ಲಕ್ನೋ: ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಭಾರತ ಕ್ರಿಕೆಟ್ ತಂಡದ ಪ್ರಧಾನ ವೇಗಿ ಮೊಹಮ್ಮದ್ ಶಮಿ(Mohammed Shami) ಕ್ರಿಕೆಟ್ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದು, ಈ ವಿಡಿಯೊವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಎನ್ಸಿಎಯಲ್ಲಿ(NCA) ಕಠಿಣ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಶಮಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಶಮಿ ಬೌಲಿಂಗ್ ನಡೆಸುತ್ತಿರುವ ಮತ್ತು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಉರುಳಿಸಿದ ವಿಡಿಯೊವನ್ನು ಕೂಡ ಎಡಿಟ್ ಮಾಡಿ ಹಾಕಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಶಮಿ ಇದೇ ತಿಂಗಳು ಲಂಕಾ ವಿರುದ್ಧ ಆಡಲಿರುವ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆಯಾಗುತ್ತಾರೆ ಎನ್ನಲಾಗಿತ್ತು. ಆದರೆ ಶಮಿ ಇನ್ನೂ ಫಿಟ್ನೆಸ್ ಕ್ಲೀಯರೆನ್ಸ್ ಪಡೆದಿಲ್ಲ. ಹೀಗಾಗಿ ಅವರು ಲಂಕಾ ಸರಣಿಗೆ ಆಯ್ಕೆಯಾಗುವುದು ಅನುಮಾನ.
ಬಾಂಗ್ಲಾ ಸರಣಿಯಲ್ಲಿ ಕಣಕ್ಕೆ?
ಚೇತರಿಕೆಯ ಹಾದಿಯಲ್ಲಿರುವ ಶಮಿ ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್ ಸೇರಿ ಮಹತ್ವದ ಟಿ20 ವಿಶ್ವಕಪ್ ಟೂರ್ನಿ ಕೈತಪ್ಪಿತ್ತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದರು.
ವಿಶ್ವಕಪ್ ಬಳಿಕ ಶಮಿ ಇದುವರೆಗೂ ಯಾವುದೇ ಕ್ರಿಕೆಟ್ ಪಂದ್ಯ ಆಡಿಲ್ಲ. ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿರುವ ಶಮಿ ಈಗಾಗಲೇ ಬೌಲಿಂಗ್ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಶೀಘ್ರದಲ್ಲೇ ಅವರು ಭಾರತ ತಂಡ ಸೇರುವಂತಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಇದನ್ನೂ ಓದಿ IND vs SL: ಲಂಕಾ ವಿರುದ್ಧದ ಏಕದಿನ ಸರಣಿಗೆ ಶ್ರೇಯಸ್ ಅಯ್ಯರ್ ಆಯ್ಕೆ ಸಾಧ್ಯತೆ
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.