ನವ ದೆಹಲಿ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭಾರತದ ಜಾವೆಲಿನ್ ಎಸೆಗಾರ ನೀರಜ್ ಚೋಪ್ರಾ (Neeraj Chopra) ಎಲ್ಲೆಲ್ಲೂ ಸಂಚಲನ ಮೂಡಿಸುತ್ತಿದ್ದಾರೆ. ಭಾರತದ ಕ್ರೀಡಾ ಐಕಾನ್ ಆಗಿ ಪರಿವರ್ತನೆಗೊಂಡಿರುವ ಅವರು ಐಷಾರಾಮಿ ಕಾರುಗಳನ್ನು ಪ್ರೇಮಿಯೂ ಎನಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನೀರಜ್ ತಮ್ಮ ಕಾರು ಸಂಗ್ರಹಕ್ಕೆ ಮತ್ತೊಂದು ವಿಶೇಷ ಕಾರನ್ನು ಸೇರಿಸಿದ್ದಾರೆ. ಅದುವೇ ಹೊಚ್ಚ ಹೊಸ ಕಪ್ಪು ರೇಂಜ್ ರೋವರ್ ವೆಲಾರ್ (Range Rover velar) ಎಸ್ಯುವಿ. ಒಲಿಂಪಿಕ್ ಚಿನ್ನದ ಪದಕ ವಿಜೇತರು ತಮ್ಮ ಹೊಸ ರೇಂಜ್ ರೋವರ್ ವೆಲಾರ್ ಜತೆಗೆ ಇರುವ ಚಿತ್ರ ಸೋಶಿಯಲ್ ಮೀಡಿಯಾಗಳಲ್ಲಿ ಓಡಾಡಿದೆ.
ನೀರಜ್ ಚೋಪ್ರಾ ತಮ್ಮ ಈಗಾಗಲೇ ಐಷಾರಾಮಿ ಕಾರು ಸಂಗ್ರಹಕ್ಕೆ ಅದ್ಭುತ ಸೇರ್ಪಡೆ ಎಂಬಂತೆ ಆಕರ್ಷಕ ಕಪ್ಪು ರೇಂಜ್ ರೋವರ್ ವೆಲಾರ್ ಎಸ್ಯುವಿಯನ್ನು ಮನೆಗೆ ತಂದಿದ್ದಾರೆ. ಭಾರತೀಯ ಕ್ರೀಡಾಪಟುವಿನ ಈ ಖರೀದಿಯು ಹೆಚ್ಚಿನ ಗಮನವನ್ನು ಸೆಳೆದಿದೆ. ಈ ಎಸ್ಯುವಿಯ ಚಿತ್ರವನ್ನು ಲ್ಯಾಂಡ್ ರೋವರ್ ಮಾಲ್ವಾ ಆಟೋಮೋಟಿವ್ಸ್ ಹಂಚಿಕೊಂಡಿದೆ. ಲ್ಯಾಂಡ್ ರೋವರ್ – ಮಾಲ್ವಾ ಆಟೋಮೋಟಿವ್ಸ್ ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ “ನಾವು ಶ್ರೀ ನೀರಜ್ ಚೋಪ್ರಾ ಅವರನ್ನು ರೇಂಜ್ ರೋವರ್ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಮತ್ತು ಅವರ ಹೊಸ ರೇಂಜ್ ರೋವರ್ ವೆಲಾರ್ಗೆ ಅಭಿನಂದಿಸುತ್ತೇವೆ” ಎಂದು ಬರೆದುಕೊಂಡಿದೆ.
ನೀರಜ್ ಚೋಪ್ರಾ ಅವರ ಐಷಾರಾಮಿ ಕಾರುಗಳ ಮೇಲಿನ ಪ್ರೀತಿ ಎಲ್ಲರಿಗೂ ತಿಳಿದಿದೆ. ಹೊಸ ರೇಂಜ್ ರೋವರ್ ವೆಲಾರ್ ಜೊತೆಗೆ ಅವರ ಬಳಿ ರೇಂಜ್ ರೋವರ್ ಸ್ಪೋರ್ಟ್ ಮತ್ತು ಇತರ ಹಲವಾರು ಹೈ ಎಂಡ್ ಕಾರುಗಳಿವೆ. ನೀಲಿ ಬಣ್ಣದ ಫೋರ್ಡ್ ಮಸ್ಟಾಂಗ್ನೊಂದಿಗೆ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ನೀರಜ್ ಅವರ ಮಸ್ಟಾಂಗ್ ಸಕೆಂಡ್ ಹ್ಯಾಂಡ್ ಕಾರು ಎಂದು ಹೇಳಲಾಗಿದೆ.
ಹೊಸ ಮಾಡೆಲ್
ರೇಂಜ್ ರೋವರ್ ವೆಲಾರ್ ಅನ್ನು ಅವರು ಇತ್ತೀಚೆಗೆ ಬಿಡುಗಡೆಗೊಂಡಿದೆ. ಬ್ರಿಟಿಷ್ ಕಂಪನಿಯು ಇದನ್ನು ವಿನ್ಯಾಸಗೊಳಿಸಿದೆ, ಇದು ಶ್ರೀಮಂತಿಕೆ, ಸಾಮರ್ಥ್ಯ ಮತ್ತು ಐಷಾರಾಮಿ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ರೇಂಜ್ ರೋವರ್ ಇವೊಕ್ ಮತ್ತು ಹೆಚ್ಚು ದುಬಾರಿ ರೇಂಜ್ ರೋವರ್ ಸ್ಪೋರ್ಟ್ ಮತ್ತು ವೋಗ್ ಮಾದರಿಗಳ ನಡುವೆ ಸ್ಥಾನ ಪಡೆದಿದೆ. ಇದರ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 78.87 ರೂಪಾಯಿಗಳು. ಆದಾಗ್ಯೂ, ನೀರಜ್ ಚೋಪ್ರಾ ಪಾವತಿಸಿದ ನಿಖರವಾದ ಬೆಲೆ ಇನ್ನೂ ತಿಳಿದಿಲ್ಲ.
