ಅಹಮದಾಬಾದ್: ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತನ್ನ ಖ್ಯಾತಿಗೆ ತಕ್ಕಂತೆ ಆಟವಾಡುವ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ 62 ರನ್ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಹಾರ್ದಿಕ್ ಪಡೆ ಫೈನಲ್ ಟಿಕೆಟ್ ಪಡೆಯಿತು. ಮೇ 28 ರಂದು ನಡೆಯುವ ಪ್ರಶಸ್ತಿ ಸಮರದಲ್ಲಿ ಚೆನ್ನೈ ತಂಡದ ಸವಾಲು ಎದುರಿಸಲಿದೆ. ಸೋಲು ಕಂಡ ಮುಂಬೈ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಳೆಯಿಂದ ವಿಳಂಬಗೊಂಡ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಶುಭಮನ್ ಗಿಲ್ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್ 18.2 ಓವರ್ಗಳಲ್ಲಿ 171 ರನ್ ಗಳಿಸಿ ಸರ್ವಪತನ ಕಂಡಿತು. ಗುಜರಾತ್ ಪರ ಮೋಹಿತ್ ಶರ್ಮ ಅವರು ಕೇವಲ 10 ರನ್ ನೀಡಿ 5 ವಿಕೆಟ್ ಕಿತ್ತು ಮಿಂಚಿದರು.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಗಾಯದ ಮತ್ತು ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ರನ್ ಗಳಿಸಿತು. ಇಶಾನ್ ಕಿಶನ್ ಅವರು ಗಾಯಗೊಂಡ ಕಾರಣ ಅವರ ಬದಲು ನೆಹಾಲ್ ವಧೇರಾ ರೋಹಿತ್ ಜತೆ ಇನಿಂಗ್ಸ್ ಆರಂಭಿಸಿದರು. ಆದರೆ ಅವರು ಕೇವಲ ಒಂದು ಬೌಂಡರಿಗೆ ಮಾತ್ರ ಸೀಮಿತರಾಗಿ ಶಮಿಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲೇ ರೋಹಿತ್ ಕೂಡ 8 ರನ್ಗೆ ಆಟ ಮುಗಿಸಿದರು.
ದ್ವಿತೀಯ ವಿಕೆಟ್ಗೆ ಕ್ರೀಸ್ಗಿಳಿದಿದ್ದ ಕ್ಯಾಮರೂನ್ ಗ್ರೀನ್ ಅವರು ಗಾಯಗೊಂಡು ರಿಟೇರ್ಡ್ ಹರ್ಟ್ ಆಗಿ ಹೊರ ಹೋಗಿದ್ದರು. ಆದರೆ ರೋಹಿತ್ ವಿಕೆಟ್ ಪತನದ ಬಳಿಕ ಮತ್ತೆ ಬ್ಯಾಟಿಂಗ್ ನಡೆಸಲು ಬಂದು ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಮತ್ತೊಂದು ತುದಿಯಲ್ಲಿ ಸೂರ್ಯಕುಮಾರ್ ಕೂಡ ತಮ್ಮ ಬ್ಯಾಟಿಂಗ್ ಪ್ರತಾಪವನ್ನು ತೋರಿಸಿದರು. ಉಭಯ ಆಟಗಾರರ ಈ ಬ್ಯಾಟಿಂಗ್ ಆರ್ಭಟದಿಂದ ತಂಡ 10 ಓವರ್ಗೆ ನೂರರ ಗಡಿ ದಾಡಿತು.
ಇದೇ ವೇಳೆ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಜೋಶುವಾ ಲಿಟಲ್ ಅವರು ತಾನೆಸೆದ ಮೊದಲ ಓವರ್ನ ದ್ವಿತೀಯ ಎಸೆತದಲ್ಲಿ ಗ್ರೀನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ಮುಂಬೈ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು. 20 ಎಸೆತ ಎದುರಿಸಿದ ಗ್ರೀನ್ 30 ರನ್ ಚಚ್ಚಿದರು. ಸೂರ್ಯಕುಮಾರ್ ಅವರ ಬ್ಯಾಟಿಂಗ್ ಅಬ್ಬರ ಮಾತ್ರ ಮೊದಲಿನಂತೆ ಸಾಗಿತು. 33 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ತಿಗೊಳಿಸಿದರು. ಆದರೆ ಪ್ರಯೋಗವೊಂದನ್ನು ಮಾಡಲು ಮುಂದಾಗಿ ಮೋಹಿತ್ ಶರ್ಮ ಅವರ ಎಸೆದಲ್ಲಿ ಸೂರ್ಯ ಕ್ಲೀನ್ ಬೌಲ್ಡ್ ಆದರು. ಈ ವಿಕೆಟ್ ಪತನಗೊಂಡಂತೆ ಮುಂಬೈ ತಂಡ ಗೆಲುವಿನ ವಿಶ್ವಾಸವು ಕಳೆದುಕೊಂಡಿತು. ಸೂರ್ಯಕುಮಾರ್ 38 ಎಸೆತಗಳಲ್ಲಿ 61 ರನ್ ಬಾರಿಸಿದರು. 14 ಓವರ್ ತನಕ ಸರಿಯಾಗಿ ದಂಡಿಸಿಕೊಂಡ ಗುಜರಾತ್ ಬೌಲರ್ಗಳು ಆ ಬಳಿಕ ಹಿಡಿದ ಸಾಧಿಸಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಅಂತಿಮವಾಗಿ ಮುಂಬೈ ನಾಟಕೀಯ ಕುಸಿತ ಕಂಡು ಸೋಲಿಗೆ ತುತ್ತಾಯಿತು.
