ರಾಂಚಿ: 17 ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup 2024) ಗೆದ್ದ ಟೀಮ್ ಇಂಡಿಯಾಕ್ಕೆ, ಚೊಚ್ಚಲ ಟಿ20 ವಿಶ್ವಕಪ್(T20 World Cup Win) ಗೆದ್ದ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ವಿಶೇಷವಾಗಿ ಶುಭ ಹಾರೈಸಿದ್ದಾರೆ. ನನ್ನ ಹುಟ್ಟು ಹಬ್ಬಕ್ಕೆ ಮುಂಚಿತವಾಗಿಯೇ ಸ್ಮರಣೀಯ ಉಡುಗೊರೆ ನೀಡಿದ್ದಕ್ಕೆ ಟೀಮ್ ಇಂಡಿಯಾಕ್ಕೆ ಧನ್ಯವಾದಗಳು ಎಂದು ಇನ್ಸ್ಟಾಗ್ರಾಮ್(MS Dhoni Instagram Post) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಚಾಂಪಿಯನ್ ತಂಡದ ಫೋಟೊವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಧೋನಿ, ನನ್ನ ಎದೆ ಬಡಿತ ಹೆಚ್ಚಾಗಿತ್ತು. ಆದರೆ ದೃಢ ನಂಬಿಕೆಯೊಂದಿಗೆ ನೀವೆಲ್ಲರೂ ಉತ್ತಮವಾಗಿ ಆಡಿದ್ದೀರಿ. ತವರಿನ ಮತ್ತು ವಿಶ್ವದೆಲ್ಲಡೆ ಇರುವ ಎಲ್ಲಾ ಭಾರತೀಯರಿಂದ, ವಿಶ್ವಕಪ್ ಮರಳಿ ಮನೆಗೆ ತಂದಿದ್ದಕ್ಕಾಗಿ ಧನ್ಯವಾದಗಳು. ಅಭಿನಂದನೆಗಳು. ಜತೆಗೆ ನನ್ನ ಹುಟ್ಟುಹಬ್ಬದ ಉಡುಗೊರೆಗೆ ಧನ್ಯವಾದಗಳು” ಎಂದು ಧೋನಿ ಬರೆದುಕೊಂಡಿದ್ದಾರೆ. ಧೋನಿ ಅವರ ಜನ್ಮ ದಿನ ಜುಲೈ 7. 43ನೇ ವರ್ಷಕ್ಕೆ ಕಾಲಿಡುತ್ತಿರುವ ಧೋನಿಗೆ ಈ ಗೆಲುವು ಅಮೂಲ್ಯ ಉಡುಗೊರ ಎಂದು ಧೋನಿ ಭಾವಿಸಿದ್ದಾರೆ.
2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಭಾರತ ಯಾವುದೇ ಕಪ್ ಗೆದ್ದಿಲ್ಲ. 2014ರಲ್ಲಿ ಧೋನಿ ನಾಯಕತ್ವದಲ್ಲಿ ಫೈನಲ್ ಪ್ರವೇಶಿಸಿದ್ದರೂ ಕೂಡ ಶ್ರೀಲಂಕಾ ವಿರುದ್ಧ ಸೋಲು ಕಂಡು ರನ್ನರ್ ಅಪ್ ಆಗಿತ್ತು. ಇದೀಗ ರೋಹಿತ್ ಕಪ್ ಗೆಲ್ಲುವ ಮೂಲಕ ಭಾರತ ತಂಡ 17 ವರ್ಷಗಳ ಬಳಿಕ ಮತ್ತೊಂದು ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊನೆಯ ಓವರ್ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್ ಮಿಲ್ಲರ್ ವಿಕೆಟ್ ಕೈಚೆಲ್ಲಿದರು. ಎರಡನೇ ಎಸೆತವನ್ನು ರಬಾಡಾ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿತ್ತು. ಹಾರ್ದಿಕ್ ಒಂದು ವೈಡ್ ಎಸೆದರು. ರಬಾಡಾ ಕ್ಯಾಚಿತ್ತು ನಿರ್ಗಮಿಸಿದರು. ಕೊನೆಯ ಎಸೆತದಲ್ಲಿ ಒಂದು ರನ್ ಮಾತ್ರ ಬಂತು. ಭಾರತ 7 ರನ್ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದು ಬೀಗಿತು.