಮೊಯೀನ್ ಅಲಿ ಸ್ಪೋಟಕ ಬ್ಯಾಟಿಂಗ್ ಮಾಡಿದರೂ 23 ರನ್ಗಳಿಗೆ ಔಟಾದರು. ಹೀಗಾಗಿ ಸಿಎಸ್ಕೆ ತಂಡಕ್ಕೆ ಮತ್ತೆ ಹಿನ್ನಡೆ ಉಂಟಾಯಿತು.
ಗಾಯಕ್ವಾಡ್ ಸ್ಫೋಟಕ ಬ್ಯಾಟಿಂಗ್
ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಬೆನ್ಸ್ಟೋಕ್ಸ್ 7 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಆದರೆ, ಮತ್ತೊಂದು ಬದಿಯಲ್ಲಿ ಅಬ್ಬರಿಸಿದ ಬೆನ್ಸ್ಟೋಕ್ಸ್ ಸತತವಾಗಿ ಇನಿಂಗ್ಸ್ ಕಟ್ಟಿದರು. 23 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಅವರು ನಂತರವೂ ಬಿಡುಬೀಸಿನ ಬ್ಯಾಟಿಂಗ್ ನಡೆಸಿದರು. ಆದರೆ, ಅಲ್ಜಾರಿ ಜೋಸೆಫ್ ಎಸೆದ ಚಾಣಾಕ್ಷ ಬೌಲಿಂಗ್ಗೆ ಅವರು ಶುಭ್ಮನ್ ಗಿಲ್ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.
ಗಾಯಕ್ವಾಡ್ ಹೊರತುಪಡಿಸಿ ಚೆನ್ನೈ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಅಂಬಾಟಿ ರಾಯುಡು 12 ರನ್ಗೆ ಔಟಾದರೆ, ಶಿವಂ ದುಬೆ 19 ರನ್ ಕೊಡುಗೆ ಕೊಟ್ಟರು. ಮಹೇಂದ್ರ ಸಿಂಗ್ ಧೋನಿ 7 ಎಸೆತಗಳಿಗೆ 14 ರನ್ ಬಾರಿಸಿದರು.