ಅಹಮದಾಬಾದ್ : ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 2023 ರ ಫೈನಲ್ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶೇಷ ದಾಖಲೆಯೊಂದನ್ನು ಬರೆದರು. ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಐಪಿಎಲ್ನಲ್ಲಿ 250 ಪಂದ್ಯಗಳನ್ನು ಆಡಿದ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡರು. ಈ ಪಟ್ಟಿಯಲ್ಲಿ ಅವರು ಅವರೇ ಅಗ್ರಸ್ಥಾನಿಯಾಗಿದ್ದಾರೆ.
2010, 2011, 2018 ಮತ್ತು 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತಮ್ಮ ನಾಯಕತ್ವದಲ್ಲಿ ನಾಲ್ಕು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು ಧೋನಿ. ಈ ಮೂಲಕ ಮುಂಬಯಿ ಇಂಡಿಯನ್ಸ್ ತಂಡ ನಾಯಕ ರೋಹಿತ್ ಶರ್ಮಾ ಬಳಿಕ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ರೋಹಿತ್ ಮುಂಬಯಿ ತಂಡಕ್ಕೆ ಐದು ಟ್ರೋಫಿಗಳನ್ನು ತಂದುಕೊಟ್ಟಿದ್ದಾರೆ. 2013ರ ಸ್ಪಾಟ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ ಚೆನ್ನೈ ತಂಡವನ್ನು ಎರಡು ವರ್ಷಗಳ ಕಾಲ ನಿಷೇಧಿಸಿದಾಗ 2016 ಮತ್ತು 2017 ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದರು ಮಹೇಂದ್ರ ಸಿಂಗ್ ಧೋನಿ. ತಂಡಕ್ಕೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ನಾಯಕರಾಗಿದ್ದರು.
ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಇತಿಹಾಸದಲ್ಲಿ ಧೋನಿ 226 ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಅವುಗಳಲ್ಲಿ 132 ಪಂದ್ಯಗಳನ್ನು ಗೆದ್ದಿದ್ದು, 91 ಪಂದ್ಯಗಳಲ್ಲಿ ಸೋತಿದ್ದಾರೆ. 100ಕ್ಕೂ ಹೆಚ್ಚು ಪಂದ್ಯಗಳಲ್ಲಿ ತಂಡವೊಂದನ್ನು ಮುನ್ನಡೆಸಿದ ನಾಯಕರಲ್ಲಿ ಅವರ ಗೆಲುವಿನ ಶೇಕಡಾವಾರು ಪ್ರಮಾಣ ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮವಾಗಿದೆ.
ಧೋನಿ 249 ಐಪಿಎಲ್ ಪಂದ್ಯಗಳಲ್ಲಿ 39.09 ಸರಾಸರಿಯಲ್ಲಿ 5082 ರನ್ ಗಳಿಸಿದ್ದಾರೆ, 135.96 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 2018ರ ಋತುವಿನಲ್ಲಿ ಅವರು 16 ಪಂದ್ಯಗಳಲ್ಲಿ 75.83 ಸರಾಸರಿಯಲ್ಲಿ 455 ರನ್ ಗಳಿಸಿದ್ದಾರೆ. ಅವರು ಮೂರು ಅರ್ಧ ಶತಕಗಳೊಂದಿಗೆ 150.66 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಇದನ್ನೂ ಓದಿ : IPL 2023 : ಸಿಎಸ್‌ಕೆ ವಿರುದ್ಧ 214 ರನ್ ಬಾರಿಸಿ ಐಪಿಎಲ್ನಲ್ಲಿ ನೂತನ ದಾಖಲೆ ಬರೆದ ಗುಜರಾತ್ ಟೈಟನ್ಸ್
ಅತಿ ಹೆಚ್ಚು ಫೈನಲ್ ಆಡಿದ ಆಟಗಾರ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಫೈನಲ್ ಪಂದ್ಯಗಳನ್ನು ಆಡಿದ ದಾಖಲೆಯನ್ನು ಧೋನಿ ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ. ಧೋನಿ 11 ಫೈನಲ್‌ಗಳನ್ನು ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಸಿಎಸ್‌ಕೆ ತಂಡದೊಂದಿಗೆ 10 ಐಪಿಎಲ್ ಫೈನಲ್‌ಗಳನ್ನು ಆಡಿರುವ ಧೋನಿ, 2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ತಂಡದ ಪರ ಫೈನಲ್‌ನಲ್ಲಿ ಆಡಿದ್ದರು.
214 ರನ್ ಬಾರಿಸಿದ ಗುಜರಾತ್
ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಬಾರಿಸಿತು. ಇದು ಐಪಿಎಲ್ ಇತಿಹಾಸದ ಫೈನಲ್ ಪಂದ್ಯಗಳಲ್ಲಿ ದಾಖಲಾದ ಗರಿಷ್ಠ ಸ್ಕೋರ್. ವೃದ್ಧಿಮಾನ್ ಸಹಾ (54) ಮತ್ತು ಸಾಯ್ ಸುದರ್ಶನ್ (96) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಟೈಟನ್ಸ್ ಬೃಹತ್ ಮೊತ್ತ ಕಲೆಹಾಕಿತು. ಶುಭ್ಮನ್ ಗಿಲ್ ಕೂಡ 39 ರನ್ ಬಾರಿಸಿದರು.