ಮುಂಬಯಿ: ಫಾಫ್ ಡು ಪ್ಲೆಸಿಸ್ (65) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (68) ಜೋಡಿಯ ಅರ್ಧ ಶತಕದ ನೆರವಿನಿಂದ ಮಿಂಚಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 16ನೇ ಆವೃತ್ತಿಯ 54ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 199 ರನ್ ಬಾರಿಸಿದೆ. ಈ ಮೂಲಕ ಆತಿಥೇಯ ರೋಹಿತ್ ಶರ್ಮಾ ಬಳಗಕ್ಕೆ 200 ರನ್ಗಳ ಗೆಲುವಿನ ಗುರಿ ಎದುರಾಗಿದೆ. ಆರ್ಸಿಬಿ ತಂಡದ ಆರಂಭಿಕ ವೇಗದಲ್ಲಿಯೇ ಆಡಿದ್ದರೆ ದೊಡ್ಡ ಮೊತ್ತವನ್ನು ಪೇರಿಸಬಹುದಾಗಿತ್ತು. ಆದರೆ, ಉಳಿದ ಬ್ಯಾಟ್ಸ್ಮನ್ಗಳಿಂದ ಹೆಚ್ಚಿನ ನೆರವು ತಂಡಕ್ಕೆ ದೊರೆಯಲಿಲ್ಲ.
ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಆರ್ಸಿಬಿ ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಹ್ವಾನ ಪಡೆಯಿತು. ಅಂತೆಯೇ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 199 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ 1 ರನ್ಗೆ ಔಟಾಗುವ ಮೂಲಕ ಆರಂಭಿಕ ಹಿನ್ನಡೆ ಉಂಟಾಯಿತು. ಬಳಿಕ ಆಡಲು ಬಂದ ಅನುಜ್ ರಾವತ್ 6 ರನ್ಗೆ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ಹಿನ್ನಡೆಗೆ ಒಳಗಾದರು. ಈ ವೇಳೆ ಜತೆಯಾದ ನಾಯಕ ಫಾಫ್ ಡು ಪ್ಲೆಸಿಸ್ (65) ಹಾಗೂ ಗ್ಲೆನ್ ಮ್ಯಾಕ್ವೆಲ್ ಅಬ್ಬರದ ಆಟ ಪ್ರದರ್ಶಿಸಿದರು. ಈ ಜೋಡಿ ಅಬ್ಬರದ ಹೊಡೆತಗಳ ಮೂಲಕ ಮೂರನೇ ವಿಕೆಟ್ಗೆ 120 ರನ್ ಪೇರಿಸಿತು. ಪ್ಲೆಸಿಸ್ 30 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದಲ್ಲದೆ, 41 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಫೋರ್ ಸಮೇತ 65 ರನ್ ಬಾರಿಸಿದರು. ಮ್ಯಾಕ್ಸ್ವೆಲ್ 25 ಎಸೆತಗಳನ್ನು ಬಳಸಿಕೊಂಡು ಅರ್ಧ ಶತಕ ಬಾರಿಸಿದಲ್ಲದೆ, 33 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 8 ಫೋರ್ಗಳ ಸಮೇತ 68 ರನ್ ಬಾರಿಸಿದರು.
ಇದನ್ನೂ ಓದಿ : Virat kohli : ರನ್ಗಳಿಸಲು ವಿರಾಟ್ ಕೊಹ್ಲಿಗೆ ಹೊಸ ತಂತ್ರ ಹೇಳಿಕೊಟ್ಟ ರವಿ ಶಾಸ್ತ್ರಿ
ಸತತ ವಿಕೆಟ್ ಪತನ
ಮ್ಯಾಕ್ಸ್ವೆಲ್ ಹಾಗೂ ಪ್ಲೆಸಿಸ್ ಕ್ರೀಸ್ನಲ್ಲಿ ಇರುವ ತನಕ ಗೆಲುವಿಗೆ ಅನಿವಾರ್ಯವಾಗಿರುವ 220 ಪ್ಲಸ್ ರನ್ ದಾಖಲಾಗುವ ಸೂಚನೆ ಇತ್ತು. ಆದರೆ ಅವರಿಬ್ಬರು ಔಟಾದ ಬಳಿಕ ಆರ್ಸಿಬಿ ತನ್ನ ಚಾಳಿ ಮುಂದುವರಿಸಿತು. ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಆಡಲು ಬಂದಿದ್ದ ಅವರು 1 ರನ್ ಬಾರಿಸಿ ನಿರಾಸೆಯಿಂದ ಪೆವಿಲಿಯನ್ಗೆ ಮರಳಿದರು. ದಿನೇಶ್ ಕಾರ್ತಿಕ್ ಒಂದು ಜೀವದಾನ ಪಡದುಕೊಂಡು 18 ಎಸೆತಗಳಿಗೆ 30 ರನ್ ಬಾರಿಸಿದರೂ, ಕೇದಾರ್ ಜಾಧವ್ ಹಾಗೂ ವಾನಿಂದು ಹಸರಂತ ತಲಾ 12 ರನ್ ಬಾರಿಸಿದರು.
ಮುಂಬಯಿ ಪರ ಜೇಸನ್ ಬೆಹ್ರೆನ್ಡಾರ್ಫ್ 3 ವಿಕೆಟ್ ಉರುಳಿಸಿದರೆ, ಕ್ಯಾಮೆರಾನ್ ಗ್ರೀನ್, ಕ್ರಿಸ್ ಜೊರ್ಡಾನ್ ಹಾಗೂ ಕುಮಾರ್ ಕಾರ್ತಿಕೇಯ ತಲಾ ಒಂದು ವಿಕೆಟ್ ಗೆದ್ದರು.