Site icon Vistara News

Javelin Throw : ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದ ನೀರಜ್‌ ಚೋಪ್ರಾ

national games

ನವ ದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕ ಗೆದ್ದಿರುವ ಭಾರತದ Javelin Throw ಚಾಂಪಿಯನ್‌ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್‌ ಲೀಗ್‌ನಲ್ಲಿ 89.94 ಮೀಟರ್‌ ದೂರ ಜಾವೆಲಿನ್ ಎಸೆದು ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ. ಆದಾಗ್ಯೂ ಅವರು ಸ್ಪರ್ಧೆಯಲ್ಲಿ ೨ನೇ ಸ್ಥಾನ ಪಡೆಯಲಷ್ಟೇ ಶಕ್ತಗೊಂಡರು.

ಸ್ಪರ್ಧೆಯ ಮೊದಲ ಪ್ರಯತ್ನದಲ್ಲೇ 89.94 ದೂರ ಜಾವೆಲಿನ್‌ ಎಸೆದ ಬಂಗಾರದ ಹುಡುಗ ಚೋಪ್ರಾ, ಜೂನ್‌ ೧೪ರಂದು ಫಿನ್ಲೆಂಡ್‌ನ ಟುರ್ಕುನಲ್ಲಿ ನಡೆದ ಪಾವೊ ನುರ್ಮಿ ಗೇಮ್ಸ್‌ನಲ್ಲಿ ತಾವೇ ಸೃಷ್ಟಿಸಿದ್ದ 89.30 ದೂರದ ರಾಷ್ಟ್ರೀಯ ದಾಖಲೆಯನ್ನು ಅಳಿಸಿದರು. ಅಲ್ಲದೆ ಅವರು ೬ ಸೆಂಟಿಮೀಟರ್‌ ಹಿನ್ನಡೆಯೊಂದಿಗೆ ೯೦ ದೂರ ಎಸೆದು ದಾಖಲೆ ಸೃಷ್ಟಿಸುವ ಅವಕಾಶ ಕಳೆದುಕೊಂಡರು. ವಿಶ್ವ ಚಾಂಪಿಯನ್‌ ಆಂಡರ್ಸನ್‌ ಪೀಟರ್‌ 90.31 ಮೀಟರ್‌ ದೂರ ಎಸೆಯುವ ಮೂಲಕ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡರು. ಜರ್ಮನಿಯ ಜೂಲಿಯನ್‌ ವೆಬರ್‌ ೮೯.೦೯ ಮೀಟರ್‌ ದೂರಕ್ಕೆ ಎಸೆದು ಮೂರನೇ ಸ್ಥಾನ ಪಡೆದುಕೊಂಡರೆ, ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಜೆಕ್‌ ಗಣರಾಜ್ಯದ ಜಾವೆಲಿನ್‌ ಎಸೆತಗಾರ ಜಾಕುಬ್‌ ವಾದ್ಲೆ (88.59 ಮೀಟರ್‌) ನಾಲ್ಕನೇ ಸ್ಥಾನ ಪಡೆದುಕೊಂಡರು.

೨೪ ವರ್ಷದ ಚೋಪ್ರಾ ಅವರು ನಂತರದ ಐದು ಪ್ರಯತ್ನಗಳಲ್ಲಿ 84.37, 87.46, 84.77, 86.67, 86.84 ಮೀಟರ್‌ ದೂರ ಜಾವೆಲಿನ್‌ ಎಸೆದರು.

“ಮೊದಲ ಎಸೆತದಲ್ಲಿ ೮೯. ೯೪ ಮೀಟರ್‌ ಸಾಧನೆ ಮಾಡುವ ಮೂಲಕ ಖುಷಿಯಾಯಿತಲ್ಲದೆ, ನಂತರದ ಎಸೆತಗಳಲ್ಲಿ ೯೦ ಮೀಟರ್‌ ದಾಟಬಹುದೆನ್ನುವ ಭರವಸೆ ಮೂಡಿತು. ಆದರೆ, ಅದು ಸಾಧಿಸಲಿಲ್ಲ. ಹಾಗೆಂದು ಬೇಸರ ಮಾಡಿಕೊಂಡಿಲ್ಲ. ಹಾಲಿ ಋತುವಿನಲ್ಲಿ ಹಲವಾರು ಸ್ಪರ್ಧೆಗಳಿದ್ದು ಸಾಧನೆ ಉತ್ತಮಪಡಿಸಿಕೊಳ್ಳುವ ವಿಶ್ವಾಸವಿದೆ,ʼʼ ಎಂದು ಚೋಪ್ರಾ ಸ್ಪರ್ಧೆಯ ಬಳಿಕ ಹೇಳಿದ್ದಾರೆ.

ಚೋಪ್ರಾ ಅವರ ಮೊದಲ ಎಸೆತವು ಡೈಮಂಡ್‌ ಲೀಗ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಡುವ ಭರವಸೆ ಮೂಡಿಸಿತ್ತು. ಆದರೆ, ನಂತರದ ಎಸೆತಗಳಲ್ಲಿ ಉತ್ತಮ ಫಲಿತಾಂಶ ಮೂಡಿಬರಲಿಲ್ಲ. ಆದಾಗ್ಯೂ ನೀರಜ್‌, ಡೈಮಂಡ್‌ ಲೀಗ್‌ನಲ್ಲಿ ಪ್ರಶಸ್ತಿ ವೇದಿಕೆಯೇರಿದ ಭಾರತದ ಎರಡನೇ ಅಥ್ಲೀಟ್‌ ಎಂಬ ಖ್ಯಾತಿಗೆ ಪಾತ್ರರಾದರು. ೨೦೧೪ರಲ್ಲಿ ಭಾರತದ ಡಿಸ್ಕಸ್‌ ಎಸೆತಗಾರ ವಿಕಾಸ್‌ ಗೌಡ (೨೦೧೨ರಲ್ಲಿ ನ್ಯೂಯಾರ್ಕ್‌ ಕೂಟದಲ್ಲಿ ಎರಡನೇ ಸ್ಥಾನ ) ಹಾಗೂ (೨೦೧೪ರ ದೋಹಾ ಕೂಟದಲ್ಲಿ ಮೂರನೇ ಸ್ಥಾನ) ಎರಡು ಬಾರಿ ಪ್ರಶಸ್ತಿ ವೇದಿಕೆಯನ್ನೇರಿದ್ದರು.

ಚೋಪ್ರಾ ೨೦೧೮ರ ಬಳಿಕ ಮೊದಲ ಬಾರಿಗೆ ಡೈಮಂಡ್‌ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದು, ೨೦೧೭ರಲ್ಲಿ ಮೂರು ಬಾರಿ ಹಾಗೂ ೨೦೧೮ರಲ್ಲಿ ನಾಲ್ಕು ಸೇರಿದಂತೆ ಒಟ್ಟಾರೆ ಎಂಟು ಬಾರಿ ಪ್ರತಿಷ್ಠಿತ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಅದರಲ್ಲಿ ೨೦೧೮ ಜ್ಯೂರಿಚ್‌ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

ನೀರಜ್‌ ಚೋಪ್ರಾ ಜುಲೈ 15ರಿಂದ 24ರವರೆಗೆ ನಡೆಯಲಿರುವ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲ್ಲಿದ್ದು, ಆಗಸ್ಟ್‌ ೧೦ರಿಂದ ಮೊನಾಕೊದಲ್ಲಿ ನಡೆಯಲಿರುವ ಡೈಮಂಡ್‌ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Javelin Throw: ಚಿನ್ನದ ಹುಡುಗ ನೀರಜ್‌ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ

Exit mobile version