Site icon Vistara News

IPL 2023 : ಮುಂಬಯಿ ವಿರುದ್ಧ 81 ರನ್​ ಹೀನಾಯ ಸೋಲು, ಲಕ್ನೊ ತಂಡ ಐಪಿಎಲ್​ನಿಂದ ಎಲಿಮಿನೇಟ್​​

IPL Mumbai Indians

#image_title

ಚೆನ್ನೈ: ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿದ ಮುಂಬಯಿ ಇಂಡಿಯನ್ಸ್​ ತಂಡ ಐಪಿಎಲ್​ 16ನೇ ಆವೃತ್ತಿಯ ಎಲಿಮಿನೇಟರ್​ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ 81. ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ರೋಹಿತ್​ ಶರ್ಮಾ ಬಳಗ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಎಂಟ್ರಿ ಪಡೆದುಕೊಂಡಿದೆ. ಶುಕ್ರವಾರ (ಮೇ26) ನಡೆಯಲಿರುವ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್ ತಂಡಕ್ಕೆ ಎದುರಾಗಲಿದೆ. ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಮುಂಬಯಿ ವೇಗದ ಬೌಲರ್ ಆಕಾಶ್​ ಮಧ್ವಲ್​ 5 ರನ್​ ನೀಡಿ 5 ವಿಕೆಟ್​ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಮುಂಬಯಿ ತಂಡದ ಪರ ಕ್ಯಾಮೆರೂನ್​ ಗ್ರೀನ್​ 41 ರನ್​ ಬಾರಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಇಲ್ಲಿನ ಎಂಎ ಚಿದಂಬರಂ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಮುಂಬಯಿ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಮುಂಬಯಿ ಇಂಡಿಯನ್ಸ್ ಬಳಗ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 182 ರನ್​ ಬಾರಿಸಿತು. ತಿಯಾಗಿ ಬ್ಯಾಟ್​ ಮಾಡಿದ ಲಕ್ನೊ ತಂಡ 16.3 ಓವರ್​ಗಳಲ್ಲಿ 101 ರನ್ ಬಾರಿಸಿ ಆಲ್​ಔಟ್​ ಆಯಿತು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಹೊರಟ ಲಕ್ನೊ ತಂಡ ಹೀನಾಯ ಪ್ರದರ್ಶನ ನೀಡಿತು. ಮಾರ್ಕ್​ ಸ್ಟೊಯ್ನಿಸ್​ (40) ಹಾಗೂ ಕೈಲ್​ ಮೇಯರ್ಸ್​ (18) ಹೊರತುಪಡಿಸಿದರೆ ಉಳಿದವರು ಗಲ್ಲಿ ಕ್ರಿಕೆಟ್​ ರೀತಿಯಲ್ಲಿ ಆಡಿದರು. ಅನಗತ್ಯವಾಗಿ ರನ್​ ಔಟ್ ಮೂಲಕವೇ ಮೂರು ವಿಕೆಟ್​ ನೀಡಿದರು. ಇಬ್ಬರನ್ನು ರನ್ಔಟ್​ ಮಾಡಿದ ದೀಪಕ್​ ಹೂಡಾ ಕೊನೆಯಲ್ಲಿ ತಾವೇ ರನ್​ಔಟ್​ ಆಗಿ ಔಟಾದರು.

ಲಕ್ನೊ ತಂಡ ಆರಂಭದಿಂದಲೇ ಮುಂಬಯಿ ಬೌಲರ್​ಗಳ ಪ್ರಖರ ದಾಳಿಗೆ ತತ್ತರಿಸಿತು. ಪ್ರೇರಕ್​ ಮಂಕಡ್​ 3 ರನ್​ಗೆ ಔಟಾಗುವ ಮೂಲಕ 12 ರನ್​ಗೆ ಮೊದಲ ವಿಕೆಟ್​ ಕಳೆದುಕೊಂಡಿತು. ನಾಯಕ ಕೃಣಾಲ್​ ಪಾಂಡ್ಯ 8 ರನ್​ಗಳಿಗೆ ಸೀಮಿತಗೊಂಡರು. ಈ ವೇಳೆ 69 ರನ್​ಗೆ ಮೂರು ವಿಕೆಟ್​ ಕಳೆದುಕೊಂಡಿತ್ತಾದರೂ ಗೆಲುಇನ ಅವಕಾಶವಿತ್ತು. ಆದರೆ, ಅಲ್ಲಿಂದ ಲಕ್ನೊ ತಂಡದ ಬ್ಯಾಟಿಂಗ್ ವಿಭಾಗ ಕುಸಿತ ಕಂಡಿತು. ಆಯುಷ್​ ಬದೋನಿ 1 ರನ್​ಗೆ ಔಟಾದರೆ, ನಿಕೋಲಸ್ ಪೂರನ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ದೀಪಕ್​ ಹೂಡ ಒದ್ದಾಡಿ, ಪೇಚಾಡಿ 15 ರನ್ ಬಾರಿಸಿದರೆ ಕೃಷ್ಣಪ್ಪ ಗೌತಮ್​ 2 ರನ್​ ಮಾಡಿ ಅನಗತ್ಯ ರನ್​ಔಟ್​ಗೆ ಒಳಗಾದರು.

