ಅಹಮದಾಬಾದ್: ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತೀವ್ರ ವೈಫಲ್ಯ ಅನುಭವಿಸಿದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ 35ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 55 ರನ್ಗಳ ಹೀನಾಯ ಸೋಲಿಗೆ ಒಳಗಾಯಿತು. ಈ ಮೂಲಕ ಸತತ ಎರಡು ಹಾಗೂ ಒಟ್ಟು ನಾಲ್ಕನೇ ಸೋಲಿನ ಸುಳಿಗೆ ಸಿಲುಕಿತು. ಅತ್ತ ಗುಜರಾತ್ ಟೈಟನ್ಸ್ ತಂಡಕ್ಕೆ ಸತತ ಎರಡನೇ ಹಾಗೂ ಒಟ್ಟು ಐದನೇ ವಿಜಯ ಲಭಿಸಿತು.
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ತಂಡ ತನ್ನ ಪಾಲಿನ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬಯಿ ಬಳಗ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 9 ವಿಕೆಟ್ ನಷ್ಟಕ್ಕೆ152 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಗುಜರಾತ್ ತಂಡ ಪರ ಶುಭ್ಮನ್ ಗಿಲ್ (56) ಬಾರಿಸಿದ ಅರ್ಧ ಶತಕ ಬಾರಿಸಿದರೆ, ಡೇವಿಡ್ ಮಿಲ್ಲರ್ (46) ಹಾಗೂ ಅಭಿನವ್ ಮುಕುಂದ್ (42) ಕೂಡ ಗುಜರಾತ್ ಜೈಂಟ್ಸ್ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾದರು. ಬೌಲಿಂಗ್ನಲ್ಲಿ ನೂರ್ ಅಹಮದ್ 3 ವಿಕೆಟ್ ಉರುಳಿಸಿದರೆ, ರಶೀದ್ ಖಾನ್ ಹಾಗೂ ಮೋಹಿತ್ ಶರ್ಮಾ ತಲಾ 2 ವಿಕೆಟ್ ಪಡೆದರು.
ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಮುಂಬಯಿ ತಂಡದ ಬ್ಯಾಟರ್ಗಳು ಕೆಚ್ಚೆದೆಯ ಪ್ರದರ್ಶನ ನೀಡಲಿಲ್ಲ. ನೇಹಲ್ ವದೇರಾ (40 ರನ್) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದಂತೆ ಕ್ಯಾಮೆರಾನ್ ಗ್ರೀನ್ 33 ರನ್ ಬಾರಿಸಿದರೆ, ಸೂರ್ಯಕುಮಾರ್ ಯಾದವ್ 23 ರನ್ಗಳಿಗೆ ತೃಪ್ತಿಪಟ್ಟರು. ರೋಹಿತ್ ಶರ್ಮಾ (2 ರನ್), ತಿಲಕ್ ವರ್ಮಾ(2 ರನ್), ಟಿಮ್ ಡೇವಿಡ್ (0) ಗುಜರಾತ್ ಬೌಲಿಂಗ್ ದಾಳಿಗೆ ತತ್ತರಿಸಿದರು.
ದೊಡ್ಡ ಗುರಿ
ಬ್ಯಾಟ್ ಮಾಡಲು ಆರಂಭಿಸಿದ ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಾಹ (4) ಬೇಗನೆ ಔಟಾಗುವ ಮೂಲಕ ಹಿನ್ನಡೆ ಉಂಟಾಯಿತು. ಆದರೆ ಶುಭ್ಮನ್ ಗಿಲ್ ಮತ್ತೊಂದು ತುದಿಯಲ್ಲಿ ತಳವೂರಿ ನಿಂತು ಬ್ಯಾಟ್ ಮಾಡಿದರು. 30 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿ ಅವರು 56 ರನ್ ಮಾಡಿದ ಔಟಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ನಾಯಕ ಹಾರ್ದಿಕ್ ಪಾಂಡ್ಯ 13 ರನ್ಗಳಿಗೆ ಔಟಾದರು. ವಿಜಯ್ ಶಂಕರ್ (19) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.
12. 1 ಓವರ್ಗಳಲ್ಲಿ 100 ರನ್ ಬಾರಿಸಿದ ಗುಜರಾತ್ ತಂಡ ಬಳಿಕ ರನ್ ಗಳಿಕೆಯಲ್ಲಿ ವೇಗ ಹೆಚ್ಚಿಸಿಕೊಂಡಿತು. ಬಳಿಕ ಜತೆಯಾದ ಡೇವಿಡ್ ಮಿಲ್ಲರ್ (46) ಹಾಗೂ ಅಭಿನವ್ ಮುಕುಂದ್ (42) ಅಬ್ಬರದ ಬ್ಯಾಟಿಂಗ್ ನಡೆಸಿದರು. ಈ ಜೋಡಿ 5ನೇ ವಿಕೆಟ್ಗೆ 71 ರನ್ ಗಳಿಸಿದರು. ಇವರಿಬ್ಬರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗುಜರಾತ್ ತಂಡಕ್ಕೆ 200 ರನ್ಗಳ ಗಡಿ ದಾಟಲು ಸಾಧ್ಯವಾಯಿತು. ಕೊನೆಯಲ್ಲಿ ರಾಹುಲ್ ತೆವಟಿಯಾ ಕೂಡ 5 ಎಸೆತಗಳಿಗೆ 20 ರನ್ ಬಾರಿಸಿ ಮಿಂಚಿದರು.
ಮುಂಬಯಿ ಇಂಡಿಯನ್ಸ್ ಬೌಲಿಂಗ್ನಲ್ಲಿ ಪಿಯೂಷ್ ಚಾವ್ಲಾ 2 ವಿಕೆಟ್ ಉರುಳಿಸಿದರೆ, ಅರ್ಜುನ್ ತೆಂಡೂಲ್ಕರ್, ಜೇಸನ್ ಬೆಹ್ರೆನ್ಡಾರ್ಫ್, ರೀಲಿ ಮೆರಿಡಿತ್ ಹಾಗೂ ಕುಮಾರ್ ಕಾರ್ತಿಕೇಯ ತಲಾ ಒಂದು ವಿಕೆಟ್ ಕಬಳಿಸಿದರು.