ನವದೆಹಲಿ: ಭಾರತದ ತಾರಾ ಜಾವೆಲಿನ್ ಎಸೆತಗಾರ, ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ಅವರು ಇದೇ ಮೇ ತಿಂಗಳ 12 ರಿಂದ 15 ರವರೆಗೆ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರೀಯ ಫೆಡರೇಶನ್ ಕಪ್‌ನಲ್ಲಿ(Federation Cup) ಭಾಗವಹಿಸಲಿದ್ದಾರೆ. ಈ ಮೂಲಕ ಮೂರು ವರ್ಷಗಳ ಬಳಿಕ ದೇಶೀಯ ಕ್ರೀಡಾಕೂಟದಲ್ಲಿ ಕಣಕ್ಕಿಳಿಯಲಿದ್ದಾರೆ.
“ನೀರಜ್ ಜೋಪ್ರಾ ಮತ್ತು ಕಿಶೋರ್ ಕುಮಾರ್ ಜೆನಾ ಅವರು ಮೇ 12 ರಿಂದ ಭುವನೇಶ್ವರದಲ್ಲಿ ಪ್ರಾರಂಭವಾಗುವ ದೇಶೀಯ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾರೆ” ಎಂದು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಬುಧವಾರ ಟ್ವೀಟ್ ಮಾಡಿ ಉಭಯ ಕ್ರೀಡಾಪಟುಗಳ ಉಪಸ್ಥಿತಿಯನ್ನು ಖಚಿತಪಡಿಸಿದೆ. ಇದೇ ಜುಲೈ 26ರಿಂದ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಅಭ್ಯಾಸ ನಡೆಸುವ ನಿಟ್ಟಿನಲ್ಲಿ ಇದೊಂದು ಉತ್ತಮ ವೇದಿಕೆಯಾಗಿದೆ.
ಈ ಟೂರ್ನಿಗೂ ಮುನ್ನ ನೀರಜ್ ಮತ್ತು 28 ವರ್ಷದ ಕಿಶೋರ್ ಜೆನಾ ಮೇ 10 ರಂದು ದೋಹಾ ಡೈಮಂಡ್ ಲೀಗ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಕಿಶೋರ್ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ನೀರಜ್ ಚಿನ್ನದ ಪದಕ ಜಯಿಸಿದ್ದರು. ಚೋಪ್ರಾ ಅವರು ದೇಶೀಯ ಟೂರ್ನಿಯಲ್ಲಿ ಕೊನೆಯ ಬಾರಿಗೆ ಸ್ಪರ್ಧಿಸಿದ್ದು ಮಾರ್ಚ್ 17, 2021 ರಲ್ಲಿ. ಈ ವೇಳೆ ಅವರು 87.80 ಮೀ ಎಸೆಯುವ ಮೂಲಕ ಚಿನ್ನ ಗೆದಿದ್ದರು. ಇದಾದ ಬಳಿಕ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಸ್ಶಿಪ್, ಡೈಮಂಡ್ ಲೀಗ್ನಂತಹ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದ ಕಾರಣ ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ Neeraj Chopra: ಪ್ಯಾರಿಸ್ ಒಲಿಂಪಿಕ್ಸ್ಗೆ ಮುನ್ನ 90 ಮೀಟರ್ ಗಡಿ ದಾಟುವೆ; ನೀರಜ್ ಚೋಪ್ರಾ ವಿಶ್ವಾಸ
26 ವರ್ಷದ ನೀರಜ್ ಕಳೆದ ವರ್ಷದ ಏಷ್ಯನ್ ಗೇಮ್ಸ್ ಬಳಿಕ ಯಾವುದೇ ಟೂರ್ನಿಯಲ್ಲಿಯೂ ಕಣಕ್ಕಿಳಿದಿಲ್ಲ. ಇದೀಗ ಮೇ 10ರಂದು ದೋಹಾ ಡೈಮಂಡ್ ಲೀಗ್‌ನಲ್ಲಿ ಮರಳಿ ಕಣಕ್ಕಿಳಿಯಲಿದ್ದಾರೆ. ಬಳಿಕ ಜೂನ್ 18ರಂದು ಫಿನ್ಲ್ಯಾಂಡ್ನ ಪಾವೊ ನುರ್ಮಿ ಗೇಮ್ಸ್ನಲ್ಲೂ ಸ್ಪರ್ಧಿಸಲಿದ್ದಾರೆ. ಈ ಟೂರ್ನಿಯಲ್ಲಿ 90 ಮೀ. ಗಡಿ ದಾಟಲು ಅವರು ಪಣ ತೊಟ್ಟಿದ್ದಾರೆ.
ನೀರಜ್ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಒಲಿಂಪಿಕ್ಸ್‌ನ ಟ್ರ್ಯಾಕ್ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ನೀರಜ್ ಈ ಬಾರಿಯೂ ಚಿನ್ನ ಗೆಲ್ಲಲಿ ಎನ್ನುವುದು ಶತ ಕೋಟಿ ಭಾರತೀಯರ ಆಶಯ ಮತ್ತು ಹಾರೈಕೆಯಾಗಿದೆ. 2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಅತಿ ದೊಡ್ಡ ಮತ್ತು ಮಹತ್ವದ ಕ್ರೀಡಾಕೂಟವಾಗಿದೆ. ಸುಮಾರು 200 ದೇಶಗಳ 10,000 ಕ್ರೀಡಾಪಟುಗಳು ಒಲಿಂಪಿಕ್ ವೈಭವಕ್ಕಾಗಿ ಸ್ಪರ್ಧಿಸಲಿದ್ದಾರೆ. ಪ್ಯಾರಿಸ್ ತನ್ನ ಮೂರನೇ ಬಾರಿಗೆ ಆತಿಥೇಯ ನಗರವಾಗಿ (1900 ಮತ್ತು 1924 ರ ನಂತರ) ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲಿದೆ. ಜುಲೈ 26 ರಿಂದ ಆಗಸ್ಟ್ 11ರ ತನಕ ಟೂರ್ನಿ ನಡೆಯಲಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.