ಮಧ್ವಾಲ್ ಮಾಯೆ

ಮುಂಬಯಿ ತಂಡ ವೇಗದ ಬೌಲರ್​ ಆರಂಭದಿಂದಲೇ ಲಕ್ನೊ ಬೌಲರ್​ಗಳನ್ನು ಕಾಡಿದರು. ಪ್ರೇರಕ್​ ಮಂಕಡ್​ ಅವರನ್ನು ತಮ್ಮ ಮೊದಲ ಓವರ್​ನಲ್ಲೇ ಬೌಲ್ಡ್​ ಮಾಡಿದ ಅವರು ಎರಡನೇ ಓವರ್​ನಲ್ಲಿ ಆಯುಷ್ ಬದೋನಿ ಹಾಗೂ ನಿಕೋಲಸ್ ಪೂರನ್​ ವಿಕೆಟ್​ ತಮ್ಮದಾಗಿಸಿಕೊಂಡರು. ಮೂರನೇ ಓವರ್​ನಲ್ಲಿ ರವಿ ಬಿಷ್ಣೋಯಿ ವಿಕೆಟ್​ ಪಡೆದ ಅವರು ತಮ್ಮ ಸ್ಪೆಲ್​ನ ಕೊನೇ ಓವರ್​ನಲ್ಲಿ ಮೊಯ್ಸಿನ್​ ಖಾನ್ ಅವರನ್ನು ಬೌಲ್ಡ್ ಮಾಡಿದರು. ಒಟ್ಟು 21 ಎಸೆತಗಳನ್ನು ಎಸೆದ ಅವರು ಕೇವಲ 5 ರನ್​ ನೀಡಿ ಸಾಧನೆ ಮಾಡಿದರು. ಉಳಿದಂತೆ ಕ್ರಿಸ್​ ಜೋರ್ಡಾನ್ ಹಾಗೂ ಪಿಯೂಷ್ ಚಾವ್ಲಾ ತಲಾ ಒಂದು ವಿಕೆಟ್​ ಹಂಚಿಕೊಂಡರು. ಮೂರು ವಿಕೆಟ್​ಗಳು ರನ್​ಔಟ್​ ಮೂಲಕ ದೊರೆಯಿತು.

https://twitter.com/IPL/status/1661401924854497281?s=20

ಮೊದಲು ಬ್ಯಾಟ್​ ಮಾಡಿದ ಮುಂಬಯಿ ತಂಡ ಉತ್ತಮ ಆರಂಭ ಪಡೆಯಲಿಲ್ಲ. 30 ರನ್​ಗಳಿಗೆ ಮೊದಲ ವಿಕೆಟ್​ ಕಳೆದುಕೊಂಡರೆ 38 ರನ್​ಗಳಿಗೆ 2ನೇ ವಿಕೆಟ್​ ಪತನಗೊಂಡಿತು. ಆದರೆ, ಮೂರನೇ ವಿಕೆಟ್​ಗೆ ಜತೆಯಾದ ಸೂರ್ಯಕುಮಾರ್​ ಯಾದವ್​ (33) ಹಾಗೂ ಕ್ಯಾಮೆರಾನ್​ ಗ್ರೀನ್​ (41) ತಂಡಕ್ಕೆ ಆಧಾರವಾದರು. ಈ ಜೋಡಿ 66 ರನ್​ಗಳ ಜತೆಯಾಟ ನೀಡುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

https://twitter.com/IPL/status/1661400843512606723?s=20

ಲಕ್ನೊ ತಂಡದ ಪರ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದ್ದ ಅಫಘಾನಿಸ್ತಾನದ ಆಟಗಾರ ನವಿನ್​ ಉಲ್​ ಹಕ್​ (38 ರನ್​ಗಳಿಗೆ 4 ವಿಕೆಟ್​​) ಒಂದೇ ಓವರ್​ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಕ್ಯಾಮೆರೂನ್​ ಗ್ರೀನ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಈ ಮೂಲಕ ಮುಂಬಯಿ ತಂಡದ ರನ್​ ಗಳಿಕೆ ಏಕಾಏಕಿ ಕುಸಿತ ಕಂಡಿತು. ಬಳಿಕ ತಿಲಕ್​ ವರ್ಮಾ (26) ಹಾಗೂ ಕೊನೇ ಹಂತದಲ್ಲಿ ಸ್ಫೋಟಕ ಪ್ರದರ್ಶನ ನೀಡಿದ ನೇಹಲ್​ ವಧೇರಾ (12 ಎಸೆತಕ್ಕೆ 23) ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಟಿಮ್​ ಡೇವಿಡ್​ 13 ರನ್ ಬಾರಿಸಿದರೆ ಕ್ರಿಸ್​ ಜೋರ್ಡಾನ್​ 4 ರನ್​ಗೆ ಸೀಮಿತಗೊಂಡರು.

ಇದನ್ನೂ ಓದಿ : MS Dhoni : ಧೋನಿ ಮುಂದಿನ ವರ್ಷವೂ ಆಡುತ್ತಾರೆ ಎಂಬ ಸೂಚನೆ ನೀಡಿದ ಡ್ವೇನ್​ ಬ್ರಾವೊ

ಲಕ್ನೊ ತಂಡದ ಪರ ಯಶ್​ ಠಾಕೂರ್​ 33 ರನ್​ ನೀಡಿ ಪ್ರಮುಖ ಮೂರು ವಿಕೆಟ್​ ಕಬಳಿಸಿದರು. ಮೊಹ್ಸಿನ್​ ಖಾನ್​ 24 ರನ್​ಗಳಿಗೆ 1 ವಿಕೆಟ್​ ತಮ್ಮದಾಗಿಸಿಕೊಂಡರು.

Exit mobile version