ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರಲ್ಲಿ ಎಂ.ಎಸ್. ಧೋನಿ (MS Dhoni) ಪಾಲ್ಗೊಂಡಿರುವ ಹಲವು ಪ್ರಮುಖ ಕ್ಷಣಗಳನ್ನು ಸೇರಿಸಿದ ಒಂದು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (Chennai super kings- CSK) ತಂಡ ತನ್ನ ನಾಯಕನಿಗೆ ಭಾವನಾತ್ಮಕ ವಂದನೆ ಸಲ್ಲಿಸಿದೆ.
ಟ್ವಿಟರ್ ಖಾತೆಯಲ್ಲಿ ಈ ಸಲದ ಐಪಿಎಲ್ 2023ರ ಚಾಂಪಿಯನ್ ತಂಡ ಈ ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಈ ಸಲದ ಧೋನಿ ಅವರ ಆಟದ ಕ್ಷಣಗಳಿದ್ದು, “ಓ ಕ್ಯಾಪ್ಟನ್, ನನ್ನ ಕ್ಯಾಪ್ಟನ್” ಎಂಬ ಕ್ಯಾಪ್ಷನ್ ಅನ್ನು ಇದಕ್ಕೆ ನೀಡಲಾಗಿದೆ. ಇದು ಖ್ಯಾತ ಕವಿ ವಾಲ್ಟ್ ವ್ಹಿಟ್‌ಮನ್‌ನ ಕವನದ ಶೀರ್ಷಿಕೆಯಾಗಿದೆ.
Oh Captain, My Captain! 🥹#WhistlePodu #Yellove 🦁💛 @msdhoni pic.twitter.com/whJeUjWUVd
— Chennai Super Kings (@ChennaiIPL) June 13, 2023
ಧೋನಿ ಸದ್ಯ ಎಡ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಮುಂಬೈನಲ್ಲಿ ಮೊಣಕಾಲಿನ ಸರ್ಜರಿಗೆ ಒಳಗಾಗಿದ್ದಾರೆ. ಹೆಸರಾಂತ ಕ್ರೀಡಾ ಮೂಳೆ ಶಸ್ತ್ರಚಿಕಿತ್ಸಕ ಡಾ. ದಿನ್ಶಾ ಪರ್ದಿವಾಲಾ ಅವರಿಂದ ಧೋನಿ ಚಿಕಿತ್ಸೆ ಪಡೆದಿದ್ದಾರೆ. ದಿನ್ಶಾ ಅವರು ಬಿಸಿಸಿಐ ವೈದ್ಯಕೀಯ ಸಮಿತಿಯಲ್ಲಿದ್ದು, ರಿಷಭ್ ಪಂತ್ ಸೇರಿದಂತೆ ಹಲವಾರು ಭಾರತೀಯ ಕ್ರಿಕೆಟಿಗರಿಗೆ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಈ ಬಾರಿ ಐಪಿಎಲ್ ಸ್ಪರ್ಧೆಯಲ್ಲಿ ತಮ್ಮ ತಂಡವನ್ನು ದಾಖಲೆ ಐದನೇ ಬಾರಿಗೆ ಪ್ರಶಸ್ತಿಯತ್ತ ಮುನ್ನಡೆಸಿದ್ದರು. ಮುಂದಿನ ವರ್ಷದ ಐಪಿಎಲ್‌ನಲ್ಲಿ ಧೋನಿ ಭಾಗವಹಿಸಲಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ದೊರೆತಿಲ್ಲ. ವೀಡಿಯೊ ನೋಡಿದ ಅಭಿಮಾನಿಗಳು ಕೂಡ ಕಾಮೆಂಟ್ ಸೆಕ್ಷನ್‌ನಲ್ಲಿ ಇದೇ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ.
ಗುರುವಾರ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಧೋನಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿಎಸ್‌ಕೆ ತಂಡದ ಸಿಇಒ ಕಾಸಿ ವಿಶ್ವನಾಥನ್ ತಿಳಿಸಿದ್ದಾರೆ. ಅವರು ಒಂದು ಅಥವಾ ಎರಡು ದಿನದಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ. ಅವರ ಫಿಟ್‌ನೆಸ್ ಪ್ರಾಕ್ಟೀಸ್ ಆರಂಭವಾಗುವ ಮೊದಲು ಕೆಲವು ದಿನ ವಿಶ್ರಾಂತಿ ಪಡೆಯಲಿದ್ದಾರೆ. ಮುಂದಿನ ಐಪಿಎಲ್‌ನಲ್ಲಿ ಆಡಲು ಫಿಟ್ ಆಗಲು ಸಾಕಷ್ಟು ಸಮಯವಿದೆ ಎಂದು ತಂಡದ ಇನ್ನೊಂದು ಮೂಲ ತಿಳಿಸಿದೆ.
ಇದನ್ನೂ ಓದಿ: MS Dhoni : ಐಪಿಎಸ್ ಅಧಿಕಾರಿ ವಿರುದ್ಧದ ಕೋರ್ಟ್ ಕೇಸಲ್ಲಿ ಧೋನಿಗೆ ಮೊದಲ ಜಯ