ಪವರ್ ಪ್ಲೇ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದ ಗಿಲ್
ಇದಕ್ಕೂ ಮುನ್ನ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ ಮತ್ತು ವೃದ್ಧಿಮಾನ್ ಸಾಹಾ ಅವರು ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಈ ಪರಿಣಾಮ ಪವರ್ ಪ್ಲೇಯಲ್ಲಿ ದೊಡ್ಡ ಮೊತ್ತ ಹರಿದು ಬರಲಿಲ್ಲ. ಪವರ್ ಪ್ಲೇ ಮುಗಿದ ತಕ್ಷಣ ಬ್ಯಾಟಿಂಗ್ ವೇಗಕ್ಕೆ ಚುರುಕು ಮುಟ್ಟಿಸಿದ ಗಿಲ್ ಮುಂಬೈ ಬೌಲರ್ಗಳನ್ನು ದಂಡಿಸಿ ರನ್ ಗಳಿಸಲು ಆರಂಭಿಸಿದರು. ಇದೇ ವೇಳೆ ಅವರು ಜೀವದಾನವೊಂದು ಪಡೆದರು. 31 ರನ್ ಗಳಿಸಿದ್ದ ವೇಳೆ ಟಿಮ್ ಡೇವಿಡ್ ಅವರು ಕ್ಯಾಚ್ ಕೈಚೆಲ್ಲಿದರು.
ಗಿಲ್ ಅವರು ಈ ಪಂದ್ಯದಲ್ಲಿ 8 ರನ್ ಗಳಿಸಿದ ವೇಳೆ ನೂತನ ಮೈಲುಗಲ್ಲೊಂದನ್ನು ತಲುಪಿದರು. ಈ ಬಾರಿಯ ಐಪಿಎಲ್ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿ ಮೂಡಿಬಂದರು. ಈ ಮೂಲಕ ಆರ್ಸಿಬಿಯ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ಪಡೆದರು. ಡು ಪ್ಲೆಸಿಸ್ 14 ಪಂದ್ಯಗಳಿಂದ 730 ರನ್ ಗಳಿಸಿದ್ದರು. ಇದೀಗ ಗಿಲ್ 800ರ ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹಿರಿಮೆಗೂ ಗಿಲ್ ಪಾತ್ರರಾದರು. ವಿರಾಟ್ ಕೊಹ್ಲಿ, ಜಾಸ್ ಬಟ್ಲರ್ ಮತ್ತು ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ ಮೊದಲಿಗರು.
ಮತ್ತೊಂದು ತುದಿಯಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ವೃದ್ಧಿಮಾನ್ ಸಾಹಾ ಅವರು ಅನುಭವಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರ ಎಸೆತದಲ್ಲಿ ಮುಂದೆ ಬಂದು ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಎಡವಿ ಇಶಾನ್ ಕಿಶನ್ ಅವರಿಂದ ಸ್ಡಂಪ್ ಔಟ್ ಆದರು. ಅವರ ಗಳಿಕೆ 16 ಎಸೆತಗಳಿಂದ 18 ರನ್. ಸಾಹಾ ವಿಕೆಟ್ ಪತನದ ಬಳಿಕ ಕ್ರೀಸ್ಗಿಳಿದ ಸಾಯಿ ಸುದರ್ಶನ್ ಅವರು ಗಿಲ್ ಜತೆಗೂಡಿ ಉಪಯುಕ್ತ ಇನಿಂಗ್ಸ್ ಕಟ್ಟಿದರು. ಪರಿಣಾಮ ಗುಜರಾತ್ 10 ಓವರ್ ಮುಕ್ತಾಯದ ವೇಳೆಗೆ 90 ಗಡಿ ದಾಟಿ 10ರ ಸರಾಸರಿಯಲ್ಲಿ ರನ್ ಕಲೆಹಾಕುವ ಮೂಲಕ ಆರಂಭದಲ್ಲಿ ಕಂಡಿದ್ದ ರನ್ ಬರಗಾಲವನ್ನು ಸರಿದೂಗಿಸಿತು.
