ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಡಿಸೆಂಬರ್ 03) ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 6 ರನ್ಗಳ ರೋಚಕ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್ಗೆ 8 ವಿಕೆಟ್ ಕಳೆದುಕೊಂಡು 154 ರನ್ ಗಳಿಸಲಷ್ಟೇ ಶಕ್ತಗೊಂಡು ಸೋಲೊಪ್ಪಿಕೊಂಡಿತು. ಇದರೊಂದಿಗೆ ಸರಣಿ 4-1 ಅಂತರದಿಂದ ಭಾರತದ ಪಾಲಾಯಿತು. ವಿಶ್ವ ಕಪ್ನಲ್ಲಿ ಭಾರತ ತಂಡ ಸೋತಿದ್ದ ಹಿನ್ನೆಲೆಯಲ್ಲಿ ಈ ಸರಣಿ ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನವನ್ನು ಉಂಟು ಮಾಡಿತು.
ಭಾರತದ ಪರ ಸರಣಿಯಲ್ಲಿ ಹಲವರು ಮಿಂಚಿದ್ದಾರೆ. ಅವರಲ್ಲಿ ಪ್ರಮುಖರು ಮಣಿಕಟ್ಟು ಸ್ಪಿನ್ನರ್ ರವಿ ಬಿಷ್ಣೋಯ್. ಐದು ಪಂದ್ಯಗಳಿಂದ 9 ವಿಕೆಟ್ ಪಡೆಯುವ ಮೂಲಕ ಸರಣಿಯ ಪ್ರಮುಖ ವಿಕೆಟ್ ಟೇಕರ್ ಎನಿಸಿಕೊಂಡರು. ಐದನೇ ಟಿ 20 ಐನಲ್ಲಿ ಬಿಷ್ಣೋಯ್ ಮತ್ತೊಮ್ಮೆ ನಾಲ್ಕು ಓವರ್ಗಳ ಸ್ಪೆಲ್ನಲ್ಲಿ 29 ರನ್ಗೆ 2 ವಿಕೆಟ್ ಪಡೆದರು. ಸರಣಿಯಲ್ಲಿ ಅವರ ಅದ್ಭುತ ಪ್ರದರ್ಶನದ ಬಗ್ಗೆ ಶ್ರೀಲಂಕಾದ ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಿಷ್ಣೋಯ್ ಇತರರಿಗಿಂತ ವೇಗವಾಗಿ ಬೌಲಿಂಗ್ ಮಾಡುವ ಅವರ ವಿಶಿಷ್ಟ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಹೊಸ ಪೀಳಿಗೆಯ ಬೌಲರ್
“ಭಾರತವು ಯಾವಾಗಲೂ ಆಯಾಯ ಪೀಳಿಗೆಯಲ್ಲಿ ಉತ್ತಮ ಸ್ಪಿನ್ ಬೌಲರ್ಗಳನ್ನು ಸೃಷ್ಟಿಸುತ್ತದೆ. ಅನಿಲ್ ಕುಂಬ್ಳೆಯಿಂದ ಹಿಡಿದು ರವಿ ಅಶ್ವಿನ್ ವರೆಗೆ ಈಗ ಬಂದಿರುವ ಯುವ ಆಟಗಾರರೆಲ್ಲರೂ ಇದಕ್ಕೆ ಸಾಕ್ಷಿ. ಆದರೆ ಬಿಷ್ಣೋಯ್ ಇತರ ಲೆಗ್ ಸ್ಪಿನ್ನರ್ಗಳಿಗಿಂತ ಭಿನ್ನರಾಗಿದ್ದಾರೆ. ಅವರು ವೇಗವಾಗಿ ಬೌಲಿಂಗ್ ಮಾಡುತ್ತಾರೆ ಮತ್ತು ಅವರು ಚೆಂಡನ್ನು ಸಾಕಷ್ಟು ಸ್ಲೈಡ್ ಮಾಡುತ್ತಾರೆ. ಅಕ್ಷರ್ ಪಟೇಲ್ ಕೂಡ ತುಂಬಾ ವೇಗ ಹಾಗೂ ನಿಖರ ಬೌಲಿಂಗ್ ಮಾಡುತ್ತಾರೆ. ಅವರು ಚೆಂಡನ್ನು ಹೆಚ್ಚು ತಿರುಗಿಸುವುದಿಲ್ಲ. ಅದೇ ರೀತಿ ವಾಷಿಂಗ್ಟನ್ ಕೂಡ ಒಂದೇ ರೀತಿ ಇದ್ದಾರೆ ನಿಖರ ಮತ್ತು ವೇಗವಾಗಿ ಬೌಲಿಂಗ್ ಮಾಡುತ್ತಾರೆ ಎಂದು ಮುರಳೀಧರನ್ ಜಿಯೋ ಸಿನೆಮಾ ಮಾತುಕತೆಯಲ್ಲಿ ಹೇಳಿದರು.
ಇದನ್ನೂ ಓದಿ : Amazon Prime : ಅಮೆಜಾನ್ ಪ್ರೈಮ್ನಲ್ಲಿ ನೋಡಬಹುದು ಟಿ20 ವಿಶ್ವ ಕಪ್
ಟಿ20 ಕ್ರಿಕೆಟ್ನಲ್ಲಿ 34 ವಿಕೆಟ್ ಪಡೆದ ಬಿಷ್ಣೋಯ್
2022ರ ಫೆಬ್ರವರಿಯಲ್ಲಿ ಈಡನ್ ಗಾರ್ಡನ್ಸ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದ 23ರ ಹರೆಯದ ಬಿಷ್ಣೋಯ್ 21 ಪಂದ್ಯಗಳಿಂದ 17.38ರ ಸರಾಸರಿಯಲ್ಲಿ 34 ವಿಕೆಟ್ಗಳನ್ನು ಕಬಳಿಸಿದ್ದಾರೆ. ರಾಜಸ್ಥಾನ ಮೂಲದ ಸ್ಪಿನ್ನರ್ 2022 ರ ಟಿ 20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಸ್ಪರ್ಧೆಯಲ್ಲಿದ್ದರು. ಆದಾಗ್ಯೂ, ಮತ್ತೊಬ್ಬ ಮಣಿಕಟ್ಟು ಸ್ಪಿನ್ನರ್ ಯಜುವೇಂದ್ರ ಚಹಲ್ ಈಗಾಗಲೇ ತಂಡದಲ್ಲಿ ಇರುವುದರಿಂದ ಆಯ್ಕೆದಾರರು ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಮುಂದುವರಿಯಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಟಿ 20 ಐ ಸರಣಿಗೆ ಚಹಲ್ ತಂಡದಲ್ಲಿ ಇಲ್ಲದಿರುವುದರಿಂದ, ಬಿಷ್ಣೋಯ್ ತಮ್ಮ ಗಮನಾರ್ಹ ಫಾರ್ಮ್ ಅನ್ನು ಮುಂದುವರಿಸುವ ಅವಕಾಶ ಹೊಂದಿದ್ದಾರೆ. ಆ ಮೂಲಕ ಮುಂದಿನ ವರ್ಷದ ಟಿ 20 ವಿಶ್ವಕಪ್ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಉತ್ತಮ ಅವಕಾಶ ಪಡೆಯಲಿದ್ದಾರೆ.