ಅಹಮದಾಬಾದ್: ಐಪಿಎಲ್ ಆರಂಭಕ್ಕೆ ಬಿಸಿಸಿಐ ಕಹಳೆ ಊದಿದೆ. ಮಾರ್ಚ್ 31ರಂದು ಸಿಎಸ್ಕೆ ಹಾಗೂ ಕಳೆದ ಬಾರಿಯ ಚಾಂಪಿಯನ್ ಮುಂಬಯಿ ಇಂಡಿಯನ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಆದರೆ, ಐಪಿಎಲ್ ಆರಂಭಿಕ ಚಟವಟಿಕೆಗಳು ಈಗಾಗಲೇ ಆರಂಭಗೊಂಡಿವೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಪತ್ರಿಕಾಗೋಷ್ಠಿ ಹಾಗೂ ಪೋಟೋ ಶೂಟ್ ನಡೆದಿದೆ. ತಂಡಗಳ ನಾಯಕರೆಲ್ಲರೂ ಅದರಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಕಾರ್ಯಕ್ರಮದಲ್ಲಿ ಮುಂಬಯಿ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಪಾಲ್ಗೊಂಡಿಲ್ಲ. ಹೀಗಾಗಿ ಅವರಿಗೆ ಏನಾಗಿದೆ ಎಂಬ ಗೊಂದಲ ಮೂಡಿದೆ.
ಟೈಮ್ಸ್ ಇಂಡಿಯಾದ ವರದಿ ಪ್ರಕಾರ ರೋಹಿತ್ ಶರ್ಮಾ ಅವರಿಗೆ ಸ್ವಲ್ಪ ಮಟ್ಟಿಗೆ ಅನಾರೋಗ್ಯವಿದೆ. ಹೀಗಾಗಿ ಅವರಿಗೆ ಮಾರ್ಚ್ 30ರಂದು ನಡೆದ ಫೋಟೋಶೂಟ್ನಲ್ಲಿ ಪಾಲ್ಗೊಳ್ಳುವುಕ್ಕೆ ಸಾಧ್ಯವಾಗಲಿಲ್ಲ. ಆದರೆ ಮಾರ್ಚ್ 31ರಂದು ನಡೆಯುವ ಪಂದ್ಯದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ರೋಹಿತ್ ಶರ್ಮಾ ಅವರು ಅಸೌಖ್ಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರಿಗೆ ಅಹಮದಾಬಾದ್ಗೆ ಪ್ರಯಾಣ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಅವರು ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯುವ ಮುಂಬಯಿ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಬಲ್ಲ ಮೂಲಗಳ ಪ್ರಕಾರ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಂಬಯಿ ಇಂಡಿಯನ್ಸ್ ತಂಡವನ್ನು ಹೊರತುಪಡಿಸಿ ಉಳಿದ ತಂಡಗಳ ನಾಯಕರು ಪ್ರೆಸ್ಮೀಟ್ ಹಾಗೂ ಫೋಟೊ ಶೂಟ್ನಲ್ಲಿ ಭಾಗಿಯಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ (ಚೆನ್ನೈ ಸೂಪರ್ ಕಿಂಗ್ಸ್), ಹಾರ್ದಿಕ್ ಪಾಂಡ್ಯ (ಗುಜರಾತ್ ಟೈಟನ್ಸ್), ಶಿಖರ್ ಧವನ್ (ಪಂಜಾಬ್ ಕಿಂಗ್ಸ್), ನಿತೀಶ್ ರಾಣಾ (ಕೋಲ್ಕೊತಾ ನೈಟ್ ರೈಡರ್ಸ್), ಕೆಎಲ್ ರಾಹುಲ್ (ಲಖನೌ ಸೂಪರ್ ಜೈಂಟ್ಸ್), ಭುವನೇಶ್ವರ್ ಕುಮಾರ್ (ಸನ್ ರೈಸರ್ಸ್ ಹೈದರಾಬಾದ್), ಫಾಫ್ ಡು ಪ್ಲೆಸಿಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಮತ್ತು ಡೇವಿಡ್ ವಾರ್ನರ್ (ದೆಹಲಿ ಕ್ಯಾಪಿಟಲ್ಸ್) ಫೋಟೋ ಶೂಟ್ನಲ್ಲಿ ಪಾಲ್ಗೊಂಡಿದ್ದರು.
ದಾಖಲೆ ಮಾಡಲು ಸಜ್ಜಾಗಿದ್ದಾರೆ ಧೋನಿ
ಶುಕ್ರವಾರ ಆರಂಭಗೊಳ್ಳಲಿರುವ ಬಹುನಿರೀಕ್ಷಿತ 16ನೇ ಆವೃತ್ತಿಯ ಐಪಿಎಲ್ನ(IPL 2023) ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಸೆಣಸಾಟ ನಡೆಸಲಿದೆ. ಈ ಬಾರಿಯ ಐಪಿಎಲ್ ಬಳಿಕ ಧೋನಿ(ms dhoni) ಅವರು ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡಲಾರಂಭಿಸಿದೆ. ಆದರೆ ಈ ಬಗ್ಗೆ ಧೋನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸದ್ಯಕ್ಕೆ ಧೋನಿ ಅವರು ಹಲವು ದಾಖಲೆಗಳನ್ನು ನಿರ್ಮಿಸುತ್ತ ಚಿತ್ತ ನೆಟ್ಟಿದ್ದಾರೆ.
ಇದನ್ನೂ ಓದಿ : IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ
5000 ರನ್ ಸನಿಹದಲ್ಲಿ ಧೋನಿ
ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರು ಈ ವರೆಗೆ 234 ಪಂದ್ಯಗಳಿಂದ 4978 ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಅವರು 22 ರನ್ ಗಳಿಸಿದರೆ 5 ಸಾವಿರ ರನ್ ಪೂರೈಸಿದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ಬರೆಯಲಿದ್ದಾರೆ. ಇದರ ಜತೆಗೆ 185 ರನ್ ಬಾರಿಸಿದರೆ ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ (5162) ಅವರನ್ನು ಹಿಂದಿಕ್ಕಲಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ 6ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಸಿಕ್ಸರ್ ದಾಖಲೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಯುನಿವರ್ಸ್ ಬಾಸ್ ಖ್ಯಾತಿಯ ವಿಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರಿನಲ್ಲಿದೆ ಅವರು 357 ಸಿಕ್ಸರ್ಗಳನ್ನು ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಸದ್ಯ ಧೋನಿ 229 ಸಿಕ್ಸರ್ ಸಿಡಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಬಾರಿ ಅವರು 23 ಸಿಕ್ಸ್ ಸಿಡಿಸಿದರೆ 250 ಸಿಕ್ಸರ್ ಕ್ಲಬ್ಗೆ ಸೇರುವ ಜತೆಗೆ ಎಬಿಡಿ ಅವರ ದಾಖಲೆಯನ್ನು ಮುರಿಯಲಿದ್ದಾರೆ ಎಬಿಡಿ 251 ಸಿಕ್ಸರ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 240 ಸಿಕ್ಸರ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ ಅವರಿಗೂ ಎಬಿಡಿ ಅವರ ದಾಖಲೆ ಮುರಿಯುವ ಅವಕಾಶವಿದೆ.