ಮೂರನೇ ಶತಕ ಸಿಡಿಸಿ ಸಂಭ್ರಮಿಸಿದ ಗಿಲ್
ಟಿಮ್ ಡೇವಿಡ್ ಅವರಿಂದ ಸಿಕ್ಕ ಒಂದು ಜೀವದಾನದ ಸಂಪೂರ್ಣ ಲಾಭವೆತ್ತಿದ ಶುಭಮನ್ ಗಿಲ್ ಶತಕ ಬಾರಿಸಿ ಸಂಭ್ರಮಿಸಿದರು. ಇದು ಅವರ ಮೂರನೇ ಐಪಿಎಲ್ ಶತಕವಾಗಿದೆ. ಈ ಮೂರು ಶತಕವೂ ಈ ಆವೃತ್ತಿಯಲ್ಲಿಯೇ ದಾಖಲಾಗಿದ್ದು ವಿಶೇಷ. ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಶತಕ ಬಾರಿಸಿದ ಸಾಧನೆ ವಿರಾಟ್ ಕೊಹ್ಲಿ ಮತ್ತು ಜಾಸ್ ಬಟ್ಲರ್ ಹೆಸರಿನಲ್ಲಿದೆ. ಉಭಯ ಆಟಗಾರರು 4 ಶತಕ ಬಾರಿಸಿದ್ದಾರೆ.
ಇದನ್ನೂ ಓದಿ IPL 2023: ಟೂರ್ನಿಯಿಂದ ಹೊರಬಿದ್ದರೂ ವಿಶೇಷ ಅವತಾರದಲ್ಲಿ ಕಾಣಿಸಿಕೊಂಡ ಆರ್ಸಿಬಿ ನಾಯಕ
ಕೊಹ್ಲಿಯ ಶೈಲಿಯಲ್ಲೇ ಬ್ಯಾಟ್ ಬೀಸಿದ ಗಿಲ್, ಮುಂಬೈ ಬೌಲರ್ಗಳ ಮೇಲೆರಗಿ ಸಿಕ್ಸರ್, ಬೌಂಡರಿಗಳ ಮಳೆಯನ್ನೇ ಸುರಿಸಿದರು. ಈ ಮೂಲಕ ನೆರೆದಿದ್ದ ಸ್ಥಳೀಯ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದರು. ಅದರಲ್ಲೂ ಚಾವ್ಲಾ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸುವ ಮೂಲಕ ಚಾವ್ಲಾ ಅವರಿಗೆ ಚಳಿ ಬಿಡಿಸಿದರು. ಈ ಓವರ್ನಲ್ಲಿ 20 ರನ್ ಸೋರಿಕೆಯಾಯಿತು. ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಸಾಯಿ ಸುದರ್ಶನ್ ಕೂಡ ಸಿಕ್ಕ ಅವಕಾಶದಲ್ಲಿ ಸಿಕ್ಸರ್, ಬೌಂಡರಿ ಬಾರಿಸುತ್ತಾ ಸಾಗಿ ತಂಡದ ಮೊತ್ತವನ್ನು ಹಿಗ್ಗಿಸುತ್ತಿದ್ದರು. 43 ರನ್ ಗಳಿಸಿದ ವೇಳೆ ಅವರು ರಿಟೈರ್ಡ್ ಔಟ್ ಆದರು. ಅವರ ಈ ಇನಿಂಗ್ಸ್ನಲ್ಲಿ 5 ಬೌಂಡರಿ ಮತ್ತಿ ಒಂದು ಸಿಕ್ಸರ್ ಸಿಡಿಯಿತು.
ಬಿರುಸಿನ ಬ್ಯಾಟಿಂಗ್ ಮೂಲಕ 150 ರನ್ಗಳತ್ತ ಮುನ್ನುಗ್ಗುತ್ತಿದ್ದ ಗಿಲ್ ಅವರನ್ನು ಅಂತಿಮವಾಗಿ ಕಳೆದ ಲಕ್ನೋ ವಿರುದ್ಧದ ಪಂದ್ಯದ ಹೀರೊ ಆಕಾಶ್ ಮಧ್ವಾಲ್ ಕಟ್ಟಿ ಹಾಕಿದರು. 60 ಎಸೆತ ಎದುರಿಸಿದ ಗಿಲ್ ಬರೊಬ್ಬರಿ 10 ಸಿಕ್ಸರ್ ಮತ್ತು 7 ಬೌಂಡರಿ ನೆರವಿನಿಂದ 129 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಪಾಂಡ್ಯ ಅಜೇಯ 28 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.