ನವ ದೆಹಲಿ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೋಮವಾರ ಪುರುಷರ ಜಾವೆಲಿನ್ ವಿಭಾಗದಲ್ಲಿ ವಿಶ್ವದ ನಂಬರ್ 1 ಸ್ಥಾನಕ್ಕೇರಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದ ಸಾರ್ವಕಾಲಿಕ ಶ್ರೇಷ್ಠ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ಗಳಲ್ಲಿ ಒಬ್ಬರಾದ ಚೋಪ್ರಾ, ಆ್ಯಂಡರ್ಸನ್ ಪೀಟರ್ಸ್ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಅವರ ಗೆಲುವಿನ ಅಭಿಯಾನ ಪ್ರಾರಂಭವಾಗಿತ್ತು.ಅಲ್ಲಿ ಅವರು ಅಥ್ಲೆಟಿಕ್ಸ್ನಲ್ಲಿ ಒಲಿಂಪಿಕ್ ಚಿನ್ನ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಗಮನಾರ್ಹ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದರು. ಈ ಮೂಲಕ ಅವರು ಭಾರತೀಯ ಕ್ರೀಡಾ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದರು.
ವಿಶ್ವದ ನಂಬರ್ ಒನ್ ಸ್ಥಾನ ಅಲಂಕರಿಸಿದ ನೀರಜ್ಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಅಭಿನಂದನೆ ಸಲ್ಲಿಸಿದೆ. ದೇಶದ ಗೌರವವನ್ನು ಉನ್ನತ ಸ್ಥಾನಕ್ಕೇ ಏರಿಸಿದ್ದೀರಿ ಎಂದು ಬರೆದುಕೊಂಡಿದೆ.
ತನ್ನ ಒಲಿಂಪಿಕ್ ಯಶಸ್ಸಿನ ಬಳಿಕ ನೀರಜ್ ಮತ್ತಷ್ಟು ದಾಖಲೆಗಳನ್ನು ಮಾಡಿದರು. ಉತ್ತಮ ಫಾರ್ಮ್ ಕಂಡುಕೊಂಡ ಅರು ಜ್ಯೂರಿಚ್ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್‌ನಲ್ಲಿ 89.63 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದು ಮತ್ತೊಮ್ಮೆ ತಮ್ಮ ಪರಾಕ್ರಮ ಪ್ರದರ್ಶಿಸಿದರು. ಈ ಅಸಾಧಾರಣ ಪ್ರದರ್ಶನದಿಂದ ವಿಶ್ವದ ಜಾವೆಲಿನ್ ಕ್ಷೇತ್ರದಲ್ಲಿ ಅವರ ಖ್ಯಾತಿ ಇನ್ನಷ್ಟು ಹೆಚ್ಚಿತು.
ಇದನ್ನೂ ಓದಿ : Neeraj Chopra: ದೋಹಾ ಡೈಮಂಡ್ ಲೀಗ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ, ಮತ್ತೊಂದು ಮೈಲುಗಲ್ಲು
ದೋಹಾ ಡೈಮಂಡ್ ಲೀಗ್‌ನಲ್ಲಿ 88.67 ಮೀಟರ್ ಎಸೆಯುವ ಮೂಲಕ ಚಿನ್ನ ಗೆದ್ದ ನಂತರ ಚೋಪ್ರಾ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೆ ಏರಿದರು. ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಜಾಕುಬ್ ವಾಡ್ಲೆಜ್ಚ್ 88.63 ಮೀಟರ್ ಎಸೆಯುವ ಮೂಲಕ 2ನೇ ಸ್ಥಾನ ಪಡೆದರು. ಕಳೆದ ವರ್ಷ ದೋಹಾದಲ್ಲಿ ನಡೆದ ಸ್ಪರ್ಧೆಯಲ್ಲಿ 93 ಮೀಟರ್ ದೂರ ಎಸೆದಿದ್ದ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ 85.88 ಮೀಟರ್ ಎಸೆಯುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿದ್ದರು.
ಸ್ಪರ್ಧೆಯ ಬಳಿಕ ಮಾತನಾಡಿದ್ದ ನೀರಜ್, 2024ರಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವುದೇ ನನ್ನ ಗುರಿ. ಅದಕ್ಕಾಗಿ ಸ್ಥಿರತೆ ಕಾಯ್ದುಕೊಳ್ಳುತ್ತೇನೆ ಎಂದು ಹೇಳಿದ್ದರು.
ಇದು ತುಂಬಾ ಕಠಿಣ ಗೆಲುವು. ನನಗೆ ಸಂತೋಷವಾಗಿದೆ. ಇದು ಉತ್ತಮ ಆರಂಭ. ಮುಂದಿನ ಸ್ಪರ್ಧೆಗಳಲ್ಲಿ ಮೊದಲ ಸ್ಥಾನಕ್ಕೆ ಬರಲು ಯತ್ನಿಸುತ್ತೇನೆ ಎಂದು ಚೋಪ್ರಾ ದೋಹಾದಲ್ಲಿ ಜಯಗಳಿಸಿದ ಬಳಿಕ ಹೇಳಿದ್ದರು.