ಪವರ್ ಟ್ರೇನ್ ಹೇಗಿದೆ
ಭಾರತದಲ್ಲಿ ರೇಂಜ್ ರೋವರ್ ವೆಲಾರ್ ಅನ್ನು ವಿಭಿನ್ನ ಚಾಲನಾ ಆದ್ಯತೆಗಳಿಗೆ ಅನುಗುಣವಾಗಿ ಮೂರು ಎಂಜಿನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಕಡಿಮೆ ವೇರಿಯೆಂಟ್ 179 ಬಿಎಚ್ಪಿ ಪವರ್ ಬಿಡುಗಡೆ ಮಾಡುವ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅಥವಾ 250 ಬಿಎಚ್ಪಿ ಹೊಂದಿರುವ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿವೆ. ಹೆಚ್ಚಿನ ಪವರ್ ಬಯಸುವವರಿಗೆ ಟಾಪ್-ಎಂಡ್ ವೇರಿಯೆಂಟ್ಗಳು 296 ಬಿಎಚ್ಪಿ 3.0-ಲೀಟರ್ ವಿ 6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿವೆ. ಝಡ್ಎಫ್ ನಿಂದ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಮತ್ತು ಟೆರೈನ್ ರೆಸ್ಪಾನ್ಸ್ ಸಮೇತ ಆಲ್-ವ್ಹೀಲ್ ಡ್ರೈವ್ ಆಯ್ಕೆಯಿದೆ.
ಇದನ್ನೂ ಓದಿ : Porsche Car : ಈ ಬಾಲಿವುಡ್ ನಟನ ಬಳಿ ಒಂದಲ್ಲ, ಎರಡಲ್ಲ, ಮೂರು ಪೋರ್ಶೆ ಕಾರುಗಳಿವೆ
ಫೀಚರ್ಗಳೇನು?
ರೇಂಜ್ ರೋವರ್ ವೆಲಾರ್ ಐಷಾರಾಮಿ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ವೈಶಿಷ್ಟ್ಯಗಳನ್ನು ಹೊಂದಿದೆ. ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ ಲ್ಯಾಂಪ್ಗಳು, ಯೂಸರ್ ಫ್ರೆಂಡ್ಲಿ ಟಚ್ ಸ್ಕ್ರೀನ್ ಇಂಟರ್ಫೇಸ್ ಹೊಂದಿರುವ ಟಚ್ ಪ್ರೊ ಡ್ಯುಯೊ ಇನ್ಫೋಟೈನ್ ಮೆಂಟ್ ಸಿಸ್ಟಂ, ಹಿಲ್ ಡಿಸೆಂಟ್ ಕಂಟ್ರೋಲ್, ಅಡಾಪ್ಟಿವ್ ಏರ್ ಸಸ್ಪೆಂಷನ್, ಮೆಮೊರಿ ಫಂಕ್ಷನ್ ಹೊಂದಿರುವ ವೆಂಟಿಲೇಟೆಡ್ ಫ್ರಂಟ್ ಸೀಟ್ಗಳು ಮತ್ತು ಆಕ್ಟಿವ್ ರಿಯರ್ ಲಾಕಿಂಗ್ ಇ-ಡಿಫರೆನ್ಷಿಯಲ್ ಅನ್ನು ಹೊಂದಿದೆ. ಹೊಸ ಪಿವಿ ಪ್ರೊ ಇನ್ಫೋಟೈನ್ ಮೆಂಟ್ ಸಿಸ್ಟಂ ಗಮನಾರ್ಹ ಸೇರ್ಪಡೆಯಾಗಿದ್ದು, 10 ಇಂಚಿನ ಟಚ್ ಸ್ಕ್ರೀನ್ ಮತ್ತು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋದಂತಹ ಸುಧಾರಿತ ಕನೆಕ್ಟಿವಿಟಿ ಆಯ್ಕೆಗಳನ್ನು ನೀಡುತ್ತದೆ.
ರೇಂಜ್ ರೋವರ್ ವೆಲಾರ್ನಿಂದ ಆಕರ್ಷಿತರಾದ ಸೆಲೆಬ್ರಿಟಿ ನೀರಜ್ ಚೋಪ್ರಾ ಮಾತ್ರವಲ್ಲ. ಜನಪ್ರಿಯ ನಟಿ ಕೃತಿ ಕರಬಂದ, ಸ್ಟ್ಯಾಂಡ್-ಅಪ್ ನಟ ಝಾಕಿರ್ ಖಾನ್ ಮತ್ತು ನಟಿ ಅವ್ನೀತ್ ಕೌರ್ ವೆಲಾರ್ ಕಾರುಗಳನ್ನು ಹೊಂದಿದ್ದಾರೆ. ನಟ ಪ್ರಭಾಸ್ ತಮ್ಮ ಜಿಮ್ ತರಬೇತುದಾರ ರೇಂಜ್ ರೋವರ್ ವೆಲಾರ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದರು.